ಅವಂತಿಕಾ ಪಾತ್ರದಲ್ಲಿ ರಾಶಿ ಖನ್ನಾ ನಟಿಸ್ಬೇಕಿತ್ತು: ಇಷ್ಟ ಇದ್ರೂ ಮೌಳಿ ಚಾನ್ಸ್ ಕೊಟ್ಟಿಲ್ಲ ಯಾಕೆ?
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾ ಮಾಡಿದ ದಾಖಲೆಗಳು ಒಂದೆರೆಡಲ್ಲ. ಜಕ್ಕಣ್ಣ ನಿರ್ದೇಶನ, ಪ್ರತಿಭಾನ್ವತ ಕಲಾವಿದರು, ಅದ್ಧೂರಿ ಮೇಕಿಂಗ್, ಗ್ರಾಫಿಕ್ಸ್ ಮಾಯಾಜಾಲದಿಂದ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಈ ಚಿತ್ರದ ಪ್ರತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಚಿತ್ರದಲ್ಲಿ ಅವಂತಿಕಾ ಪಾತ್ರದಲ್ಲಿ ತಮನ್ನಾ ನಟಿಸಿದ್ದರು.
ಬಾಹುಬಲಿಯಾಗಿ ಪ್ರಭಾಸ್, ಬಲ್ಲಾಳ ದೇವನಾಗಿ ರಾಣಾ, ದೇವಸೇನಾ ಆಗಿ ಅನುಷ್ಕಾ ಶೆಟ್ಟಿ, ಕಟ್ಟಪ್ಪ ಪಾತ್ರದಲ್ಲಿ ಸತ್ಯರಾಜ್, ಶಿವಗಾಮಿಯಾಗಿ ರಮ್ಯಾಕೃಷ್ಣ ಪ್ರತಿಯೊಬ್ಬರು ಅದ್ಭುತ ಅಭಿನಯ ನೀಡಿದ್ದರು. ಮೊದಲ ಭಾಗದಲ್ಲಿ ಅವಂತಿಕಾ ಆಗಿ ತಮನ್ನಾ ಮೋಡಿ ಮಾಡಿದ್ದರು. ಆದರೆ 2ನೇ ಭಾಗದಲ್ಲಿ ಅಷ್ಟಾಗಿ ಅವಕಾಶ ಸಿಗಲಿಲ್ಲ. ಆದರೂ ಶಿವುಡು ಪ್ರೇಯಸಿಯಾಗಿ ಅವಂತಿಕಾ ತಮನ್ನಾ ಪ್ರೇಕ್ಷಕರ ಮನಗೆದ್ದಿದ್ದರು. ಅಸಲಿಗೆ ಈ ಪಾತ್ರವನ್ನು ರಾಶಿ ಖನ್ನಾ ಮಾಡ್ಬೇಕಿತ್ತಂತೆ.

