ವಿರೋಷ್ ಮದುವೆ ಖರ್ಚು ಎಷ್ಟು? ರಶ್ಮಿಕಾಗೆ ₹90 ಕೋಟಿ ಗಿಫ್ಟ್ ಕೊಟ್ಟಿದ್ದು ನಿಜಾನಾ? ವಿಜಯ್ ಸೋದರ ಮಾವ ಮಾತು
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಕನಸಿನಂತೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬೆನ್ನಲ್ಲೇ ಜೋಡಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಫೆಬ್ರವರಿ 16ರಂದು ಉದಯ್‌ಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಜೋಡಿ ಬಳಿಕ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಾಚರಣೆ ನಡೆಸಿದರು.
ತೆಲಂಗಾಣ ಸಂಪ್ರದಾಯದಂತೆ ಮಾತ್ರವಲ್ಲದೇ ಕೊಡವ ಶೈಲಿಯಲ್ಲಿ ಕೂಡ ಮದುವೆ ಶಾಸ್ತ್ರಗಳು ನಡೆದವು. ಮದುವೆ ಕಾರ್ಯಕ್ರಮಗಳಿಗೆ ವಿರೋಷ್ ಧರಿಸಿದ ಕಾಸ್ಟ್ಯೂಮ್, ಆಭರಣ ಎಲ್ಲದರ ಬಗ್ಗೆ ಚರ್ಚೆ ನಡೀತು. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ. ಮದುವೆ ಬೇಕಾ? ಕರಿಯರ್ ಮುಖ್ಯ ಅಂತೆಲ್ಲಾ ಗೊಂದಲದಲ್ಲಿದ್ದ ವಿಜಯ್ ಮದುವೆ ಆಗಿ ಗೃಹಸ್ಥಾಶ್ರಮ ಸೇರಿದ್ದಾರೆ.

ವಿಜಯ್ ಸೋದರಮಾವ ನಿರ್ಮಾಪಕ ಯಶ್ ರಂಗಿನೇನಿ ಮುಂದೆ ನಿಂತು ಮದುವೆ ಕೆಲಸಗಳನ್ನು ನೋಡಿಕೊಂಡಿದ್ದಾರೆ. ವಿಜಯ್ ಹೀರೊ ಆಗಿ ಸಕ್ಸಸ್ ಕಂಡ 'ಪೆಳ್ಳಿ ಚೂಪುಲು' ಚಿತ್ರವನ್ನು ಇವರು ನಿರ್ಮಾಣ ಮಾಡಿದ್ದರು. 'ಡಿಯರ್ ಕಾಮ್ರೆಡ್' ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಇಬ್ಬರ ನಡುವೆ ಲವ್ ಆಗಿತ್ತು ಎಂದು ಯಶ್ ರಂಗಿನೇನಿ ಹೇಳಿದ್ದಾರೆ. ಮದುವೆ ಬೇಡ ಎನ್ನುತ್ತಿದ್ದ ವಿಜಯ್ ಹಸೆಮಣೆ ಏರಿದ್ದು ಬಹಳ ಖುಷಿಯಾಗಿದೆ ಎಂದು iDream TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
ವಿಜಯ್- ರಶ್ಮಿಕಾ ಮದುವೆಗೆ 15 ಕೋಟಿ ರೂ. ಖರ್ಚು ಆಗಿದ್ದು ನಿಜಾನಾ ಎನ್ನುವ ಪ್ರಶ್ನೆಗೆ ಯಶ್ ರಂಗಿನೇನಿ ಪ್ರತಿಕ್ರಿಯಿಸಿದ್ದಾರೆ. "ಮದುವೆ ಖರ್ಚು ಎಷ್ಟು ಆಯಿತು ಎನ್ನುವ ಲೆಕ್ಕ ಇನ್ನು ಸಿಕ್ಕಿಲ್ಲ. ಎರಡ್ಮೂರು ದಿನ ಬಿಟ್ಟು ಹೋಗಿ ಸಹೋದರಿಯನ್ನು ಕೇಳಿ ತಿಳಿದುಕೊಳ್ಳಬೇಕು. ಆದರೆ ಮದುವೆ ಕಾರ್ಯಕ್ರಮಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ. ಯಾವುದಕ್ಕೂ ರಾಜಿಯಾಗದೇ ಅದ್ಧೂರಿಯಾಗಿ ಮದುವೆ ನಡೀತು. 200 ಜನರನ್ನು ಉದಯ್‌ಪುರಕ್ಕೆ ಕರ್ಕೊಂಡು ಹೋಗಿ ಮದುವೆ ಮಾಡೋದು ತಮಾಷೆ ಅಲ್ಲ. ಆ ಬಳಿಕ ಕೂಡ ಒಂದಷ್ಟು ಕಾರ್ಯಕ್ರಮಗಳು ನಡೆದವು" ಎಂದಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ಮದುವೆ ಅಂದಾಗ ಕುಟುಂಬಸ್ಥರಲ್ಲಿ ಒಂದಷ್ಟು ಗೊಂದಲ ಇತ್ತು. ಮತ್ತೆ ಸಿನಿಮಾದವರನ್ನೇ ಮದುವೆ ಆಗುವುದು ಬೇಕಾ ಎನ್ನುವ ಚರ್ಚೆಗಳು ನಡೀತು. ಆದರೆ ಅಂತಿಮವಾಗಿ ವಿಜಯ್ ನಿರ್ಧಾರ. ಅದನ್ನು ಅವರ ಅಮ್ಮ ಸೇರಿ ಎಲ್ಲರೂ ಒಪ್ಪಿಕೊಂಡೆವು. "ವಿಜಯ್-ರಶ್ಮಿಕಾ ನಡುವೆ ಒಳ್ಳೆ ಅನುಬಂಧ ಇದೆ. ಅದನ್ನೆಲ್ಲಾ ನೋಡಿದರೆ ಯಾವುದೇ ಭಯ ಪಡುವ ಅಗತ್ಯ ಇಲ್ಲ. ಪ್ರೀತಿ ವಿಚಾರವನ್ನು ಮೊದಲಿಗೆ ವಿಜಯ್ ತಮ್ಮ ತಾಯಿಗೆ ಹೇಳಿದ್ದ. ಬಳಿಕ ಎಲ್ಲರೂ ಒಪ್ಪಿಕೊಂಡೆವು" ಎಂದು ಯಶ್ ರಂಗಿನೇನಿ ತಿಳಿಸಿದ್ದಾರೆ.
