ಅದೇ ಅರ್ಜುನ್ ರೆಡ್ಡಿ ಶೈಲಿಯ ಪೋಸ್ಟರ್ ಲಾಂಚ್ ಮಾಡಿದ ಚಿತ್ರತಂಡ; ಬೇಸತ್ತ ಸಿನಿ ರಸಿಕರು!
2017ರಲ್ಲಿ ತೆರೆಕಂಡ ವಿಜಯ್ ದೇವರಕೊಂಡ ಹಾಗೂ ಸಂದೀಪ್ ರೆಡ್ಡಿ ವಾಂಗಾ ಕಾಂಬಿನೇಶನ್‌ನ ಅರ್ಜುನ್ ರೆಡ್ಡಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿ ಟ್ರೆಂಡ್ ಸೆಟ್ ಮಾಡಿತ್ತು. ಆದರೆ ಈ ಟ್ರೆಂಡ್ ಹೆಚ್ಚು ಮೈಲೇಜ್ ನೀಡುವಂತಹದ್ದಾಗಿರಲಿಲ್ಲ. ಹಸಿಬಿಸಿ ಲಿಪ್ ಲಾಕ್ ದೃಶ್ಯಗಳು, ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದು ನೋಡಲಾಗದಂತಹ ಸಂಭಾಷಣೆ, ಆಗಾಗ ಮದ್ಯಪಾನ, ಬಿಡುವಿಲ್ಲದಷ್ಟು ಸಿಗರೇಟ್ ಸೇದುವ ನಾಯಕನ ದೃಶ್ಯಗಳಿಂದ ಕೂಡಿದ್ದ ಅರ್ಜುನ್ ರೆಡ್ಡಿ ರೀತಿಯೇ ಮತ್ತೆ ಸಿನಿಮಾ ಮಾಡ್ತೇವೆ ಎಂದಾಗಲೆಲ್ಲಾ ಆಡಿಯನ್ಸ್ ದೊಡ್ಡ ಮಟ್ಟದಲ್ಲಿ ಹೇಳಿದ್ದು ಬೇಡ ಎಂದೇ.
ಅರ್ಜುನ್ ರೆಡ್ಡಿ ಶೈಲಿಯಲ್ಲಿ ಬಂದ ಕೆಲ ಚಿತ್ರಗಳು ಹೇಳ ಹೆಸರಿಲ್ಲದಂತೆ ಸೋತುಬಿಟ್ಟವು. ಕಲ್ಟ್ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಅರ್ಜುನ್ ರೆಡ್ಡಿ ಚಿತ್ರವನ್ನು ಮೆಚ್ಚಿಕೊಂಡಷ್ಟು ಅದೇ ಮಾದರಿಯಲ್ಲಿ ಬಂದ ಚಿತ್ರಗಳನ್ನು ಸ್ವೀಕರಿಸಲೇ ಇಲ್ಲ. ಹೀಗೆ ಹಲವು ಚಿತ್ರಗಳು ಸೋತರೂ ಸಹ ಇದೀಗ ತೆಲುಗಿನ ಚಿತ್ರತಂಡವೊಂದು ಅರ್ಜುನ್ ರೆಡ್ಡಿ ಮಾದರಿಯಲ್ಲಿಯೇ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಂದ ಕೆಟ್ಟ ಪ್ರತಿಕ್ರಿಯೆ ಪಡೆದುಕೊಂಡಿದೆ.
ಹೌದು, ತೆಲುಗಿನ ಹಲವು ಚಿತ್ರಗಳಲ್ಲಿ ಬಾಲ ನಟನಾಗಿ ಬಣ್ಣ ಹಚ್ಚಿದ್ದ ನಟ ದೀಪಕ್ ಸರೋಜ್ ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದು, ಹರಿ ಶಂಕರ್ ಹಾಗೂ ವಂಶಿ ಪೈಡಿಪಲ್ಲಿ ರೀತಿಯ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಿ ಅನುಭವವಿರುವ ವಿ ಯಶಸ್ವಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ರೆಡ್ಡಿ ರೀತಿಯೇ 'ಸಿದ್ಧಾರ್ಥ್ ರಾಯ್' ಎಂಬ ಶೀರ್ಷಿಕೆ ಇಡಲಾಗಿದ್ದು, ಬಿಡುಗಡೆಯಾಗಿರುವ ಪೋಸ್ಟರ್‌ಗಳಲ್ಲಿ ನಟ ವಿಜಯ್ ದೇವರಕೊಂಡ ರೀತಿಯೇ ಉದ್ದನೆಯ ಕೂದಲು ಬಿಟ್ಟುಕೊಂಡು ಸಿಗರೇಟ್ ಸೇದಿ ಹೊಗೆ ಬಿಡುತ್ತಿದ್ದಾನೆ ಹಾಗೂ ನಟಿ ಜತೆ ಲಿಪ್ ಲಾಕ್ ಮಾಡುತ್ತಿದ್ದಾನೆ.

ಈ ಪೋಸ್ಟರ್ ಕಂಡ ತೆಲುಗು ಸಿನಿ ರಸಿಕರು ಇನ್ನೆಷ್ಟು ದಿನಗಳವರೆಗೆ ಅದೇ ಅರ್ಜುನ್ ರೆಡ್ಡಿ ಹಾದಿಯಲ್ಲಿ ಸಾಗುತ್ತೀರ, ಅದರಿಂದ ಆಚೆ ಬನ್ನಿ, ಕೆಲವೊಂದು ದೃಶ್ಯಗಳಾದರೆ ಓಕೆ, ಈ ರೀತಿ ಪೋಸ್ಟರ್‌ನಲ್ಲೂ ಸಹ ಅದೇ ಚಿತ್ರವನ್ನು ಫಾಲೋ ಮಾಡುವುದು ಚಿತ್ರದ ಮೇಲೆ ನಿರೀಕ್ಷೆ ಸಾಯುವಂತೆ ಮಾಡುತ್ತದೆ ಎಂದು ಕಾಮೆಂಟ್ ಮಾಡಿ ನಿರಾಸೆ ಹೊರಹಾಕಿದ್ದಾರೆ.


Click it and Unblock the Notifications











