ನಮ್ಮಿಬ್ಬರ ಮಧ್ಯೆ ಜಗಳ ತಂದಿಟ್ರು, ಈಗ ಅವ್ರು ಖುಷಿಯಾಗಿರ್ಲಿ; ಎಸ್. ಜಾನಕಿ ನೆನೆದು ಪಿ. ಸುಶೀಲ ಭಾವುಕ
ಖ್ಯಾತ ಗಾಯಕಿ ಎಸ್. ಜಾನಕಿ ಇಹಲೋಕ ತ್ಯಜಿಸಿದ್ದಾರೆ. ತಾವು ಬಹಳ ಇಷ್ಟಪಡುತ್ತಿದ್ದ ಮೈಸೂರಿನಲ್ಲೇ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸಾಕಷ್ಟು ಅಭಿಮಾನಿಗಳು, ಗಣ್ಯರು ಎಸ್. ಜಾನಕಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಸಂಖ್ಯಾತ ಜನ ನುಡಿನಮನ ಸಲ್ಲಿಸಿದ್ದಾರೆ. ಸಾಕಷ್ಟು ಜನ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಸಿನಿಮಾ ತಾರೆಯರು ಗಾನಕೋಗಿಲೆ ಜೊತೆಗಿನ ಒಡನಾಟ ನೆನೆದಿದ್ದಾರೆ. ಇದೀಗ ಖ್ಯಾತ ಗಾಯಕಿ ಪಿ. ಸುಶೀಲ ಪ್ರತಿಕ್ರಿಯಿಸಿದ್ದಾರೆ.
ವೀಡಿಯೋ ಮಾಡಿ ಹಿರಿಯ ಗಾಯಕಿ ಮಾತನಾಡಿದ್ದಾರೆ. ಎಸ್. ಜಾನಕಿ ಜೊತೆಗಿನ ಒಡನಾಟ, ಸ್ನೇಹ, ಭಿನ್ನಾಭಿಪ್ರಾಯ, ಜಗಳ ಎಲ್ಲದ್ದರ ಬಗ್ಗೆ ಮೆಲುಕು ಹಾಕಿದ್ದಾರೆ. ಕೆಲವರು ನಮ್ಮಿಬ್ಬರ ಬಗ್ಗೆ ನಡುವೆ ತಂದಾಕಿ ತಮಾಷೆ ನೋಡಿದ್ರು, ಈಗ ಅವ್ರು ಖುಷಿಯಾಗಿರ್ಲಿ ಎಂದು ನೋವು ತೋಡಿಕೊಂಡಿದ್ದಾರೆ. ಪಿ. ಸುಶೀಲ ಹೇಳಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಭಾರತೀಯ ಚಿತ್ರರಂಗದ ಇಬ್ಬರು ಅದ್ಭುತ ಗಾಯಕಿಯರು ಎಸ್. ಜಾನಕಿ ಹಾಗೂ ಪಿ. ಸುಶೀಲ. ಸಮಕಾಲೀನರಾದ ಇಬ್ಬರೂ ತಮ್ಮ ಕೋಗಿಲ ಕಂಠದಿಂದ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಎಸ್. ಜಾನಕಿ ರೀತಿಯಲ್ಲಿ ಪಿ. ಸುಶೀಲ ಕೂಡ ವಿವಿಧ ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಗೀತೆಗಳಿಗೆ ದನಿಯಾಗಿದ್ದಾರೆ. ನನಗಿಂತ ಎಸ್. ಜಾನಕಿ ಒಳ್ಳೆ ಗಾಯಕಿ ಎನ್ನುವಂತೆ ಪಿ. ಸುಶೀಲ ಹೇಳಿದ್ದಾರೆ.
