ದೇವರಕೊಂಡನೇ ನನ್ನ ಗಂಡ ಎಂದು ಅಧಿಕೃತವಾಗಿ ಘೋಷಿಸಿದ ರಶ್ಮಿಕಾ ; ಅಭಿಮಾನಿಗಳ ಬಯಕೆಗೆ ಅಸ್ತು ಎಂದ ಹೈದರಾಬಾದ್ ಸೊಸೆ
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ.
ಇನ್ನೂ ಮದುವೆ ವಿಚಾರಕ್ಕೆ ಬಂದರೆ, ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮತ್ತು ಲವ್ ಸ್ಟೋರಿ ಸಿನಿಮಾದಷ್ಟೇ ರೋಚಕ. ಕೊನೆ ಕ್ಷಣದವರೆಗೆ ಕೂಡ ತಮ್ಮ ನಿಜ ಜೀವನದಲ್ಲಿನ ಪ್ರೇಮಕಥೆಯ ಕ್ಲೈಮ್ಯಾಕ್ಸ್‌ನ ಗುಟ್ಟು ಇವರು ರಟ್ಟು ಮಾಡುವುದಿಲ್ಲ.

ಬದಲಿಗೆ ಏನಿಲ್ಲ.. ಏನಿಲ್ಲ.. ಎಂಬ ಹಾಡು ಹಾಡುತ್ತಲೇ ಇಲ್ಲಿ ಹಲವರು ಹಸೆಮಣೆಯನ್ನೇರುತ್ತಾರೆ. ಉದಾಹರಣೆಗೆ ರಣ್‌ಬೀರ್ ಕಪೂರ್-ಆಲಿಯಾ ಭಟ್.. ಸಿದ್ದಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ.. ವಿಕ್ಕಿ ಕೌಶಲ್-ಕತ್ರಿನಾ ಕೈಫ್.. ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ.. ಇವರಷ್ಟೇ ಅಲ್ಲ, ಇನ್ನೂ ಹಲವರು ಈ ಸಾಲಿನಲ್ಲಿದ್ದಾರೆ. ಈ ಸಾಲಿಗೆ ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಧಿಕೃತವಾಗಿ ಸೇರಿಕೊಂಡಿದ್ಧಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ತಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿತ್ತು.
ಆದರೆ.. ವಿಜಯ್ ದೇವರಕೊಂಡ ಆಗಲಿ ರಶ್ಮಿಕಾ ಮಂದಣ್ಣ ಅವರಾಗಲಿ ಈ ವಿಚಾರದ ಕುರಿತು ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಮಾತನಾಡಬೇಕು ಎನ್ನುವ ಭಾವನೆ ಕೂಡ ಇಬ್ಬರಲ್ಲಿಯೂ ಬಂದಿರಲಿಲ್ಲ. ಬದಲಿಗೆ ಅಡ್ಡ ಗೋಡೆಯ ಮೇಲೆ ದೀಪವನ್ನು ರಶ್ಮಿಕಾ ಮಂದಣ್ಣ ಇಡುತ್ತಾ ಬಂದಿದ್ದರು. ಇವರ ಮದುವೆಯ ಕುರಿತು ಊರೆಲ್ಲ ಚಿಂತೆ ಮಾಡುತ್ತಿದ್ದರೂ ಕೂಡ ಇಬ್ಬರು ಮಾತ್ರ ನೆಮ್ಮದಿಯಿಂದ ಜೊತೆ ಜೊತೆಯಾಗಿ ಓಡಾಡಿಕೊಂಡು ಇದ್ದರು.
