'OG' ಚಿತ್ರಕ್ಕಾಗಿ ಪವನ್, ಸುಜಿತ್, ತಮನ್ ಪಡೆದ ಸಂಭಾವನೆ ಎಷ್ಟು?
ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಗುರುವಾರ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ಬಂದ ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಯಾರಿಗೆ ಎಷ್ಟು ಸಂಭಾವನೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.
ಸಾಮಾನ್ಯವಾಗಿ ಸ್ಟಾರ್ ನಟರು ಸಿನಿಮಾಗಳಲ್ಲಿ ನಟಿಸೋಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವುದು ಅಧಿಕೃತವಾಗಿ ಬಹಿರಂಗವಾಗಲ್ಲ. ಅಂತೆ ಕಂತೆ ಸುದ್ದಿಯೇ ಹೆಚ್ಚು. ತೆಲುಗಿನಲ್ಲಿ ಪವನ್ ಕಲ್ಯಾಣ್‌ಗೆ ಭಾರೀ ಕ್ರೇಜ್ ಇದೆ. ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪವನ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಹಿಂದೆ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಮಾತ್ರ ಮುಗಿಸುತ್ತಿದ್ದಾರೆ.

ಈ ಹಿಂದೆ 'ಬ್ರೋ' ಎಂಬ ಚಿತ್ರದಲ್ಲಿ ನಟಿಸಿದ್ದರು. ನಾಯಕನಾಗಿ ಅಲ್ಲದೇ ಇದ್ದರೂ ಬಹಳ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆ ಚಿತ್ರದಲ್ಲಿ ನಟಿಸಲು ಕೇವಲ 22 ದಿನ ಕಾಲ್‌ಶೀಟ್ ಕೊಟ್ಟು 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದರೆ ಹೆಚ್ಚು ಕಮ್ಮಿ ದಿನಕ್ಕೆ 2 ಕೋಟಿ ಸಂಭಾವನೆ ಆಗಿತ್ತು. ಈ ವಿಚಾರವನ್ನು ಸ್ವತಃ ಪವನ್ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಪವನ್ ಕಲ್ಯಾಣ್ ಕ್ರೇಜ್ ಈ ಮಟ್ಟಿಗಿದೆ. ಸಿನಿಮಾ ಗೆದ್ದರೆ ಅದೇ ರೀತಿ ಕಲೆಕ್ಷನ್ ಮಾಡುತ್ತದೆ.
ಸುಜಿತ್ ನಿರ್ದೇಶನದ ಗ್ಯಾಂಗ್‌ಸ್ಟರ್ ಥ್ರಿಲ್ಲರ್ 'OG' ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. 80-90ರ ದಶಕದ ಕಥೆ ಚಿತ್ರದಲ್ಲಿದೆ. ಓಜಸ್ ಗಂಭೀರ ಎಂಬ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಪವನ್ ಗನ್ ಹಿಡಿದು ದರ್ಬಾರ್ ನಡೆಸೋಕೆ ಬರ್ತಿದ್ದಾರೆ. ತಮನ್ ಸಂಗೀತ ಅದಕ್ಕೆ ಜೊತೆಯಾಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಕೆಲವೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ವಿದೇಶಗಳಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಇದೆಲ್ಲದರ ನಡುವೆ ಚಿತ್ರದಲ್ಲಿ ನಟಿಸಿರುವ ಕಲಾವಿದರು ಹಾಗೂ ಕೆಲಸ ಮಾಡಿರುವ ತಂತ್ರಜ್ಞರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ಬಹಳ ಚರ್ಚೆ ಆಗ್ತಿದೆ.
ನಿರ್ದೇಶಕ ಸುಜಿತ್
ಈ ಹಿಂದೆ ಪ್ರಭಾಸ್ ನಟನೆಯ 'ಸಾಹೋ' ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಸೋತರೂ ಸುಜಿತ್ ಕೆಲಸದ ಬಗ್ಗೆ ಮೆಚ್ಉಗೆ ವ್ಯಕ್ತವಾಗಿತ್ತು. ಅಂದಹಾಗೆ ಅವರು ಪವನ್ ಕಲ್ಯಾಣ್ ಅಭಿಮಾನಿ. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಬಹಳ ಸೊಗಸಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರಕ್ಕಾಗಿ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.
ಇಮ್ರಾನ್ ಹಶ್ಮಿ ಪಡೆದಿದ್ದೆಷ್ಟು?
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕ್ರೇಜ್ ಅಲ್ಲಿ ಕಮ್ಮಿ ಆಗಿದೆ. ಆದರೆ 'OG' ಚಿತ್ರದಲ್ಲಿ ಪವನ್ ಎದುರು ವಿಲನ್ ಆಗಿ ಅಬ್ಬರಿಸಿದ್ದಾರೆ. ಚಿತ್ರಕ್ಕಾಗಿ ಬರೋಬ್ಬರಿ 8 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು Telugu Samayam.com ವೆಬ್ ಸೈಟ್ ವರದಿ ಮಾಡಿದೆ. ನಾಯಕಿ ಪ್ರಿಯಾಂಕ ಮೋಹನ್ 1.5 ಕೋಟಿ ರೂ. ಶ್ರೀಯಾ ರೆಡ್ಡಿ 50 ಲಕ್ಷ ರೂ. ಸಂಭಾವನೆ ಪಡೆದಿರುವುದಾಗಿ ಹೇಳಲಾಗಿದೆ.
ತಮನ್ ಮ್ಯಾಜಿಕ್
ಸಂಗೀತ ನಿರ್ದೇಶಕ ತಮನ್ ತಮ್ಮ ಸಾಂಗ್ಸ್ ಮಾತ್ರವಲ್ಲ ಬಿಜಿಎಂನಿಂದಲೂ ಬಹಳ ಸದ್ದು ಮಾಡ್ತಿದ್ದಾರೆ. ಈಗಾಗಲೇ 'OG' ಚಿತ್ರದ ಟ್ರೈಲರ್‌ನಲ್ಲಿರೋ ಬಿಜಿಎಂ ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಹೀಗೆ ಗೆಲ್ಲಿಸಿಬಿಡು ಎಂದು ಮನವಿ ಮಾಡುತ್ತಿದ್ದಾರೆ. ಅಂದಹಾಗೆ ತಮನ್ ಈ ಚಿತ್ರಕ್ಕಾಗಿ 5 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎಂದು ವರದಿಯಾಗಿದೆ.
ಪವನ್ 100 ಕೋಟಿ ರೂ.
ಮೊದಲೇ ಹೇಳಿದಂತೆ ಪವನ್ ಕಲ್ಯಾಣ್ ತಮ್ಮ ಕ್ರೇಜ್‌ಗೆ ತಕ್ಕಂತೆ ಸಂಭಾವನೆ ಪಡೆಯುತ್ತಾರೆ. ಈ ಚಿತ್ರಕ್ಕಾಗಿ ಬರೋಬ್ಬರಿ 80 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗ್ತಿದೆ. ಲಾಭದಲ್ಲಿ ಪಾಲು ಕೇಳಿದ್ದು ಒಟ್ಟಾರೆ 100 ಕೋಟಿ ರೂ. ದಾಟಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











