ಈ ಚಿತ್ರದ ಮಾರ್ನಿಂಗ್ ಶೋ ಟಿಕೆಟ್ ಉಚಿತ; ಇದು ಪ್ರಚಾರದ ಹೊಸ ಉಪಾಯನಾ?
ಸಿನಿಮಾವೊಂದರ ಕಡೆ ಜನರ ಗಮನವನ್ನು ಸೆಳೆಯಲು ಚಿತ್ರತಂಡ ನಾನಾ ರೀತಿಯ ಪ್ರಯತ್ನಗಳನ್ನು ಮಾಡುವುದು ಕಾಮನ್. ಕೆಲ ಚಿತ್ರತಂಡಗಳು ತಮ್ಮ ಚಿತ್ರದಲ್ಲಿ ಕಂಟೆಂಟ್ ಇದೆ ಎಂದಾದರೆ ಟ್ರೈಲರ್ ಮೂಲಕ ತಮ್ಮ ಚಿತ್ರ ಒಂದೊಳ್ಳೆ ಕಂಟೆಂಟ್ ಹೊಂದಿದೆ ಎಂಬುದನ್ನು ತಿಳಿಸುತ್ತಾರೆ ಹಾಗೂ ಇದು ಹಲವಾರು ಬಾರಿ ಕೆಲಸ ಮಾಡಿದೆ ಕೂಡ. ಏಕೆಂದರೆ ಸಾಮಾನ್ಯವಾಗಿ ಸಿನಿ ಪ್ರೇಕ್ಷಕರು ಒಂದು ಚಿತ್ರವನ್ನು ಅದರ ಟೀಸರ್ ಹಾಗೂ ಟ್ರೈಲರ್ ಮೇಕಿಂಗ್‌ನಲ್ಲಿಯೇ ಅಳೆದು ಬಿಡ್ತಾರೆ.
ಇನ್ನು ಕಂಟೆಂಟ್ ಇಲ್ಲದ ಸಾಮಾನ್ಯ ಚಿತ್ರದ ತಂಡಗಳು ಜನರನ್ನು ಸೆಳೆಯುವ ಸಲುವಾಗಿ ಒಂದೊಳ್ಳೆ ಟ್ರೈಲರ್ ಕಟ್ ಮಾಡಲಾಗದೇ ಇರುವ ಕಾರಣ ಪಬ್ಲಿಸಿಟಿ ಸ್ಟಂಟ್ ಮಾಡಲು ಮುಂದಾಗುತ್ತವೆ. ಉಚಿತ ಟಿಕೆಟ್, ಟಿಕೆಟ್ ದರದಲ್ಲಿ ವಿನಾಯಿತಿ, ಬಯ್ ಒನ್ ಗೆಟ್ ಒನ್ ಹೀಗೆ ವಿಭಿನ್ನ ಸಾಹಸಗಳನ್ನು ಚಿತ್ರತಂಡಗಳು ಮಾಡಲು ಮುಂದಾಗುತ್ತವೆ. ಈ ಪೈಕಿ ಕೆಲ ಚಿತ್ರತಂಡಗಳು ಕಂಟೆಂಟ್ ಇಲ್ಲದೆಯೇ ಈ ರೀತಿಯ ಆಫರ್‌ಗಳನ್ನು ಜನರಿಗೆ ನೀಡಲು ಮುಂದಾದರೆ ಇನ್ನೂ ಕೆಲ ಚಿತ್ರತಂಡಗಳು ಒಂದೊಳ್ಳೆ ಸಿನಿಮಾ ಮಾಡಿಯೂ ತಮ್ಮ ಚಿತ್ರದ ಬಿಡುಗಡೆ ಕುರಿತು ನಿರೀಕ್ಷಿಸಿದ ಮಟ್ಟದಲ್ಲಿ ಜನರಿಗೆ ಮಾಹಿತಿ ತಲುಪದೇ ಇದ್ದಾಗ ಈ ರೀತಿಯ ಪ್ರಚಾರಕ್ಕೆ ಮುಂದಾಗುತ್ತವೆ.

ಈ ಸಾಲಿಗೆ ಇದೀಗ ಹೊಸ ಸೇರ್ಪಡೆ ತೆಲುಗಿನ 'ಪಗ ಪಗ ಪಗ' ಎಂಬ ಚಿತ್ರತಂಡ. ಹೆಸರೇ ಹೇಳುವಂತೆ ಇದೊಂದು ರಿವೇಂಜ್ ಸ್ಟೋರಿಯಾಗಿದ್ದು, ಚಿತ್ರತಂಡ ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಬಿಡುಗಡೆಯ ದಿನದ ಬೆಳಗ್ಗಿನ ಪ್ರದರ್ಶನದ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಹೌದು, ಈ ಚಿತ್ರ ಬಿಡುಗಡೆಯಾಗಲಿರುವ ತೆಲುಗು ರಾಜ್ಯಗಳ ಎಲ್ಲಾ ಚಿತ್ರಮಂದಿರಗಳ ಬೆಳಗಿನ ಆಟದ ಪ್ರದರ್ಶನವನ್ನು ವೀಕ್ಷಕರು ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಕುರಿತಾಗಿ ಸ್ವತಃ ಚಿತ್ರತಂಡವೇ ತನ್ನ ಬಿಡುಗಡೆಯ ಪೋಸ್ಟರ್‌ಗಳಲ್ಲಿ ತಿಳಿಸಿದೆ.

ಇನ್ನು ಈ ತಂಡ ಕಂಟೆಂಟ್ ಇಲ್ಲದೇ ಈ ರೀತಿಯ ಪಬ್ಲಿಸಿಟಿ ಸ್ಟಂಟ್ ಮಾಡುತ್ತಿದೆಯೋ ಅಥವಾ ಒಂದೊಳ್ಳೆ ಸಿನಿಮಾ ಮಾಡಿ ಜನರಿಗೆ ಇದು ತಲುಪಬೇಕು, ಅದನ್ನು ನೋಡಿ ಜನ ಇತರರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆಯೋ ಎಂಬುದನ್ನು ಚಿತ್ರ ವೀಕ್ಷಿಸುವ ಪ್ರೇಕ್ಷಕನ ಬಾಯಿಂದಲೇ ಕೇಳಿ ತಿಳಿದುಕೊಳ್ಳಬೇಕಿದೆ. ಅಂದಹಾಗೆ ಈ ಚಿತ್ರ ಇಂದು ( ಸೆಪ್ಟೆಂಬರ್ 22 ) ಬಿಡುಗಡೆಯಾಗಿದೆ.


Click it and Unblock the Notifications











