ವಿಷ್ಣು ಸಿನಿಮಾ ರೀಮೆಕ್ ಬೇಡ ಎಂದಿದ್ದ ಚಿರು; ತಲೈವಾ ಮಾಡಿ ಗೆದ್ದಾಗ ಕೈಕೈ ಹಿಸುಕಿಕೊಂಡಿದ್ರಾ?
ಚಿತ್ರರಂಗದಲ್ಲಿ ಒಂದು ಕಥೆ ಸಿನಿಮಾ ಆಗುವುದು ಅಷ್ಟು ಸುಲಭ ಅಲ್ಲ. ಆ ಕಥೆಯನ್ನು ಯಾರ್ ಯಾರೋ ಕೇಳುತ್ತಾರೆ. ಕೆಲವರಿಗೆ ಇಷ್ಟವಾಗಿ ಒಪ್ಪಿ ನಟಿಸುತ್ತಾರೆ. ಅದೇ ಕಥೆ ಚೆನ್ನಾಗಿಲ್ಲ ಎಂದು ರಿಜೆಕ್ಟ್ ಮಾಡಿದವರು ಬಳಿಕ ಗೆದ್ದಾಗ ಕೈ ಕೈ ಹಿಸುಕಿಕೊಂಡಿರುವ ಉದಾಹರಣೆಗಳು ಇವೆ.
ಕನ್ನಡದ 'ಕಸ್ತೂರಿ ನಿವಾಸ' ಚಿತ್ರದ ಕಥೆಯನ್ನು ತಮಿಳು ನಟ ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ್ದರು. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ನಟಿಸಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶಾಕ್ ಆಗಿದ್ದ ಶಿವಾಜಿ ಗಣೇಶನ್ ಚಿತ್ರದ ರೈಟ್ಸ್ ಕೊಂಡುಕೊಂಡು ತಮಿಳಿನಲ್ಲಿ ರೀಮೆಕ್ ಮಾಡಿದ್ದರು. ಚಿತ್ರರಂಗದಲ್ಲಿ ಇಂತಹ ಕೆಲ ಉದಾಹರಣೆಗಳು ಸಿಗುತ್ತವೆ.

ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ಸೂಪರ್ ಹಿಟ್ ಚಿತ್ರವನ್ನು ತೆಲುಗಿನಲ್ಲಿ ರೀಮೆಕ್ ಮಾಡುವ ಪ್ರಯತ್ನ ನಡೆದಿದ್ದಂತೆ. ನಿರ್ದೇಶಕರು ಮೆಗಾಸ್ಟಾರ್ ಚಿರಂಜೀವಿ ಬಳಿ ಚರ್ಚಿಸಿದಾಗ ಅವರು ಬೇಡ ಇದು ವರ್ಕ್ ಆಗಲ್ಲ ಎಂದಿದ್ದರಂತೆ. ಬಳಿಕ ಅದೇ ಕಥೆಯನ್ನು ತಮಿಳಿನಲ್ಲಿ ರಜನಿಕಾಂತ್ ಮಾಡಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಚಿರಂಜೀವಿ ಅಚ್ಚರಿಗೊಂಡಿದ್ದರಂತೆ.
ಕನ್ನಡದಲ್ಲಿ 'ಆಪ್ತಮಿತ್ರ' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಮಲಯಾಳಂನ 'ಮಣಿ ಚಿತ್ರತಾಳ್' ಚಿತ್ರದ ರೀಮೆಕ್ ಇದು. ಆದರೆ ಕನ್ನಡದಲ್ಲಿ ಚಿತ್ರ ಗೆದ್ದ ಬಳಿಕ ತಮಿಳು, ಹಿಂದಿ ಸೇರಿ ಹಲವು ಭಾಷೆಗಳಿಗೆ ರೀಮೆಕ್ ಆಗುವಂತಾಯಿತು. ವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್ ಅರವಿಂದ್ ನಟಿಸಿದ 'ಆಪ್ತಮಿತ್ರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಚಿತ್ರವನ್ನು ತೆಲುಗಿನಲ್ಲಿ ರೀಮೆಕ್ ಮಾಡಲು ನಿರ್ದೇಶಕ ಬಿ.ಎನ್ ಆದಿತ್ಯ ಪ್ರಯತ್ನಿಸಿದ್ದರಂತೆ.

