ಬಿಗ್ ಸರ್‌ಪ್ರೈಸ್: NTR30 ಚಿತ್ರದಲ್ಲಿ ತಾರಕ್ ಜೊತೆ ಗುದ್ದಾಡಲು ಬಂದ ಬಾಲಿವುಡ್ ಸೂಪರ್ ಸ್ಟಾರ್
ಜ್ಯೂ. ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ತಂಡಕ್ಕೆ ಬಾಲಿವುಡ್ ನಟನ ಆಗಮನವಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾ ಶೂಟಿಂಗ್ ನಡೀತಿದ್ದು ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸ್ತಿದ್ದು ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಹಳ ರೋಚಕವಾಗಿ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ.
ಹೀರೊಗಿಂತ ವಿಲನ್ ಪಾತ್ರ ಬಹಳ ಸ್ಟ್ರಾಂಗ್ ಆಗಿ ಇದ್ದಷ್ಟು ಇಬ್ಬರು ಕಾದಾಟ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತದೆ. ಅದೇ ಕಾರಣಕ್ಕೆ ದೊಡ್ಡ ದೊಡ್ಡ ಚಿತ್ರಗಳಿಗೆ ಸ್ಟಾರ್ ನಟರನ್ನು ವಿಲನ್ ಪಾತ್ರಗಳಿಗೆ ಆರಿಸಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ನಡೀತಿದೆ. ಹಾಗಾಗಿ ಬಾಲಿವುಡ್ ಕಲಾವಿದರು ದಕ್ಷಿಣದ ಸಿನಿಮಾಗಳಲ್ಲಿ ದಕ್ಷಿಣದ ಸ್ಟಾರ್ ನಟರು ಬಾಲಿವುಡ್ ಚಿತ್ರಗಳಲ್ಲಿ ನಟಿಸೋದು ಕಾಮನ್ ಆಗ್ಬಿಟ್ಟಿದೆ. ಇದೀಗ NTR30 ಚಿತ್ರದಲ್ಲೂ ಬಾಲಿವುಡ್ ನಟ ವಿಲನ್ ಆಗಿ ನಟಿಸ್ತಿದ್ದಾರೆ.

ಮೊದಲಿಗೆ NTR30 ಚಿತ್ರದಲ್ಲಿ ಆಮಿರ್ ಖಾನ್ ನಟಿಸ್ತಾರೆ ಎನ್ನಲಾಗಿತ್ತು. ನಂತರ ಸೈಫ್ ಅಲಿಖಾನ್ ಹೆಸರು ಚಾಲ್ತಿಗೆ ಬಂತು. ಅದೇ ಪಕ್ಕಾ ಆಗಿದೆ. ಸೈಫ್ ಅಲಿಖಾನ್ ಜ್ಯೂ. ಎನ್‌ಟಿಆರ್ ಎದುರು ಗುದ್ದಾಡುತ್ತಿದ್ದಾರೆ. ಈಗಾಗಲೇ ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ನಟಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಬಾಲಿವುಡ್ ಸಿನಿಮಾ. ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಆಗಿ ಬರ್ತಿದೆ. ಆದರೆ ಇದೀಗ ತಾರಕ್ ಜೊತೆ ನಟಿಸುವ ಮೂಲಕ ಸೈಫ್ ಟಾಲಿವುಡ್‌ಗೆ ಎಂಟ್ರಿ ಕೊಟ್ಟಂತೆ ಆಗಿದೆ. ಸೈಫ್ ಆಗಮನದಿಂದ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
'ಆಚಾರ್ಯ' ಸಿನಿಮಾ ಸೋಲಿನಿಂದ ಹೊರಬರಲು ಕೊರಟಾಲ ಶಿವ ಕಸರತ್ತು ಮಾಡ್ತಿದ್ದಾರೆ. ಕಳೆದೊಂದು ವರ್ಷದಿಂದ NTR30 ಸಿನಿಮಾ ಕಥೆಯನ್ನು ತಿದ್ದಿ ತೀಡಿದ್ದಾರೆ. 'RRR' ಸಿನಿಮಾ ರಿಲೀಸ್ ಆಗಿ 1 ವರ್ಷದ ನಂತರ ತಾರಕ್ ನಟನೆಯ ಹೊಸ ಸಿನಿಮಾ ಶುರುವಾಗಿದೆ. ಇಷ್ಟು ದಿನ ಕಥೆಗೆ ಅಂತಿಮ ರೂಪ ಸಿಗಲಿ ಎಂದು ಕಾಯುತ್ತಿದ್ದರು. ಇದೀಗ ಚಿತ್ರೀಕರಣ ಆರಂಭವಾಗಿದೆ. ಸೆಟ್‌ನಲ್ಲಿ ಸೈಫ್ ಅಲಿಖಾನ್ ಎಂಟ್ರಿ ಕೊಟ್ಟಿದ್ದು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ತಾರಕ್ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಚಿತ್ರವನ್ನು ಹಿಂದಿಗೂ ಡಬ್ ಮಾಡಿ ರಿಲೀಸ್ ಮಾಡುವ ಕಾರಣಕ್ಕೆ ಸೈಫ್‌ನ ಆಯ್ಕೆ ಮಾಡಲಾಗಿದೆ.