"ನಾವಿಬ್ಬರು ಮದ್ರಾಸ್‌ನಲ್ಲಿ ಎರಡು ಪರ್ತತಗಳ ರೀತಿ ಇದ್ವಿ. ಚಿತ್ರರಂಗವನ್ನು ಗಡಗಡ ನಡುಗಿಸಿದ್ದೆವು. ಅದ್ಯಾಕೋ ದೇವರು ಆಕೆಗೆ ಪೆಟ್ಟಿನ ಮೇಲೆ ಪೆಟ್ಟು ಕೊಟ್ಟು ಕರೆದುಕೊಂಡು ಹೋಗಿಬಿಟ್ಟ. ಇಷ್ಟು ಬಗೆಗಳಲ್ಲಿ ಆಕೆ ಹಾಡುತ್ತಿದ್ಲು ಊಹಿಸೋಕೆ ಸಾಧ್ಯವಿಲ್ಲ.. ನನಗಿಂತ ಹೆಚ್ಚು ಎನ್ನುವಂತೆ ಆಕೆಗೆ ನನ್ನ ಹೆಸರಿನಲ್ಲಿ ಪ್ರಶಸ್ತಿ ಕೊಟ್ರು.. ಅದು ಒಂದೇ ನಾನು ಜೀವನದಲ್ಲಿ ಒಳ್ಳೆ ಕೆಲಸ. ನಾನು ಹುಟ್ಟುವುದು, ಹೊರಟು ಹೋಗುವುದು ಗೊತ್ತಾಗಲ್ಲ.. ಆದ್ರೆ ನಮ್ಮ ಬಂಧ ಶಾಶ್ವತ.. ನಾನೇ ಯಾವ್ದೋ ಸಣ್ಣಪುಟ್ಟ ಡುಯೆಟ್ ಸಾಂಗ್ಸ್ ಹಾಡ್ತಿದ್ದೆ.. ಆಕೆಯ ಧ್ವನಿಯಲ್ಲಿ ಪುರುಷ, ವೃದ್ಧ ಹಾಗೂ ಚಿಕ್ಕ ಮಕ್ಕಳ ಧ್ವನಿಗಳು ಅದ್ಭುತವಾಗಿ ಮೂಡಿ ಬರ್ತಿತ್ತು. ಪ್ರೇಕ್ಷಕರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎನ್ನುವುದು ಆಕೆಗೆ ಗೊತ್ತಿತ್ತು. ನಾನು ಬರೀ ಉತ್ಸವ ಮೂರ್ತಿ ಅಷ್ಟೆ. ನನ್ನ ಸಹೋದರಿ ಜಾನಕಿ ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಅಳುವುದಕ್ಕೆ ಕಣ್ಣಲ್ಲಿ ನೀರು ಬರ್ತಿಲ್ಲ" ಎಂದು ಪಿ. ಸುಶೀಲ ಭಾವುಕರಾಗಿದ್ದಾರೆ.
ಇಲ್ಲಿ ನೀನು ಕಛೇರಿ ಮಾಡಬೇಕು, ಹಾಡಬೇಕು ಬಾ ಎಂದು ಜಾನಕಿಯನ್ನು ಸರಸ್ವತಿ ದೇವಿ ಕರೆದುಕೊಂಡುಬಿಟ್ಟಿದ್ದಾಳೆ. ಈ ಅದೃಷ್ಟ ಯಾರಿಗೂ ಸಿಗಲ್ಲ ಎಂದು ಪಿ. ಸುಶೀಲ ಹೇಳಿದ್ದಾರೆ. "ಇದ್ದಷ್ಟು ದಿನ ನಮ್ಮನ್ನು ಗೋಳು ಹುಯ್ದುಕೊಂಡ್ರು.. ನನ್ನ ಮೇಲೆ ಆಕೆಗೆ ಹೇಳಿ, ಆಕೆಯ ಮೇಲೆ ನನಗೆ ಹೇಳಿ ತಂದಿಟ್ಟು ತಮಾಷೆ ನೋಡಿದ್ರು. ಈಗ ಅವ್ರು ತಂಪಾಗಿರ್ಲಿ.. ಇದೆಲ್ಲಾ ಮಾಡಿ ಅವ್ರು ಏನು ಸಾಧಿಸಿದ್ರು.. ಎಸ್. ಜಾನಕಿ ಎಲ್ಲಾ ಸಾಧಿಸಿದ್ಲು.. ವೈಯಕ್ತಿಕ ಜೀವನದಲ್ಲಿ ಕೂಡ ಆಕೆಗೆ ಎಲ್ಲವೂ ಸಿಕ್ತು.. ಆಕೆಗೆ ಸಾವೇ ಇಲ್ಲ.. ದೇವರ ಬಳಿಗೆ ಹೋಗಿದ್ದಾಳೆ. ಯಾರಿಗೂ ಈ ಅದೃಷ್ಟ ಸಿಗಲ್ಲ. ಜನ ಪುಣ್ಯ ಮಾಡಿದ್ದಕ್ಕೆ ಆಕೆಯ ಸುಮಧುರ ದನಿ ಕೇಳುವ ಅವಕಾಶ ಸಿಕ್ತು" ಎಂದು ಪಿ. ಸುಶೀಲ ಭಾವೋದ್ವೇಗದಿಂದ ಮಾತನಾಡಿದ್ದಾರೆ.
ಎಸ್. ಜಾನಕಿ ಹಾಗೂ ಪಿ. ಸುಶೀಲ ಇಬ್ಬರೂ ಸೇರಿ ಒಂದೇ ಹಾಡು ಹಾಡಿರುವ ಉದಾಹರಣೆಗಳಿವೆ. ಕನ್ನಡದಲ್ಲಿ 'ಚದುರಂಗ' ಚಿತ್ರದ 'ಮಮತೆಯ ತೋಟದ ಮಲ್ಲಿಗೆಯೆ' ಹಾಡಿಗೆ ಇಬ್ಬರೂ ದನಿಯಾಗಿದ್ದರು. ಕೆಲವೊಮ್ಮೆ ವೇದಿಕೆಗಳಲ್ಲಿ ಪುರುಷನ ಧ್ವನಿಯಲ್ಲಿ ಎಸ್. ಜಾನಕಿ ಹಾಗೂ ಮಹಿಳೆಯ ಧ್ವನಿಯಲ್ಲಿ ಪಿ. ಸುಶೀಲ ಡುಯೆಟ್ ಸಾಂಗ್ಸ್ ಹಾಡಿರುವುದು ಇದೆ.


Click it and Unblock the Notifications