ಹೌದು 'ಬಾಹುಬಲಿ' ಚಿತ್ರದ ಆಡಿಷನ್‌ಗೆ ರಾಶಿ ಖನ್ನಾ ಕೂಡ ಹೋಗಿದ್ದರಂತೆ. ರಾಜಮೌಳಿ ಆಕೆಯನ್ನು ನೋಡಿ ಮೆಚ್ಚಿಕೊಂಡರಂತೆ. ಆದರೆ ಸಿನಿಮಾದಲ್ಲಿ ನಟಿಸೋದು ಬೇಡ ಎಂದರಂತೆ. ಅದಕ್ಕೆ ಕಾರಣ ಏನು ಎನ್ನುವುದನ್ನು ರಾಶಿ ಖನ್ನಾ ಈಗ ಬಿಚ್ಚಿಟ್ಟಿದ್ದಾರೆ. "ಬಾಹುಬಲಿ ಚಿತ್ರದಲ್ಲಿ ತಮನ್ನಾ ಮಾಡಬೇಕಿದ್ದ ಆವಂತಿಕಾ ಪಾತ್ರವನ್ನು ನಾನು ಮಾಡಬೇಕಿತ್ತು. ಆಡಿಷನ್‌ಗೂ ಹಾಜರಾಗಿದ್ದೆ. ರಾಜಮೌಳಿ ನನ್ನನ್ನು ನೋಡಿ "ಈ ಹುಡುಗಿ ತುಂಬಾ ಕ್ಯೂಟಾಗಿ ಇದ್ದಾಳೆ. ಯಾವುದಾದರೂ ಲವ್‌ಸ್ಟೋರಿಗೆ ಸೂಟ್ ಆಗ್ತಾರೆ" ಎಂದಿದ್ದರಂತೆ.
"ನನ್ನ ಸ್ನೇಹಿತ ಒಂದೊಳ್ಳೆ ಲವ್ ಸ್ಟೋರಿ ಸಿನಿಮಾ ಮಾಡ್ತಿದ್ದಾರೆ. ಒಮ್ಮೆ ಕಥೆ ಕೇಳಿದರೆ ನಿನಗೆ ತಪ್ಪದೇ ಇಷ್ಟವಾಗುತ್ತದೆ" ಎಂದು ರಾಜಮೌಳಿ ಹೇಳಿದರಂತೆ. ಆ ರೀತಿ 'ಊಹಲು ಗುಸಗುಸುಲಾಡೆ' ನಿರ್ಮಾಪಕರಿಗೆ ಪರಿಚಯವಾಗಿ ಆ ಸಿನಿಮಾ ಮೂಲಕ ಟಾಲಿವುಡ್‌ಗೆ ರಾಶಿ ಖನ್ನಾ ಎಂಟ್ರಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ರಾಶಿ ಬಾಲಿವುಡ್‌ನ 'ಮದ್ರಾಸ್ ಕೆಫೆ' ಚಿತ್ರದಲ್ಲಿ ನಟಿಸಿದ್ದರು. ಮುಂದೆ 'ಬೆಂಗಾಲ್ ಟೈಗರ್', 'ಸುಪ್ರೀಂ', 'ಹೈಪರ್', 'ಜೈ ಲವಕುಶ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು.

ಒಟ್ನಲ್ಲಿ ರಾಶಿ ಖನ್ನಾಗೆ 'ಬಾಹುಬಲಿ' ರೀತಿಯ ಅದ್ಭುತ ಸಿನಿಮಾದಲ್ಲಿ ನಟಿಸೋ ಅವಕಾಶ ಸ್ಷಲ್ಪದರಲ್ಲೇ ಮಿಸ್ ಆಗಿದೆ. 'ಬಾಹುಬಲಿ' ಚಿತ್ರದಲ್ಲಿ ಒಂದಕ್ಕಿಂತ ಒಂದು ಬಹಳ ಪವರ್‌ಫುಲ್ ಪಾತ್ರಗಳನ್ನು ರಾಜಮೌಳಿ ಸೃಷ್ಟಿಸಿದ್ದರು. ಆವಂತಿಕಾ ಪಾತ್ರ ಕೂಡ ಬಹಳ ಪವರ್‌ಫುಲ್ ಆಗಿತ್ತು. ಹಾಗಾಗಿ ಕ್ಯೂಟ್ ಆಗಿ ಇದ್ದ ರಾಶಿ ಖನ್ನಾನ ನೋಡಿ ರಾಜಮೌಳಿ ಬೇಡ ಎಂದು ಹೇಳಿರಬಹುದು. ದೆಹಲಿ ಬೆಡಗಿ ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ.
ರಾಶಿ ಖನ್ನಾಗೆ ದೊಡ್ಡ ಅವಕಾಶಗಳು ಮಾತ್ರ ಸಿಗಲೇಯಿಲ್ಲ. ಸೌತ್ ಸಿನಿದುನಿಯಾದಲ್ಲಿ ಆರಕ್ಕೇರದೇ ಮೂರಕ್ಕಿಳಿಯದೇ ರಾಶಿ ಖನ್ನಾ ಉಳಿದುಬಿಟ್ಟರು. ಮೊದಲಿಗೆ ಹೋಮ್ಲಿ ಗರ್ಲ್ ಪಾತ್ರಗಳಲ್ಲದೇ ಹೆಚ್ಚು ನಟಿಸ್ತಿದ್ದ ಬೆಡಗಿ 'ವರ್ಲ್ಡ್ ಫೇಮಸ್ ಲವರ್' ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿ ಅಚ್ಚರಿ ಮೂಡಿಸಿದ್ದರು. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಶ್ರೀಲೀಲಾ ಆರ್ಭಟದ ನಡುವೆ ರಾಶಿ ಹವಾ ಕೂಡ ಕಮ್ಮಿ ಆಗಿದೆ.


Click it and Unblock the Notifications