ಆದರೆ, ಈಗ ಇವರ ಮದುವೆ ಚಿಂತೆ ಮಾಡುತ್ತಿದ್ದವರು ನೆಮ್ಮದಿಯಾಗಿ ಮಲಗುವ ದಿನ ಬಂದಿದೆ. ಯಾಕೆಂದರೆ ತಮ್ಮ ಕುರಿತು ಕೇಳಿ ಬರುತ್ತಿದ್ದ ಅಂತೆ-ಕಂತೆಗಳಿಗೆಲ್ಲಾ ಸಾಕ್ಷಾತ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆರೆ ಎಳೆದಿದ್ದಾರೆ. ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿ, ಅಭಿಮಾನಿಗಳು ಸೂಚಿಸಿದ್ದ ಹೆಸರನ್ನೇ ತಮ್ಮ ಮದುವೆಗೆ ಇಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳ ಬಹುದಿನದ ಆಸೆ ಮತ್ತು ಬಯಕೆಯನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಡೇರಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಣೆಯನ್ನು ಹೊರಡಿಸಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ''ನಮ್ಮ ಪ್ರೀತಿ ಪಾತ್ರರೇ.. ನಾವು ಯಾವುದೇ ಯೋಜನೆಗಳನ್ನು ರೂಪಿಸುವ ಮುನ್ನ, ನಮಗಾಗಿ ನಾವು ಏನನ್ನಾದರೂ ಆಯ್ಕೆ ಮಾಡುವ ಮೊದಲೇ-
ನೀವು ಅಲ್ಲಿರುತ್ತಿದ್ದಿರಿ. ನಮಗೆ ಅತೀವವಾದ ಪ್ರೀತಿಯನ್ನು ನೀಡಿ, ಒಂದು ಹೆಸರನ್ನು ಕೊಟ್ಟಿದ್ದೀರಿ. ನಮ್ಮನ್ನು "ವಿರೋಷ್" (VIROSH) ಎಂದು ಕರೆದಿದ್ದೀರಿ.ಹಾಗಾಗಿ ಇಂದು ತುಂಬಿದ ಹೃದಯದಿಂದ, ನಮ್ಮ ಈ ಹೊಸ ಪ್ರಯಾಣಕ್ಕೆ ನಿಮ್ಮ ಗೌರವಾರ್ಥವಾಗಿ ಹೆಸರಿಡುತ್ತಿದ್ದೇವೆ." ದಿ ವೆಡ್ಡಿಂಗ್ ಆಫ್ ವಿರೋಷ್'' ಎಂದು ಕರೆಯಲು ನಾವು ಇಚ್ಛಿಸುತ್ತೇವೆ.ನಮ್ಮನ್ನು ಇಷ್ಟೊಂದು ಪ್ರೀತಿಯಿಂದ ಅಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು.ನೀವು ಯಾವಾಗಲೂ ನಮ್ಮ ಬದುಕಿನ ಬಹುಮುಖ್ಯ ಭಾಗವಾಗಿರುತ್ತೀರಿ'' ಎಂದು ಹೇಳಿದ್ದಾರೆ. ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅಧಿಕೃತವಾಗಿ ತಮ್ಮ ಮದುವೆ ಸುದ್ದಿಯನ್ನು ಹೇಳಿದ್ದಾರೆ.
ಇನ್ನುಳಿದಂತೆ ಮದುವೆ ಫೆಬ್ರವರಿ 26ರಂದು ನಡೆಯಲಿದ್ದು, ನಿನ್ನೆಯಿಂದ (ಫೆಬ್ರವರಿ 22) ಮದುವೆಯ ಶಾಸ್ತ್ರಗಳು ಆರಂಭವಾಗಿವೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಫೆಬ್ರವರಿ 24ಕ್ಕೆ ಮೆಹಂದಿ ಶಾಸ್ತ್ರ, ಫೆಬ್ರವರಿ 25ಕ್ಕೆ ಹಳದಿ ಶಾಸ್ತ್ರ ನಡೆಯಲಿದೆ ಎಂಬ ಮಾತು ಚಿತ್ರನಗರಿಯಲ್ಲಿ ಕೇಳಿ ಬರುತ್ತಿದೆ. ಮಾರ್ಚ್ 4ರಂದು ಹೈದರಾಬಾದ್‌ನ ತಾಜ್‌ಕೃಷ್ಣದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್‌ನ ಹಲವು ಸ್ಟಾರ್ ಗಳು ಆರತಕ್ಷತೆ ಮತ್ತು ಮದುವೆ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.



Click it and Unblock the Notifications











