ಕಲೆಗಿಂತ ಈಗ ಕಾಸು ಮುಖ್ಯ ; 'ಪೆದ್ದಿ'ಯಲ್ಲಿ ಜಾಹ್ನವಿ ಕಪೂರ್ ದೇಹಸಿರಿ ಪ್ರದರ್ಶನ, ನಿತ್ಯಾ ಮೆನನ್ ಪ್ರತಿಕ್ರಿಯೆ
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ.
ಆದರೆ, ಕಾಲ ಎಷ್ಟೇ ಬದಲಾದರು ಕೂಡ ನಾಯಕಿಯರು ಅಂದರೆ ಕೇವಲ ಗ್ಲ್ಯಾಮರ್ ಗೊಂಬೆ ಎನ್ನುವ ಮನಸ್ಥಿತಿ ಮಾತ್ರ ಮರೆಯಾಗಿಲ್ಲ. ನಿಜ. ಇಲ್ಲಿಯೂ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಾವೆ. ಆದರೂ ಕೂಡ ಅಲ್ಲೊಬ್ಬರು.. ಇಲ್ಲೊಬ್ಬರು.. ಹೊರತು ಪಡಿಸಿದರೆ ಬಹುತೇಕರ ದೃಷ್ಟಿಯಲ್ಲಿ ಚಿತ್ರದ ಕಥಾನಾಯಕಿಯರು ಅಂದರೆ ಅವರು ಮರ ಸುತ್ತಲು ಮಾತ್ರ ಲಾಯಕ್ಕು.

ಚಿತ್ರರಂಗದವರ ಈ ಧೋರಣೆಗೆ ಸದ್ಯದ ಉದಾಹರಣೆಯೆಂಬಂತೆ ''ಪೆದ್ದಿ'' ವಿವಾದ ಭುಗಿಲೆದ್ದಿದೆ. 'ಸೊಂಟದ ವಿಷಯ ಬೇಡವೋ ಶಿಷ್ಯ' ಎಂಬ ಮಾತನ್ನು ಮರೆತು ನಿರ್ದೇಶಕ ಬುಚ್ಚಿ ಬಾಬು ಇಡೀ ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರ ದೇಹಸಿರಿಯ ಮೇಲೆ ಮಾತ್ರ ಕ್ಯಾಮರಾ ಫೋಕಸ್ ಮಾಡಿದ್ದಾರೆ.
ಬುಚ್ಚಿ ಬಾಬು ಮಾಡಿರುವ ಈ ಕೆಲಸಕ್ಕೆ ಸದ್ಯ ಆಕ್ರೋಶ ವ್ಯಕ್ತವಾಗುತ್ತಿದೆ. ವಿವಾದಕ್ಕೆ ಕಾರಣವಾಗಿದೆ. ಇದು ಸಾಲದು ಎಂಬಂತೆ ''ರೆಕಮೆಂಡೇಷನ್ ಕಮ್ಯುನಿಟಿ'' ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಕುರಿತು ಹಂಚಿಕೊಳ್ಳಲಾದ ಆಕ್ರೋಶ ಭರಿತ ಪೋಸ್ಟ್‌ವೊಂದಕ್ಕೆ ಖುದ್ದು ಜಾಹ್ನವಿ ಕಪೂರ್ ಲೈಕ್ ಮಾಡಿದ್ಧಾರೆ ಎನ್ನುವ ಸುದ್ದಿ ಕೂಡ ಇದೆ. ಇದರಿಂದ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಇನ್ನು ಕೇವಲ ಜನಸಾಮಾನ್ಯರು ಮಾತ್ರವಲ್ಲ. ಚಿತ್ರರಂಗದಲ್ಲಿಯೇ ಹಲವರು ''ಪೆದ್ದಿ'' ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಗಾಯಕಿ ಸುಮಂಗಲಿ, ಆಶಿಕಾ ರಂಗನಾಥ್, ಡಿಂಪಲ್ ಹಯಾತಿ ಸೇರಿ ಹಲವರು ಈ ವಿಚಾರದಲ್ಲಿ ಜಾಹ್ನವಿ ಕಪೂರ್ ಅವರನ್ನು ದೂಷಿಸಬೇಡಿ ಎಂದು ಹೇಳಿದ್ಧಾರೆ. ಚಿತ್ರತಂಡದ ವಿರುದ್ಧವೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿತ್ಯಾ ಮೆನನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ''ಪೆದ್ದಿ'' ತಂಡದ ವಿರುದ್ದ ಕಿಡಿ ಕಾರದೇ ನಾಯಕಿಯರಿಗೆ ಕಿವಿ ಮಾತನ್ನು ಹೇಳಿದ್ದಾರೆ. ಈ ಕುರಿತು ''ವೈರಟಿ ಇಂಡಿಯಾ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿತ್ಯಾ ಮೆನನ್, ಮಹಿಳೆಯರನ್ನು ವಸ್ತುಗಳಂತೆ ಬಳಸುವ ಪ್ರವೃತ್ತಿ ಈಗ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

