ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ಆಸ್ಕರ್ ವಿನ್ನರ್ ಸೌಂಡ್ ಡಿಸೈನರ್
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲು ಅರ್ಜುನ್ ಲುಕ್, ಅಭಿನಯ, ಆಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಟೀಸರ್ ನೋಡಿದ ಮೇಲೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಇಮ್ಮಡಿಯಾಗಿದೆ. ಅಂದ ಹಾಗೆ ಪುಷ್ಪ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರಕ್ಕೆ ಆಸ್ಕರ್ ವಿನ್ನರ್ ಸೌಂಡ್ ಡಿಸೈನರ್ ಎಂಟ್ರಿ ಕೊಟ್ಟಿದ್ದಾರೆ.
ಈ ಸುದ್ದಿ ಅಲ್ಲು ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ನೀಡಿದೆ. ಖ್ಯಾತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ಪುಷ್ಪ ಚಿತ್ರದ ಧ್ವನಿ ವಿನ್ಯಾಸ ಮಾಡಲಿದ್ದಾರೆ. ಈಗಾಗಲೇ ರೆಸೂಲ್ ಚಿತ್ರಕ್ಕೆ ಪದಾರ್ಪಣೆ ಮಾಡಿದ್ದು, ಸಿನಿಮಾತಂಡ ಅದ್ದೂರಿಯಾಗಿ ಸ್ವಾಗತಿಸಿದೆ. ಪೂಕುಟ್ಟಿ ಹಿಂದಿ ಮತ್ತು ಮಲಯಾಳಂ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಒಂದು ಸಿನಿಮಾ ಮತ್ತು ತಮಿಳಿನ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದೀಗ ಪುಷ್ಪ ಮೂಲಕ ಮೊದಲ ಬಾರಿಗೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಪುಷ್ಪ ಹೇಗೆ ಮೂಡಿಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಪುಷ್ಪ ಗಂಧದ ಮರ ಕಳ್ಳಸಾಗಣಿಕೆ ಬಗ್ಗೆ ಇರುವ ಸಿನಿಮಾ. ಅಲ್ಲು ಅರ್ಜುನ್ ಪುಷ್ಪರಾಜ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಫಹಾದ್ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕನ್ನಡದ ನಟ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











