ಆ ಫೋಟೊಗಳನ್ನು ವೈರಲ್ ಮಾಡಬೇಡಿ; 'OG' ಸಿನಿಮಾ ನಾಯಕಿ ಪ್ರಿಯಾ ಮೋಹನ್ ಮನವಿ ಮಾಡಿದ್ದೇಕೆ?
ತಮಿಳು ನಟಿ ಪ್ರಿಯಾಂಕ ಮೋಹನ್ 'OG' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಚೆಲುವೆ ಬಳಿಕ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ಮಿಂಚಿದ್ದರು. ಪವನ್ ಕಲ್ಯಾಣ್ ಜೋಡಿಯಾಗಿ ನಟಿಸಿ ಇದೀಗ ಸೈ ಎನಿಸಿಕೊಂಡಿದ್ದಾರೆ.
ಸುಜಿತ್ ನಿರ್ದೇಶನದ 'OG' ಚಿತ್ರ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಗ್ಯಾಂಗ್‌ಸ್ಟರ್ ಕಥಾಹಂದರದ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದಲ್ಲಿ ಪವನ್ ಪತ್ನಿ ಪಾತ್ರದಲ್ಲಿ ಪ್ರಿಯಾಂಕ ನಟಿಸಿದ್ದಾರೆ. ತೆರೆಮೇಲೆ ಸದಾ ಡಿ- ಗ್ಲಾಮರಸ್ ಆಗಿಯೇ ಆಕೆ ಕಾಣಿಸಿಕೊಳ್ಳುತ್ತಾರೆ. ಸ್ಕಿನ್ ಶೋನಿಂದ ದೂರ ಇರುತ್ತಾರೆ. ಆದರೆ ದಿಢೀರನೆ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಹಾಟ್ ಫೋಟೋ, ವೀಡಿಯೋಗಳು ವೈರಲ್ ಆಗ್ತಿದೆ.

ಸದ್ಯ AI ಟ್ರೆಂಡ್ ಜೋರಾಗಿದೆ. ಫೇಕ್ ಫೋಟೊ, ವಿಡಿಯೋ ಕಾರುಬಾರು ನಡೀತಿದೆ. ಅದರಲ್ಲೂ ನಟ, ನಟಿಯರು ಫೇಕ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿವೆ. ಅದು ನಿಜಾನೋ ಸುಳ್ಳೋ ಎಂದು ಗೊತ್ತಾಗದಷ್ಟು ನೈಜವಾಗಿ ಅದನ್ನು ಕ್ರಿಯೇಟ್ ಮಾಡಲಾಗುತ್ತಿದೆ. ಕೆಲವರು ಇದು ನಿಜ ಎಂದು ನಂಬುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಲಕ್ಷ ಲಕ್ಷ AI ಜನರೇಟ್ ಫೋಟೊ, ವೀಡಿಯೋ ಹರಿದಾಡುತ್ತಿದೆ.
ಇದೀಗ ನಟಿ ಪ್ರಿಯಾಂಕಾ ಮೋಹನ್ ಆ ಫೋಟೊಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. "ನನ್ನನ್ನು ತಪ್ಪಾಗಿ ಬಿಂಬಿಸುವ ಕೆಲವು AI ಜನರೇಟ್ ಚಿತ್ರಗಳು ವೈರಲ್ ಆಗ್ತಿದೆ. ದಯವಿಟ್ಟು ಈ ನಕಲಿ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ನಿಲ್ಲಿಸಿ. AI ಅನ್ನು ಸೃಜನಶೀಲತೆಗಾಗಿ ಬಳಸಬೇಕು, ತಪ್ಪು ಮಾಹಿತಿಗಾಗಿ ಅಲ್ಲ. ನಾವು ಏನು ರಚಿಸುತ್ತೇವೆ ಮತ್ತು ಏನು ಹಂಚಿಕೊಳ್ಳುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿರಿ. ಧನ್ಯವಾದಗಳು" ಎಂದು ಆಕೆ ಟ್ವೀಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಟಿಯರು ಇಂತಹ ಸಾಕಷ್ಟು ಫೋಟೊ, ವೀಡಿಯೋ ಸಿಗುತ್ತವೆ. ಕೆಲವರು ಈ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಕೆಲವರು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣ ಇದನ್ನು ತಡೆಯುವುದು ಅಷ್ಟು ಸುಲಭ ಅಲ್ಲ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು. ಡೀಪ್‌ಫೇಕ್ ಅಪಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು.
ಕಾಜೋಲ್, ಆಲಿಯಾ ಭಟ್ ಸೇರಿದಂತೆ ಸಾಕಷ್ಟು ನಟಿಯರ AI ನಕಲಿ ಫೋಟೊ, ವೀಡಿಯೋಗಳು ಸದ್ದು ಮಾಡಿದ್ದವು. ಇದೀಗ ಪ್ರಿಯಾಂಕ ಮೋಹನ್ ಈ ಬಗ್ಗೆ ಮಾತನಾಡಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಪ್ರಿಯಾಂಕ ಮೂಡಬಿದ್ರಿಯಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದರು. ಬೆಂಗಳೂರಿನ ಪಿಎಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು.
2019ರಲ್ಲಿ 'ಒಂದು ಕತೆ ಹೇಳ್ಲಾ' ಎಂಬ ಕನ್ನಡ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. 'OG' ರೀತಿಯ ದೊಡ್ಡ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ತೆಲುಗಿನ 'ಗ್ಯಾಂಗ್‌ಲೀಡರ್', 'ಸರಿಪೋದ ಶನಿವಾರಂ', ತಮಿಳಿನ 'ಡಾಕ್ಟರ್', 'ಟಿಕ್‌ಟಾಕ್', 'ಕ್ಯಾಪ್ಟನ್ ಮಿಲ್ಲರ್', 'ಬ್ರದರ್' ಸಿನಿಮಾಗಳಲ್ಲಿ ಪ್ರಿಯಾಂಕ ಮೋಹನ್ ನಟಿಸಿದ್ದಾರೆ. ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ.


Click it and Unblock the Notifications