ಇದು ಕೇವಲ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಇಡೀ ಮನರಂಜನಾ ಉದ್ಯಮವೇ ಈ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿರುವ ನಿತ್ಯಾ ಮೆನನ್ ಇದೆಲ್ಲದಕ್ಕೂ ಕಲೆಗಿಂತ ಕಾಸು ಮುಖ್ಯ ಎನ್ನುವ ಧೋರಣೆಯೇ ಪ್ರಮುಖ ಕಾರಣ ಎಂದಿದ್ದಾರೆ.
ಚಿತ್ರದ ವ್ಯಾಪಾರ-ವ್ಯವಹಾರದ ಕಡೆ ಗಮನ ಜಾಸ್ತಿ ಇದ್ದಾಗ, ಇಂತಹ ತಂತ್ರಗಳನ್ನು ಹೆಣೆಯಲಾಗುತ್ತೆ ಎಂದು ಹೇಳಿರುವ ನಿತ್ಯಾ ಮೆನನ್, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಅಗತ್ಯ ಇಲ್ಲದಿದ್ದರೂ ಅಶ್ಲೀಲತೆ ಮತ್ತು ಐಟಂ ಹಾಡುಗಳನ್ನು ತೂರುಕಲಾಗುತ್ತೆ ಎಂದು ಹೇಳಿದ್ಧಾರೆ. ತಪ್ಪೆಂದು ಗೊತ್ತಿದ್ದರೂ ವ್ಯಾಪರಕ್ಕಾಗಿ ಈ ದಾರಿಯನ್ನು ಹಿಡಿಯುತ್ತಾರೆ ಎಂದಿದ್ಧಾರೆ.
ಮುಂದುವರೆದು ನಮ್ಮ ಇತಿಮಿತಿಗಳೆಲ್ಲವೂ ನಮಗೆ ಗೊತ್ತಿರಬೇಕು, ನಾವೇ ಒಂದು ಬೌಂಡರಿ ಹಾಕಿಕೊಳ್ಳಬೇಕು ಎಂದು ಹೇಳಿರುವ ನಿತ್ಯಾ ಮೆನನ್, ದೃಶ್ಯ ಅಸಹಜವಾಗಿದೆ ಎಂಬ ಭಾವನೆ ಬಂದಾಗ ಖಂಡತುಂಡವಾಗಿ ಅಂತಹ ದೃಶ್ಯಗಳನ್ನು ಮಾಡುವುದಿಲ್ಲ ಎಂದು ನಿರಾಕರಿಸಬೇಕು ಎಂದು ಹೇಳಿದ್ದಾರೆ. ನಿರ್ಮಾಪಕರು ಹೇಳಿದಂತೆ ಕೇಳದೇ ನಾವು ಧ್ವನಿ ಎತ್ತಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕವಾಗಿ ನಾನು ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಲು ಒಪ್ಪುವುದಿಲ್ಲ, ನನ್ನ ಸಿದ್ದಾಂತಗಳನ್ನು ಗಾಳಿಗೆ ತೂರಿ ಅವಕಾಶ ಗಿಟ್ಟಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ ಎಂದು ಹೇಳಿರುವ ನಿತ್ಯಾ ಮೆನನ್ ನನ್ನ ಆಯ್ಕೆ, ನನ್ನ ಜವಾಬ್ಧಾರಿ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ.


Click it and Unblock the Notifications