ಮದುವೆ ಬೆನ್ನಲ್ಲೇ ರಶ್ಮಿಕಾಗೆ ವಿಜಯ್ 90 ಕೋಟಿ ರೂ. ಮೌಲ್ಯದ ಫ್ಲಾಟ್ ಉಡುಗೊರೆ ಕೊಟ್ಟಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಯಶ್ ರಂಗಿನೇನಿ ಮಾತನಾಡಿ "ಅದೆಲ್ಲಾ ನಿಜಕ್ಕೂ ವದಂತಿ. ವಿಜಯ್ ಮಾಡಿರುವುದೇ 10-15 ಸಿನಿಮಾ. ಅದರಲ್ಲಿ ಎಷ್ಟು ಹಿಟ್ ಗೊತ್ತಿದೆ. ಇತ್ತೀಚೆಗೆ ಆತನ ಸಿನಿಮಾಗಳು ಗೆಲ್ಲುತ್ತಿಲ್ಲ. ಕೆಲ ಸಿನಿಮಾಗಳ ಸಂಭಾವನೆ ಸಂಪೂರ್ಣವಾಗಿ ಬಂದಿಲ್ಲ. ಈ ಕಾಲದಲ್ಲಿ 90 ಕೋಟಿ ರೂ. ಫ್ಲಾಟ್ ಉಡುಗೊರೆ ತಮಾಷೆ ಅಲ್ಲ. ನನಗೆ ಗೊತ್ತಿರುವಂತೆ ಅದೆಲ್ಲಾ ಸುಳ್ಳು. ಖಾಲಿ ಕಾಗದದಲ್ಲಿ ರಶ್ಮಿಕಾ ನಿನಗೆ ಫ್ಲಾಟ್ ಕೊಡಿಸಿದ್ದೀನಿ ಎಂದು ವಿಜಯ್ ಬರೆದುಕೊಟ್ಟಿರಬಹುದು ಅಷ್ಟೇ" ಎಂದು ನಕ್ಕಿದ್ದಾರೆ.
ಮೈತ್ರಿ ಮೇಕರ್ಸ್ ಜೊತೆ ಸೇರಿ ನಾನು 'ಡಿಯರ್ ಕಾಮ್ರೆಡ್' ಸಿನಿಮಾ ನಿರ್ಮಾಣ ಮಾಡಿದ್ದೆ. ಆಗ ಸೆಟ್‌ನಲ್ಲಿ ವಿಜಯ್- ರಶ್ಮಿಕಾ ಒಡನಾಟ ಗಮನಿಸುತ್ತಿದ್ದೆ. ಸೋದರ ಮಾವನಾಗಿ ನಾನು ಹೇಳ್ತೀನಿ "ವಿಜಯ್ ಯಾರ ಮಾತು ಕೇಳಲ್ಲ. ತನಗೆ ಅನ್ನಿಸಿದ್ದು ಮಾಡ್ತಾನೆ. ಮತ್ತೆ ಸಿನಿಮಾದವರನ್ನು ಯಾಕೆ ಮದುವೆ ಆಗಬೇಕು ಎನ್ನುವ ಚರ್ಚೆ ನಡೆದಾಗಲೂ ತಾನೇ ನಿರ್ಧಾರ ತೆಗೆದುಕೊಂಡ. ನನ್ನ ಜೀವನ ನನ್ನ ಇಷ್ಟ. ಏನಾದರೂ ಆದ್ರೆ ಅನುಭವಿಸುವುದು ನಾನು ತಾನೇ ಅಂತಾನೆ. ಹಾಗಾಗಿ ಅವನ ಕೋರಿಕೆಯಂತೆ ಎಲ್ಲವೂ ನಡೆಯುತ್ತದೆ" ಎಂದು ಯಶ್ ರಂಗಿನೇನಿ ಹಂಚಿಕೊಂಡಿದ್ದಾರೆ.


Click it and Unblock the Notifications











