Padma Awards 2024: ಪದ್ಮವಿಭೂಷಣ ಪ್ರಶಸ್ತಿ; ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ನಟ ಚಿರಂಜೀವಿ
ಕೇಂದ್ರ ಸರ್ಕಾರವು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಒಂದು ದಿನ ಮೊದಲು ಗುರುವಾರ (ಜನವರಿ 25) ಘೋಷಿಸಿದೆ. ನಟ ಚಿರಂಜೀವಿ ಅವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ ಅಭಿಮಾನಿಗಳು ಮತ್ತು ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಿರುವ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಚಿರಂಜೀವಿ, "ಈ ಸುದ್ದಿ ಕೇಳಿದ ನಂತರ ನಾನು ಮೂಕನಾದೆ" ಎಂದು ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಚಿರಂಜೀವಿ ಅವರು ವಿವಿಧ ಭಾಷೆಗಳಲ್ಲಿ, ಪ್ರಧಾನವಾಗಿ ತೆಲುಗಿನಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಚಿರಂಜೀವಿ
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಸ್ತಿ ಬಂದಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನಟ ಚಿರಂಜೀವಿ, "ನಾನು ನಿಜಕ್ಕೂ ಮೂಕನಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ. ಇದು ಪ್ರೇಕ್ಷಕರು, ನನ್ನ ಸ್ನೇಹಿತರು, ನನ್ನ ಸಹೋದರರು ಮತ್ತು ಸಹೋದರಿಂದ ಸಿಕ್ಕ ಬೇಷರತ್ತಾದ ಪ್ರೀತಿ ಮಾತ್ರ. ಈ ಜೀವನ ಮತ್ತು ಈ ಕ್ಷಣಕ್ಕೆ ನಾನು ನಿಮಗೆ ಋಣಿಯಾಗಿದ್ದೇನೆ. ನಾನು ಯಾವಾಗಲೂ ನನ್ನ ಕೃತಜ್ಞತೆಯನ್ನು ನನಗೆ ಸಾಧ್ಯವಿರುವ ರೀತಿಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಿದೆ. ಆದರೆ, ಯಾವುದೂ ಯಾವತ್ತಿಗೂ ಸಾಕಾಗುವುದಿಲ್ಲ. ನನ್ನ ವೃತ್ತಿಜೀವನದ ಕಳೆದ 45 ವರ್ಷಗಳಲ್ಲಿ, ನನ್ನ ಅತ್ಯುತ್ತಮ ಸಾಮರ್ಥ್ಯದಿಂದ ನಿಮ್ಮನ್ನು ರಂಜಿಸಲು ಪ್ರಯತ್ನಿಸಿದ್ದೇನೆ. ಸಾಮಾಜಿಕ ಮತ್ತು ಮಾನವೀಯತೆಯಿಂದ ನಿರ್ಗತಿಕರಿಗೆ ಸಹಾಯ ಮಾಡಲು ನಾನು ಪ್ರಯತ್ನಿಸಿದೆ" ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. "ನಾನು ಮಾಡಿದ್ದು ಕಡಿಮೆ. ಆದರೂ, ನೀವು ನನಗೆ ಅಂತಹ ಮನ್ನಣೆ ಮತ್ತು ಗೌರವವನ್ನು ನೀಡಿದ್ದೀರಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಈ ಹೆಮ್ಮೆಯ ಕ್ಷಣದಲ್ಲಿ, ನನಗೆ ಪದ್ಮವಿಭೂಷಣವನ್ನು ನೀಡಿದ ಭಾರತ ಸರ್ಕಾರ ಮತ್ತು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಧನ್ಯವಾದ. ಜೈ ಹಿಂದ್" ಎಂದು ಚಿರಂಜೀವಿ ವಿಡಿಯೋದಲ್ಲಿ ಹೇಳಿದ್ದಾರೆ.
ನಟ ಚಿರಂಜೀವಿ
ಪ್ರತಿಭಾವಂತ ನಟ ಚಿರಂಜೀವಿ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಆಂಧ್ರಪ್ರದೇಶ ರಾಜ್ಯದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾಗಿದೆ. ಅವರು ಮೂರು ನಂದಿ ಪ್ರಶಸ್ತಿಗಳನ್ನು ಮತ್ತು ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಚಿರಂಜೀವಿಗೆ 2006 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಗಿದೆ.
ಪದ್ಮವಿಭೂಷಣ ಪ್ರಶಸ್ತಿಗಳು 2024
ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ ಐವರು ಪ್ರಮುಖರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಶ್ರೀಮತಿ ವೈಜಯಂತಿಮಾಲಾ ಬಾಲಿ, ಕೊನಿಡೇಲ ಚಿರಂಜೀವಿ, ಎಂ ವೆಂಕಯ್ಯ ನಾಯ್ಡು, ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಶ್ರೀ ಬಿಂದೇಶ್ವರ ಪಾಠಕ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತದೆ.
ಚಿರಂಜೀವಿ ಮುಂದಿನ ಸಿನಿಮಾಗಳು
ನಟ ಚಿರಂಜೀವಿ ಕೊನೆಯದಾಗಿ ಭೋಲಾ ಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ತಮನ್ನಾ ಮತ್ತು ಕೀರ್ತಿ ಸುರೇಶ್ ಜೊತೆಗೆ ನಟಿಸಿದ್ದ ಈ ಚಿತ್ರವು ಆಗಸ್ಟ್ 2023 ರಲ್ಲಿ ಬಿಡುಗಡೆಯಾಗಿತ್ತು. ಮುಂದೆ 'ವಿಶ್ವಂಭರ' ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ. ಇದು 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications










