ಬ್ಲಾಕ್‌ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಬೇಕಿತ್ತು ಅಭಿಷೇಕ್ ಅಂಬರೀಶ್ ದೋಸ್ತ್!
ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಷಲನ ಸೃಷ್ಟಿಸಿದ ಸಿನಿಮಾ 'ಅರ್ಜುನ್ ರೆಡ್ಡಿ'. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ಕಟ್ಟಿಕೊಟ್ಟಿದ್ದರು. ವಿಜಯ್ ದೇವರಕೊಂಡ ಹೀರೋ ಆಗಿ ನಟಿಸಿ ಗೆದ್ದಿದ್ದರು. ನಿಜ ಹೇಳಬೇಕು ಅಂದ್ರೆ ಚಿತ್ರಕ್ಕೆ ಹೀರೊ ಆಗಿ ಮೊದಲ ಆಯ್ಕೆ ವಿಜಯ್ ಆಗಿರಲಿಲ್ಲ.
ಚಿತ್ರರಂಗದಲ್ಲಿ ಇದೆಲ್ಲಾ ಸರ್ವೇಸಾಧಾರಣ. ಯಾರೋ ಮಾಡಬೇಕಿದ್ದ ಪಾತ್ರ ಮತ್ಯಾರದ್ದೋ ಪಾಲಾಗಿ ಬಿಡುತ್ತದೆ. ಆ ಸಿನಿಮಾ ಗೆದ್ದಾಗ ಅರೇ, ಛೇ ಅವ್ರು ನಟಿಸಬೇಕಿತ್ತು, ಇವ್ರು ನಟಿಸಬೇಕಿತ್ತು ಅಂತೆಲ್ಲಾ ಚರ್ಚೆ ಆಗುತ್ತದೆ. ತೆಲುಗಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಸಿನಿಮಾ ಬಳಿಕ ಹಿಂದಿಗೆ ರೀಮೆಕ್ ಆಗಿತ್ತು. ಅಲ್ಲಿ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಂದೀಪ್ ರೆಡ್ಡಿ ವಂಗಾ ಮತ್ತೊಮ್ಮೆ ಆಕ್ಷನ್ ಕಟ್ ಹೇಳಿದ್ದರು. ಇದೊಂದು ಸಿನಿಮಾದಿಂದ ಅತ್ತ ಸಂದೀಪ್ ಇತ್ತ ವಿಜಯ್ ದೇವರಕೊಂಡ ಫೇಮಸ್ ಆಗಿಬಿಟ್ಟಿದ್ದರು.

'ಅರ್ಜುನ್ ರೆಡ್ಡಿ' ಹಾಗೂ 'ಕಬೀರ್ ಸಿಂಗ್' ಬಳಿಕ 'ಅನಿಮಲ್' ಸಿನಿಮಾ ಮಾಡಿ ಸಂದೀಪ್ ರೆಡ್ಡಿ ವಂಗಾ ಸದ್ದು ಮಾಡಿದ್ದರು. ಈ ಸಿನಿಮಾ ಎರಡು ವರ್ಷಗಳ ಹಿಂದೆ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಪ್ರಭಾಸ್ ಹೀರೊ ಆಗಿ 'ಸ್ಪಿರಿಟ್' ಎಂಬ ಚಿತ್ರವನ್ನು ವಂಗಾ ನಿರ್ದೇಶಕ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಆಯ್ಕೆ ವಿಚಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ದೀಪಿಕಾ ಪಡುಕೋಣೆ ಜೊತೆ ಇದೇ ಕಾರಣಕ್ಕೆ ವಂಗಾ ಕಿರಿಕ್ ಮಾಡಿಕೊಂಡಿದ್ದಾರೆ.
ಅಂದಹಾಗೆ 'ಅರ್ಜುನ್ ರೆಡ್ಡಿ' ಚಿತ್ರದ ಅವಕಾಶ ಮೊದಲು ನನಗೆ ಬಂದಿತ್ತು ಎಂದು ತೆಲುಗು ನಟ ಮಂಚು ಮನೋಜ್ ಹೇಳಿದ್ದಾರೆ. ಖ್ಯಾತ ನಟ ಮೋಹನ್ ಬಾಬು ಕಿರಿಯ ಮಗ ಮನೋಜ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಮೋಹನ್ ಬಾಬು ಹಾಗೂ ಅಂಬರೀಶ್ ಕುಟುಂಬದ ನಡುವೆ ಆತ್ಮೀಯ ಒಡನಾಟವಿದೆ. ಮನೋಜ್ ಹಾಗೂ ಅಭಿಷೇಕ್ ಕೂಡ ಒಳ್ಳೆ ಸ್ನೇಹಿತರು. ಅಭಿ ಮದುವೆಯಲ್ಲಿ ಮನೋಜ್ ಸಂಭ್ರಮದಿಂದ ಓಡಾಡಿದ್ದರು.

