SSMB29: ಮಹೇಶ್- ಮೌಳಿ ಸಿನಿಮಾ ಗುಟ್ಟು ರಟ್ಟು ಮಾಡಿದ ಒಡಿಶಾ ಡಿಸಿಎಂ; ಜಕ್ಕಣ್ಣ ಶಾಕ್!
ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಒಡಿಶಾದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಾವುದೇ ಸುಳಿವು ಬಿಟ್ಟುಕೊಡದೇ ಜಕ್ಕಣ್ಣ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.
'RRR' ಬಳಿಕ ಮಹೇಶ್ ಬಾಬು ಜೊತೆ ಮುಂದಿನ ಸಿನಿಮಾ ಮಾಡುತ್ತಿರುವುದಾಗಿ ಮೌಳಿ ಹೇಳಿದ್ದರು. ಆದರೆ ಅಧಿಕೃತವಾಗಿ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹೊಸ ವರ್ಷದ ಆರಂಭದಲ್ಲೇ ಸಿನಿಮಾ ಮುಹೂರ್ತ ನಡೆದಿತ್ತು. ಆದರೆ ಈ ಬಗ್ಗೆ ಕೂಡ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಪೋಸ್ಟರ್ ಅಥವಾ ಟೀಸರ್ ಸಮೇತ ಸಿನಿಮಾ ಘೋಷಣೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡ್ತಿದೆ.

ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಾಜಮೌಳಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದ ಕಥೆ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೊಂದು ಗ್ಲೋಬಲ್ ಟ್ರಾಟಿಂಗ್ ಅಡ್ವೆಂಚರಸ್ ಸಿನಿಮಾ ಎಂದು ಮಾತ್ರ ಜಕ್ಕಣ್ಣ ಹೇಳಿದ್ದಾರೆ. 1000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುವ ನಿರೀಕ್ಷೆಯಿದೆ.
ಒಡಿಶಾದ ಕೊರಾಪುಟ್ ಬೆಟ್ಟಗುಡ್ಡಗಳ ಬಳಿ SSMB29 ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್ ಬಗ್ಗೆ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಮೌಳಿ ಎಚ್ಚರಿಕೆ ವಹಿಸಿದ್ದಾರೆ. ಅದಕ್ಕಾಗಿ ತಂಡದವರ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಮೇಕಿಂಗ್ ಫೋಟೊ, ವೀಡಿಯೋ ಲೀಕ್ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆದರೂ ಅದೆಲ್ಲವನ್ನು ಮೀರಿ ಇತ್ತೀಚೆಗೆ ಚಿತ್ರದ ಶೂಟಿಂಗ್ ಝಲಕ್ ಲೀಕ್ ಆಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿತ್ತು. ಬಳಿಕ ಅದನ್ನು ಚಿತ್ರತಂಡ ಡಿಲೀಟ್ ಮಾಡುವ ಪ್ರಯತ್ನ ಮಾಡಿತ್ತು. ವೀಲ್‌ಚೇರ್‌ನಲ್ಲಿ ಕುಳಿತ ಪೃಥ್ವಿರಾಜ್ ಬಳಿಗೆ ಮಹೇಶ್ ಬಾಬು ಸ್ಟೈಲ್ ಆಗಿ ನಡೆದು ಬರುವ ಸನ್ನಿವೇಶ ಚಿತ್ರೀಕರಣ ಅದಾಗಿತ್ತು. ಅದನ್ನು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಇಷ್ಟೆಲ್ಲಾ ಆದರೂ ಚಿತ್ರತಂಡ ಮಾತ್ರ ಮೌನ ವಹಿಸಿದೆ. ಅಧಿಕೃತವಾಗಿ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿಲ್ಲ. ಇದೀಗ SSMB29 ಚಿತ್ರದ ಚಿತ್ರೀಕರಣದ ಬಗ್ಗ ಒಡಿಶಾ ಡಿಸಿಎಂ ಪ್ರವತಿ ಪರಿದಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಒಡಿಶಾ ಪ್ರವಾಸೋದ್ಯಮ ಬಗ್ಗೆ ಪ್ರಸ್ತಾಪಿಸಿ ಒಡಿಶಾ ಡಿಸಿಎಂ ಪ್ರವತಿ ಪರಿದಾ ಟ್ವೀಟ್ ಮಾಡಿದ್ದಾರೆ. "ಈ ಹಿಂದೆ ಮಲ್ಕನ್‌ಗಿರಿಯಲ್ಲಿ ಪುಷ್ಪ-2, ಮತ್ತು ಈಗ, ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ SSMB 29 ಚಿತ್ರವು ಕೊರಾಪುಟ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಒಡಿಶಾ ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಅದ್ಭುತ ಲೊಕೇಶನ್‌ಗಳನ್ನು ಹೊಂದಿದೆ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
"ಇಂತಾದೊಂದು ದೊಡ್ಡ ಸಿನಿಮಾ ಚಿತ್ರೀಕರಣ ಒಡಿಶಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಈ ಬೆಳವಣಿಗೆ ಒಡಿಶಾವನ್ನು ಶೂಟಿಂಗ್ ತಾಣವನ್ನಾಗಿ ಮಾಡುತ್ತದೆ. ಒಡಿಶಾ ಹೇಗಿದೆ ಎನ್ನುವುದನ್ನು ಅನ್ವೇಷಿಸಲು ಎಲ್ಲಾ ಚಲನಚಿತ್ರೋದ್ಯಮಗಳನ್ನು ನಾವು ಸ್ವಾಗತಿಸುತ್ತೇವೆ.ತು ಸಂಪೂರ್ಣ ಬೆಂಬಲ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯದ ಭರವಸೆ ನೀಡುತ್ತೇವೆ" ಎಂದು ಒಡಿಶಾ ಡಿಸಿಎಂ ವಿವರಿಸಿದ್ದಾರೆ.
ಸದ್ಯ ಒಡಿಶಾ ಡಿಸಿಎಂ ಪ್ರವತಿ ಪರಿದಾ ಟ್ವೀಟ್ ಮಹೇಶ್ ಬಾಬು ಅಭಿಮಾನಿಗಳ ಗಮನ ಸೆಳೆದಿದೆ. SSMB29 ಸಿನಿಮಾ ಚಿತ್ರೀಕರಣದ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಂತಾಯಿತು. ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