ಈಗಾಗಲೇ ಕೊರಟಾಲ ಶಿವ ಅಂಡ್ ಟೀಂ ಸಣ್ಣದೊಂದು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಹೊಸ ಶೆಡ್ಯೂಲ್ ಈಗ ಆರಂಭವಾಗಿದೆ. ಇದರಲ್ಲಿ ಹೀರೊ ತಾರಕ್ ಹಾಗೂ ವಿಲನ್ ಸೈಫ್ ನಡುವಿನ ರೋಚಕ ಸನ್ನಿವೇಶಗಳನ್ನು ಸೆರೆಹಿಡಿಯಲಾಗ್ತಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ನಕಲಿ ಬ್ಲಡ್ ಟ್ಯಾಂಕ್ ನಿಲ್ಲಿಸಿರುವ ಫೋಟೊವೊಂದು ಸಖತ್ ವೈರಲ್ ಆಗಿತ್ತು. ಎನ್‌ಟಿಆರ್ ಆರ್ಟ್ಸ್, ಯುವಸುಧ ಆರ್ಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಇದು ತಾರಕ್ 30ನೇ ಆಗಿರುವುದರಿಂದ NTR30 ಹೆಸರಿನಲ್ಲಿ ಕೆಲಸಗಳು ನಡೀತಿದೆ.
ಕೊರೊನಾ ಲಾಕ್‌ಡೌನ್ ಹಾಗೂ 'RRR' ಸಿನಿಮಾ ಚಿತ್ರೀಕರಣ ತಡವಾಗಿ ಜ್ಯೂ. ಎನ್‌ಟಿಆರ್ ಮೂರ್ನಾಲ್ಕು ವರ್ಷ ವ್ಯಯಿಸಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಕಾಯ್ತಿದ್ದಾರೆ. NTR30 ಶೂಟಿಂಗ್ ತಡವಾಗುತ್ತಿರುವುದರಿಂದ ಮುಂದಿನ ಸಿನಿಮಾಗಳು ಮತ್ತಷ್ಟು ನಿಧಾನವಾಗುತ್ತಿದೆ. ಪ್ರಶಾಂತ್ ನೀಲ್ ಜೊತೆ NTR31 ಸಿನಿಮಾ ಮಾಡಬೇಕಿದೆ. ಇನ್ನು ಬಾಲಿವುಡ್‌ಗೂ ತಾರಕ್ ಎಂಟ್ರಿ ಕೊಡ್ತಿದ್ದು ವಾರ್-2 ಚಿತ್ರದಲ್ಲಿ ನಟಿಸಲಿದ್ದಾರೆ. ಹೃತಿಕ್ ರೋಷನ್ ಜೊತೆ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಶೂಟಿಂಗ್ ಶುರು ಮಾಡುವುದು ತಡವಾದರೂ ಬೇಗ ಮುಗಿಸಲು ಕೊರಟಾಲ ಶಿವ ಮನಸ್ಸು ಮಾಡಿದ್ದಾರೆ.


Click it and Unblock the Notifications











