ಯಶ್ ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತಂದ ಪ್ರಶಾಂತ್ ನೀಲ್ ನಡೆ
ಪ್ಯಾನ್ ಸಿನಿಮಾಗಳ ಸಹವಾಸವೂ ಸಾಕು, ಫಿಲ್ಮ್ ಮೇಕರ್ಸ್ ಸಿನಿರಸಿಕರನ್ನು ತಾಳ್ಮೆ ಪರೀಕ್ಷಿಸುವುದು ಸಾಕು. ಒಂದೊಂದು ಚಿತ್ರಕ್ಕೆ ಎರಡ್ಮೂರು ವರ್ಷ ಕಾಯೋದು ಅಂದ್ರೆ ತಮಾಷೆ ಮಾತಲ್ಲ. ಸ್ಟಾರ್ ನಟರು, ನಿರ್ದೇಶಕರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಕೂಗು ಒಂದ್ಕಡೆ. ನಾವು ರಿಲೀಸ್ ಮಾಡ್ದಾಗ ಸಿನಿಮಾ ನೋಡಿ ಎನ್ನುವ ಫಿಲ್ಮ್ ಮೇಕರ್ಸ್ ಉಡಾಫೆ ಮತ್ತೊಂದು ಕಡೆ.
ವರ್ಷಕ್ಕೆ ಬರುವ 4 ದೊಡ್ಡ ಚಿತ್ರಗಳನ್ನು ನಂಬಿಕೊಂಡು ಇಡೀ ವರ್ಷ ಚಿತ್ರಮಂದಿರಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಮಾಲೀಕರಿಗೆ. ಭಾರೀ ಬಜೆಟ್, ಹೆಚ್ಚು ಸಮಯ ವ್ಯಯಿಸಿದ ಮಾತ್ರಕ್ಕೆ ಸಿನಿಮಾ ಗೆಲ್ಲುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಆದರೆ ನಮಗೆ ತೃಪ್ತಿ ಆಗುವವರೆಗೂ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ಪಟ್ಟು ಹಿಡಿದ್ರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತದೆ. ಮೊದಲೆಲ್ಲ ಒಂದು ತಿಂಗಳು, ಎರಡು ತಿಂಗಳು ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡುತ್ತಿದ್ದರು. ಈಗ ಏಕಾಏಕಿ ಒಂದು ವರ್ಷ ಮುಂದಕ್ಕೆ ಹಾಕುತ್ತಿದ್ದಾರೆ.

ಕಳೆದ ವರ್ಷ ಏಪ್ರಿಲ್ 10ಕ್ಕೆ ಬರಬೇಕಿದ್ದ 'ಟಾಕ್ಸಿಕ್' ಚಿತ್ರವನ್ನು ಈ ವರ್ಷ ಮಾರ್ಚ್ 19ಕ್ಕೆ ಪೋಸ್ಟ್‌ಪೋನ್ ಮಾಡಿದ್ದರು. ಆದರೆ ಏಪ್ರಿಲ್ ಮುಗಿದರೂ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಜೂನ್ 4ರವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಶಾಂತ್ ನೀಲ್ ಮೊದಲಿನಿಂದಲೂ ಸಿನಿಮಾ ಮೇಕಿಂಗ್ ವಿಚಾರದಲ್ಲಿ ಕೊಂಚ ನಿಧಾನ. ಕೆಜಿಎಫ್ ಸರಣಿ ಸಿನಿಮಾಗಳನ್ನು ತೆರೆಗೆ ತರಲು ಬಹಳ ಸಮಯ ವ್ಯಯಿಸಿದ್ದರು. 'ಸಲಾರ್' ವಿಚಾರದಲ್ಲಿ ಕೂಡ ಅದು ಮುಂದುವರೆಯಿತು. 'ಡ್ರ್ಯಾಗನ್' ಚಿತ್ರದ ವಿಚಾರದಲ್ಲಿ ಪ್ರೇಕ್ಷಕರ ತಾಳ್ಮೆಯನ್ನು ಮತ್ತಷ್ಟು ಪರೀಕ್ಷೆ ಮಾಡುತ್ತಿದ್ದಾರೆ.
ಈ ವರ್ಷ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಮುಹೂರ್ತದ ಸಮಯದಲ್ಲಿ ಘೋಷಿಸಿದ್ದರು. ಸಂಕ್ರಾಂತಿ ಹತ್ತಿರವಾಗುತ್ತಿದ್ದಂತೆ ಜೂನ್ 25ಕ್ಕೆ ಸಿನಿಮಾ ರಿಲೀಸ್ ಎಂದು ಶಾಕ್ ಕೊಟ್ಟಿದ್ದರು. ಹೋಗ್ಲಿ ಎಂದು ಕಾಯುತ್ತಿದ್ದವರಿಗೆ ಈ ಮತ್ತೆ ಬೇಸರದ ಸುದ್ದಿ ಬಂದಿದೆ. ಬರೋಬ್ಬರಿ ಒಂದು ವರ್ಷ ತಡವಾಗಿ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷ ಜೂನ್ 11ಕ್ಕೆ ಸಿನಿಮಾ ಬಿಡುಗಡೆ ಎಂದು ಹೊಸದಾಗಿ ಅಪ್‌ಡೇಟ್ ಬಂದಿದೆ.

