ಒಂದೇ ಚಿತ್ರದಲ್ಲಿ ಪವನ್- ಪ್ರಭಾಸ್ ನಟಿಸೋದು ಫಿಕ್ಸ್; 'OG' ವೀಕ್ಷಿಸಿದ ಪ್ರಶಾಂತ್ ನೀಲ್
ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ತೆರೆಗಪ್ಪಳಿಸಿ ಸದ್ದು ಮಾಡ್ತಿದೆ. ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಸುಜಿತ್ ನಿರ್ದೇಶನ, ಪವನ್ ಪರ್ಫಾರ್ಮೆನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರೇಕ್ಷಕರ ಜೊತೆ 'OG' ಸಿನಿಮಾ ವೀಕ್ಷಿಸಿದ್ದಾರೆ.
ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದಾರೆ. ಹಾಗಾಗಿ ಬಿಡುಗಡೆ ಆಗುತ್ತಿರುವ ಅವರ ಕೊನೆ ಸಿನಿಮಾಗಳ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಈ ಹಿಂದೆ 'ಸಾಹೋ' ಚಿತ್ರ ಕಟ್ಟಿಕೊಟ್ಟಿದ್ದ ಸುಜಿತ್ ಇದೀಗ 'OG' ಕಥೆ ಹೇಳಿದ್ದಾರೆ. ಎರಡೂ ಸಿನಿಮಾಗಳಿಗೆ ಲಿಂಕ್ ಇದೆ, ಸುಜಿತ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಎರಡೂ ಕಥೆಗಳು ಬರುತ್ತವೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿತ್ತು. 'OG' ಸಿನಿಮಾ ನೋಡಿದ ಮೇಲೆ ಅದು ಪಕ್ಕಾ ಆಗಿದೆ.

ಡಿವಿವಿ ದಾನಯ್ಯ 'OG' ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ನ್ಯೂನ್ಯತೆಗಳ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದೆ. ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲುವ ಸುಳಿವು ಸಿಗುತ್ತಿದೆ. 'OG' ಸಿನಿಮಾ ನೋಡಲು ಮೆಗಾ ಫ್ಯಾಮಿಲಿ ಸ್ಟಾರ್ಸ್, ಪವನ್ ಪುತ್ರ ಅಕಿರಾ ಸೇರಿದಂತೆ ಹಲವರು ಚಿತ್ರಮಂದಿರಕ್ಕೆ ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಸದ್ಯ ಜ್ಯೂ. ಎನ್‌ಟಿಆರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಹೈದರಾಬಾದ್‌ನಲ್ಲೇ ಬೀಡು ಬಿಟ್ಟಿದ್ದಾರೆ.
ಹೈದರಾಬಾದ್ ವಿಮಲ್ ಚಿತ್ರಮಂದಿರದಲ್ಲಿ ಪ್ರಶಾಂತ್ ನೀಲ್ ಹಾಗೂ ಅಕಿರಾ 'OG' ಸಿನಿಮಾ ವೀಕ್ಷಿಸಿದರು. ಇಬ್ಬರೂ ಕೈ ಕುಲುಕಿದ ವೀಡಿಯೋ ಸಹ ವೈರಲ್ ಆಗುತ್ತಿದೆ. ಪವನ್ ಪುತ್ರಿ ಆದ್ಯ ಹಾಗೂ ಸೋದರಳಿಯ ವೈಷ್ಣವ್ ತೇಜ್ ಕೂಡ ಈ ವೇಳೆ ಅಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಮೋಸಾಪೇಟ್‌ನಲ್ಲಿರುವ ಶ್ರೀರಾಮುಲು ಚಿತ್ರಮಂದಿರದಲ್ಲಿ ಸಾಯಿ ಧರಮ್ ತೇಜ್ ಹಾಗೂ ವರುಣ್ ತೇಜ್, ನಿರ್ದೇಶಕ ಹರೀಶ್ ಶಂಕರ್ 'OG' ಸಿನಿಮಾ ನೋಡಿದ್ದಾರೆ.
'OG' ಚಿತ್ರಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ಟಾಕ್ ಬರ್ತಿದೆ. ಮುಖ್ಯವಾಗಿ ಪವನ್ ನಟನೆ ಹಾಗೂ ತಮನ್ ಸಂಗೀತದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರಭಾಸ್ ನಟಿಸಿದ್ದ 'ಸಾಹೋ' ಚಿತ್ರಕ್ಕೂ 'OG' ಚಿತ್ರಕ್ಕೂ ಲಿಂಕ್ ಇಟ್ಟು ಸುಜಿತ್ ಅಚ್ಚರಿ ಮೂಡಿಸಿದ್ದಾರೆ. 6 ವರ್ಷಗಳ ಹಿಂದೆ ಬಂದಿದ್ದ 'ಸಾಹೋ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಸುಜಿತ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂದೊಂದು ದಿನ 'ಸಾಹೋ' ಪಾರ್ಟ್-2 ಬರಬಹುದು ಎಂದು ಪ್ರಭಾಸ್ ಕೂಡ ಹೇಳಿದ್ದರು. ಹಾಗಾಗಿ ಪವನ್ ಹಾಗೂ ಪ್ರಭಾಸ್ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ.
'ಸಾಹೋ' ಚಿತ್ರದಲ್ಲಿದ್ದ ರಾಯ್ ಹಾಗೂ ಲಾಲ್ ಪಾತ್ರಗಳನ್ನು 'OG' ಚಿತ್ರದಲ್ಲಿ ತೋರಿಸಿ ಸುಜಿತ್ ಕುತೂಹಲ ಮೂಡಿಸಿದ್ದಾರೆ. ಎರಡೂ ಕಥೆಗಳಿಗೆ ಇರುವ ಲಿಂಕ್ ಏನು ಎಂದು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದಾರೆ. ಮುಂದೆ ಹೀರೊ ನಾನಿ ನಟನೆಯ ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆ ಚಿತ್ರದ ಕಥೆಯನ್ನು ಕೂಡ ಇದಕ್ಕೆ ಲಿಂಕ್ ಮಾಡಿ ಮುಂದೆ ಮೂವರನ್ನು ಒಂದೇ ಚಿತ್ರದಲ್ಲಿ ತೋರಿಸಿದರೂ ಅಚ್ಚರಿ ಪಡಬೇಕಿಲ್ಲ.
ದಸರಾ ಸಂಭ್ರಮದಲ್ಲಿ 'OG' ಸಿನಿಮಾ ಬಿಡುಗಡೆ ಆಗಿದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರಲ್ಲಿದೆ.


Click it and Unblock the Notifications











