'ಸಲಾರ್-2' ಪಕ್ಕಕ್ಕಿಟ್ಟು ಪ್ರಶಾಂತ್ ನೀಲ್ ಸರ್‌ಪ್ರೈಸ್; ಮುಂದಿನ ಸಿನಿಮಾ ಅಪ್‌ಡೇಟ್ ಬಂತು
'KGF' ಸರಣಿ ಬಳಿ ಪ್ರಶಾಂತ್ ನೀಲ್ 'ಸಲಾರ್' ಸಿನಿಂಆ ಕೈಗೆತ್ತಿಕೊಂಡಿದ್ದಾರೆ. ಸಾಕಷ್ಟು ತಡವಾಗಿ ಸಿನಿಮಾ ತೆರೆಗೆ ಬಂದಿತ್ತು. ಇನ್ನು ಕನ್ನಡದ 'ಉಗ್ರಂ' ಸಿನಿಮಾ ಕಥೆಯನ್ನೇ ಬಹಳ ದೊಡ್ಡದಾಗಿ ಎರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ಅದು. ಈಗಾಗಲೇ ಮೊದಲ ಭಾಗ ಪ್ರೇಕ್ಷಕರ ಮುಂದೆ ಬಂದಿದೆ. ಒಂದು ಹಂತಕ್ಕೆ ಸಿನಿಮಾ ಗೆದ್ದಿದೆ.
'ಸಲಾರ್' ಬಳಿಕ ಸೀಕ್ವೆಲ್ ಶುರುವಾಗುತ್ತದೇ ಎಂದು ಕೆಲವರು ಭಾವಿಸಿದ್ದರು. ಅಂದಹಾಗೆ ಜ್ಯೂ. ಎನ್‌ಟಿಆರ್ ಜೊತೆಗೂ ನೀಲ್ ಒಂದು ಸಿನಿಮಾ ಘೋಷಿಸಿದ್ದರು. ಆದರೆ ತಾರಕ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಿಂದ ಅದು ತಡವಾಗುವಂತಾಗಿತ್ತು. ಸದ್ಯ 'ದೇವರ' ಹಾಗೂ 'ವಾರ್-2' ಸಿನಿಮಾಗಳಲ್ಲಿ ಯಂಗ್ ಟೈಗರ್ ನಟಿಸುತ್ತಿದ್ದಾರೆ. ಹಾಗಾಗಿ ಪ್ರಶಾಂತ್ ನೀಲ್ ಸಿನಿಮಾ ಸದ್ಯಕ್ಕಿಲ್ಲ ಎನ್ನಲಾಗ್ತಿತ್ತು.

'ಸಲಾರ್'-2 ಚಿತ್ರದ ಒಂದಷ್ಟು ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ನಡೆದಿದೆ. ತಾರಕ್ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಪ್ರಭಾಸ್ ಜೊತೆ 'ಸಲಾರ್'-2 ಮೊದಲು ಕೈಗೆತ್ತಿಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಸರ್‌ಪ್ರೈಸ್ ಎನ್ನುವಂತೆ ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ಅಪ್‌ಡೇಟ್ ನೀಡಿದ್ದಾರೆ. ಇದೇ ಆಗಸ್ಟ್‌ನಿಂದ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ತೆಲುಗು ನಟ ಜ್ಯೂ. ಎನ್‌ಟಿಆರ್ ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ NTR31 ಸಿನಿಮಾ ಅಪ್‌ಡೇಟ್ ಕೂಡ ಬಂದಿದೆ. ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ನಿರ್ಮಾಪಕರು ತಾರಕ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿವೆ.
ತಾರಕ್ ಜೊತೆಗೂ ನೀಲ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಚಿತ್ರದ ಒಂದಷ್ಟು ಥೀಮ್ ಪೋಸ್ಟರ್‌ಗಳು ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿವೆ. ಬಹಳ ಇಂಟೆನ್ಸ್ ಆಕ್ಟರ್ ತಾರಕ್. ಹಾಗಾಗಿ ಪ್ರಶಾಂತ್ ನೀಲ್ ಎಲಿವೇಷನ್ಸ್‌ಗೆ ಯಂಗ್ ಟೈಗರ್ ಮಾಸ್ ಪರ್ಫಾರ್ಮನ್ಸ್ ಸಿಂಕ್ ಆದರೆ ತೆರೆಮೇಲೆ ಮ್ಯಾಜಿಕ್ ಹೇಗಿರುತ್ತದೋ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಈಗಾಗಲೇ 'ದೇವರ' ಚಿತ್ರದ ಬಹುತೇಕ ಚಿತ್ರೀಕರಣ ಜ್ಯೂ. ಎನ್‌ಟಿಆರ್ ಮುಗಿಸಿದ್ದಾರೆ. ಈಗಾಗಲೇ ಮುಂಬೈನಲ್ಲಿ 'ವಾರ್-2' ಚಿತ್ರದ ಒಂದು ಶೆಡ್ಯೂಲ್ ಕೂಡ ಕಂಪ್ಲೀಟ್ ಆಗಿದೆ. ಹೃತಿಕ್ ರೋಷನ್ ಎದುರು ಚಿತ್ರದಲ್ಲಿ ತೆಲುಗು ನಟ ಅಬ್ಬರಿಸುತ್ತಿದ್ದಾರೆ. 'ವಾರ್-2' ಜೊತೆ ಜೊತೆಗೆ ಆಗಸ್ಟ್‌ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್-2' ಸ್ಕ್ರಿಪ್ಟ್ ಸಹ ಸಿದ್ಧವಾಗಿದೆ. ಆದರೆ ಯಾವುದು ಮೊದಲು ಎನ್ನುವುದು ಗೊತ್ತಿಲ್ಲ. ಸದ್ಯಕ್ಕೆ ನನಗೆ ಕೊಂಚ ವಿಚಾರ ಬೇಕಿದೆ ಎಂದಿದ್ದರು. ಕೊಂಚ ಬಿಡುವು ಪಡೆದ ಬಳಿಕ NTR31 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಭುವನ್ ಗೌಡ, ರವಿ ಬಸ್ರೂರು ಈ ಚಿತ್ರಕ್ಕೂ ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ. 'ಡ್ರ್ಯಾಗನ್' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಬರುತ್ತದೆ ಎಂದು ಗುಲ್ಲಾಗಿದೆ.
ಇನ್ನು ತಾರಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ದೇವರ' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಅನಿರುದ್ದ್ ರವಿಚಂದರ್ ಸಂಗೀತವಿದೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ಚಿತ್ರವನ್ನು ಸಹ 2 ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ.


Click it and Unblock the Notifications