'ದೇವರ' ಹಾಗೂ 'ವಾರ್-2' ಸಿನಿಮಾಗಳು ಸೋತು ತಾರಕ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಾವಾಗ ನೆಚ್ಚಿನ ನಟನ ಸಿನಿಮಾ ನೋಡ್ತೀವಿ ಎಂದು ಕಾಯುತ್ತಿರುವವರಿಗೆ ಬೇಸರವಾಗುತ್ತಿದೆ. ಇನ್ನು 14 ತಿಂಗಳು ಕಾಯಬೇಕಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ತಾರಕ್ ಖಡಕ್ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ಈ ವರ್ಷವೇ ಸಿನಿಮಾ ತೆರೆಗೆ ಬರಬಹುದು ಎಂದು ಭಾವಿಸಿದ್ದವರಿಗೆ ನಿರಾಸೆಯಾಗಿದೆ.
ಜ್ಯೂ. ಎನ್‌ಟಿಆರ್ ಸಿನಿಮಾ ತಡವಾಗುತ್ತಿದ್ದಂತೆ ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. 'ಸಲಾರ್'-2 ಚಿತ್ರವನ್ನು ನೀಲ್ ಕಟ್ಟಿಕೊಡಬೇಕಿದೆ. ಆದರೆ ಸದ್ಯಕ್ಕೆ ಅದು ಸಾಧ್ಯವಿಲ್ಲ ಎನ್ನುವಂತಾಗಿದೆ. 'ಸಲಾರ್'- 2 ಬಳಿಕ ಯಶ್ ನಟನೆಯ 'ಕೆಜಿಎಫ್'- 3 ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಹೀಗೆ ಒಂದು ಸಿನಿಮಾ ತಡವಾದರೆ ಅದು ಆ ನಟ ಅಥವಾ ನಿರ್ದೇಶಕನ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಲಿದೆ. ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳೇ. ಹಾಗಾಗಿ ತಿಂಗಳುಗಳ ಕಾಲ ಅಲ್ಲ, ವರ್ಷಗಳ ಕಾಲ ಕಾಯಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ.
ಎನ್‌ಟಿಆರ್, ನೀಲ್ ಸಿನಿಮಾ ತಡವಾಗುವುದರಿಂದ ಸಹಜವಾಗಿಯೇ 'ಸಲಾರ್'-2 ಹಾಗೂ 'ಕೆಜಿಎಫ್'- 3 ಚಿತ್ರಗಳು ತೆರೆಗೆ ಬರುವುದು ನಿಧಾನವಾಗಲಿದೆ. ಇದು ಸಹಜವಾಗಿಯೇ ಪ್ರಭಾಸ್ ಹಾಗೂ ಯಶ್ ಅಭಿಮಾನಿಗಳಿಗೆ ಬೇಸರ ತಂದಿದೆ. ಇನ್ನು 5 ವರ್ಷ ತೆರೆಮೇಲೆ ರಾಕಿಭಾಯ್ ಆರ್ಭಟ ನೋಡುವುದು ಕಷ್ಟ ಕಷ್ಟ.


Click it and Unblock the Notifications