ಚಿರಂಜೀವಿಗೆ ಬಹಳ ಆಪ್ತರಾಗಿದ್ದ ಬಿ.ಎನ್ ಆದಿತ್ಯ ಅವರೊಟ್ಟಿಗೆ ಸಿನಿಮಾ ಮಾಡಲು ಬಯಸಿದ್ದರು. ಆಗ 'ಆಪ್ತಮಿತ್ರ' ರೀಮೆಕ್ ಮಾಡಲು ಚಿರು ಬಳಿ ಕೇಳಿದ್ದರಂತೆ. ಸಿನಿಮಾ ನೋಡಿ ಚಿರು ಇದು ವರ್ಕ್ ಆಗಲ್ಲ ಎನಿಸುತ್ತದೆ ಬೇಡ ಎಂದುಬಿಟ್ಟಿದ್ದರಂತೆ. ಮುಂದೆ ಪಿ. ವಾಸು ತಮಿಳಿನಲ್ಲಿ ಈ ಸಿನಿಮಾ ರೀಮೆಕ್ ಮಾಡಿ ಗೆದ್ದರು. ರಜನಿಕಾಂತ್ ನಟನೆಯ 'ಚಂದ್ರಮುಖಿ' ಸಿನಿಮಾ ತೆಲುಗಿಗೂ ಡಬ್ ಆಗಿ ಭರ್ಜರಿ ಸಕ್ಸಸ್ ಕಂಡಿತ್ತು.
'ಚಂದ್ರಮುಖಿ' ಗೆದ್ದ ಬಳಿಕ ಬಿ.ಎನ್ ಆದಿತ್ಯ ಜೊತೆ ಮಾತನಾಡಿದ್ದ ಚಿರು ನಿಮ್ಮ ಲೆಕ್ಕಾಚಾರ ಸರಿಯಾಗಿತ್ತು. ಆ ಚಿತ್ರದಲ್ಲಿ ನಾನು ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾಗಿ ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಇಬ್ಬರಿಗೂ 'ಮಣಿ ಚಿತ್ರತ್ತಾಳ್' ರೀಮೆಕ್ ದೊಡ್ಡ ಬ್ರೇಕ್ ಕೊಟ್ಟಿತ್ತು. ಕನ್ನಡದಲ್ಲಿ ದ್ವಾರಕೀಶ್ 'ಆಪ್ತಮಿತ್ರ' ಚಿತ್ರ ನಿರ್ಮಿಸಿ ಭರ್ಜರಿ ಸಕ್ಸಸ್ ಕಂಡಿದ್ದರು. ಸಾಲಸುಳಿಯಿಂದ ಹೊರ ಬಂದಿದ್ದರು.
ತಮಿಳಿನಲ್ಲಿ ಕೆಲ ಬದಲಾವಣೆ ಮಾಡಿಕೊಂಡು 'ಚಂದ್ರಮುಖಿ' ಸಿನಿಮಾ ಮಾಡಲಾಗಿತ್ತು. ರಜನಿಕಾಂತ್ ಇಮೇಜ್‌ಗೆ ತಕ್ಕಂತೆ ಹೊಸದಾಗಿ ಒಂದಷ್ಟು ಸನ್ನಿವೇಶಗಳನ್ನು ಪಿ. ವಾಸು ಸೇರಿಸಿದ್ದರು. ಅದು ಅಲ್ಲಿ ಪ್ಲಸ್ ಆಗಿತ್ತು. ಕನ್ನಡದಲ್ಲಿ ಸೌಂದರ್ಯ ಮಾಡಿದ್ದ ಪಾತ್ರವನ್ನು ಜ್ಯೋತಿಕಾ ನಿಭಾಯಿಸಿದ್ದರು. ನಯನತಾರಾ ನಾಯಕಿಯಾಗಿ ಮಿಂಚಿದ್ದರು.
'ಆಪ್ತಮಿತ್ರ' ಸಕ್ಸಸ್ ಬಳಿಕ ಅದರ ಮುಂದುವರೆದ ಭಾಗ ಎನ್ನುವಂತೆ 'ಆಪ್ತರಕ್ಷಕ' ಚಿತ್ರ ಕನ್ನಡದಲ್ಲಿ ಬಂದಿತ್ತು. ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ಕೊನೆಯ ಚಿತ್ರ ಇದಾಗಿತ್ತು. ಭರ್ಜರಿ ಯಶಸ್ಸು ಕೂಡ ಕಂಡಿತ್ತು. ಆದರೆ ರಜನಿಕಾಂತ್ ತಮಿಳಿನಲ್ಲಿ ಈ ಸಿನಿಮಾ ಮಾಡಲಿಲ್ಲ. ಮುಂದೆ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಚಿತ್ರವನ್ನು ರೀಮೆಕ್ ಮಾಡಿದ್ದರು. ಅನುಷ್ಕಾ ಶೆಟ್ಟಿ ನಾಗವಲ್ಲಿಯಾಗಿ ಮಿಂಚಿದ್ದರು. ಆದರೆ ತೆಲುಗಿನಲ್ಲಿ ಸಿನಿಮಾ ಅಷ್ಟಾಗಿ ಗೆಲ್ಲಲಿಲ್ಲ.


Click it and Unblock the Notifications