ತೆಲುಗು ಫಿಲ್ಮ್ ನಗರ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಂಚು ಮನೋಜ್ ಮಾತನಾಡಿದ್ದಾರೆ. "ರಾಮ್‌ಚರಣ್ ನಟಿಸಿದ 'ರಚ್ಚ' ಸಿನಿಮಾ ಅವಕಾಶ ನನಗೆ ಬಂದಿತ್ತು. ಆದರೆ ಡೇಟ್ಸ್ ಇಲ್ಲದ ಕಾರಣ ನಟಿಸೋಕೆ ಆಗಿರಲಿಲ್ಲ. ಆ ಸಿನಿಮಾ ನನ್ನ ಆತ್ಮೀಯ ಸ್ನೇಹಿತ ಮಾಡಿದಂತಾಯಿತು. ನಾಗಚೈತನ್ಯಾ ನಟಿಸಿದ 'ಆಟೋನಗರ್ ಸೂರ್ಯ' ಚಿತ್ರದ ಅವಕಾಶ ಕೂಡ ನನಗೆ ಬಂದಿತ್ತು. ಆದರೆ ನಟಿಸೋಕೆ ಆಗಿರಲಿಲ್ಲ" ಎಂದಿದ್ದಾರೆ.
'ಅರ್ಜುನ್ ರೆಡ್ಡಿ' ಸಿನಿಮಾ ಬಗ್ಗೆ ಮಾತನಾಡಿ "ನಾನು 'ಪೋಟುಗಾಡು' ಚಿತ್ರದಲ್ಲಿ ನಟಿಸುತ್ತಿದ್ದಾಗ 'ಅರ್ಜುನ್ ರೆಡ್ಡಿ' ಸಿನಿಮಾ ಮಾಡುವಂತೆ ಕೇಳಿದ್ದರು. ಆದರೆ ಆಗ ಕೂಡ ಡೇಟ್ಸ್ ಇಲ್ಲ ಎಂದು ನಿರಾಕರಿಸಿದ್ದೆ. ನಿಜಕ್ಕೂ ಆ ಸಿನಿಮಾಗಳು ಗೆದ್ದಾಗ ಬಳ ಪಶ್ಚಾತ್ತಾಪ ಪಟ್ಟಿದ್ದೀನಿ, ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೈಕೈ ಹಿಸುಕಿಕೊಂಡಿದ್ದೇನೆ. ಒಂದು ಹೋದರೆ ಮತ್ತೊಂದು ಬರುತ್ತದೆ ಎಂದು ನಂಬುತ್ತೇನೆ. ಮುಂದೆ ನೋಡೋಣ" ಎಂದು ಮನೋಜ್ ವಿವರಿಸಿದ್ದಾರೆ.
ಬಾಲನಟನಾಗಿಯೇ ಮನೋಜ್ ಚಿತ್ರರಂಗ ಪ್ರವೇಶಿಸಿದ್ದರು. 'ದೊಂಗ ದೊಂಗದಿ' ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಆದರೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಗಲಿಲ್ಲ. ಇತ್ತೀಚೆಗೆ ತಂದೆ ಮೋಹನ್ ಬಾಬು ಹಾಗೂ ಸಹೋದರ ವಿಷ್ಣು ಜೊತೆಗಿನ ಕಿರಿಕ್ ಕಾರಣದಿಂದ ಬಹಳ ಸುದ್ದಿ ಆಗಿದ್ದರು. ಆಸ್ತಿ ವಿಚಾರಕ್ಕೆ ಪದೇ ಪದೆ ಮನೆಯಲ್ಲಿ ಗಲಾಟೆ ನಡೆಯುತ್ತಲೇ ಇದೆ. ಸದ್ಯ ಮನೋಜ್ ನಟನೆಯ 'ಭೈರವಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











