'ಅರ್ಜುನ್ ರೆಡ್ಡಿ' ಸಿನಿಮಾ ಕೈಬಿಟ್ಟು ಪಶ್ಚಾತ್ತಾಪ ಪಡುತ್ತಿರುವ ನಟಿ
ನಟ-ನಟಿಯರಿಗೆ ನಟನಾ ಪ್ರತಿಭೆಯ ಜೊತೆಗೆ ಕತಾ ಜ್ಞಾನ ಸಹ ಹೆಚ್ಚಾಗಿಯೇ ಇರಬೇಕಾಗುತ್ತದೆ. ಯಾವುದಾದರೂ ಒಂದು ಕತೆ ಕೇಳಿದಾಗ ಈ ಸಿನಿಮಾ ಹಿಟ್ ಆಗುತ್ತದೆಯೇ ಇಲ್ಲವೇ, ಈ ಸಿನಿಮಾದ ಪರಿಣಾಮ ಪ್ರೇಕ್ಷಕರ ಮೇಲೆ ಏನಾಗಬಹುದು ಎಂದು ಅಂದಾಜಿಸ ಬೇಕಾಗುತ್ತದೆ.
ಉತ್ತಮ ನಟನಾ ಪ್ರತಿಭೆ ಇದ್ದರೂ ಕೆಟ್ಟ ಕತೆಗಳನ್ನು ಆಯ್ಕೆ ಮಾಡಿ ಅಥವಾ ಒಳ್ಳೆಯ ಸಿನಿಮಾಗಳನ್ನು ಕೈಬಿಟ್ಟು ವೃತ್ತಿ ಬದುಕಿನಲ್ಲಿ ಹಿನ್ನಡೆ ಅನುಭವಿಸಿರುವ ಹಲವಾರು ನಟ-ನಟಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ ಒಬ್ಬರು ನಟಿ ಪಾರ್ವತಿ ನಾಯರ್.
ಮಾಡೆಲ್ ಹಾಗೂ ನಟಿಯಾಗಿರುವ ಪಾರ್ವತಿ ನಾಯರ್‌ಗೆ ತೆಲುಗಿನ ಸೂಪರ್ ಹಿಟ್ ಸಿನಿಮಾ, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದ 'ಅರ್ಜುನ್ ರೆಡ್ಡಿ' ಸಿನಿಮಾದ ನಾಯಕಿ ಪಾತ್ರಕ್ಕೆ ಆಫರ್ ಬಂದಿತ್ತು. ಆದರೆ ಪಾರ್ವತಿ ನಾಯರ್ ಆ ಸಿನಿಮಾದಲ್ಲಿ ನಟಿಸಲಿಲ್ಲ.

ಪಾರ್ವತಿ ನಾಯರ್ ಅನ್ನು ಸಂಪರ್ಕಿಸಿದ್ದ ನಿರ್ದೇಶಕ
2017 ರಲ್ಲಿ ಬಿಡುಗಡೆ ಆದ 'ಅರ್ಜುನ್ ರೆಡ್ಡಿ' ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದರು. ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲಿಗೆ ಸಂದೀಪ್, ಪಾರ್ವತಿ ನಾಯರ್ ಅವರನ್ನು ಸಂಪರ್ಕ ಮಾಡಿದ್ದರು. ಆದರೆ ಸಿನಿಮಾದಲ್ಲಿ ಹೆಚ್ಚು ಶೃಂಗಾರದ ದೃಶ್ಯಗಳಿವೆ ಎಂದು ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ ಪಾರ್ವತಿ.

ಅರ್ಜುನ್ ರೆಡ್ಡಿ ಸಿನಿಮಾ ಕೈಬಿಡಬಾರದಿತ್ತು: ಪಾರ್ವತಿ ನಾಯರ್
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ಪಾರ್ವತಿಗೆ ಅಭಿಮಾನಿಯೊಬ್ಬ ಈ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಪಾರ್ವತಿ ನಾಯರ್, 'ಅರ್ಜುನ್ ರೆಡ್ಡಿ ಒಂದು ಸುಂದರವಾದ ಸಿನಿಮಾ. ಆ ಸಿನಿಮಾವನ್ನು ನಾನು ಕೈ ಬಿಡಬಾರದಿತ್ತು. ಅದಕ್ಕಾಗಿ ಬೇಸರವಿದೆ. ಆದರೆ ಯಾವುದು ನಿಮ್ಮದಾಗಿರುತ್ತದೆಯೋ ಅದು ನಿಮಗೆ ಧಕ್ಕಿಯೇ ತೀರುತ್ತದೆ. ಹಾಗಾಗಿ ಒಳ್ಳೆಯ ಸಿನಿಮಾಗಳನ್ನು ನನ್ನನ್ನು ಹುಡುಕಿ ಬರಬಹುದು ಎಂಬ ನಿರೀಕ್ಷೆ ಇದೆ'' ಎಂದಿದ್ದಾರೆ ಪಾರ್ವತಿ ನಾಯರ್.

ಶಾಲಿನಿ ಪಾಂಡೆ ನಟಿಸಿದರು
ಪಾರ್ವತಿ ನಾಯರ್ ನಿರಾಕರಿಸಿದ ನಾಯಕಿ ಪಾತ್ರದಲ್ಲಿ ಶಾಲಿನಿ ಪಾಂಡೆ ನಟಿಸಿದರು. ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ ಅಂತೂ 'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ತೆಲುಗಿನ ಸ್ಟಾರ್ ನಟರಾಗಿಬಿಟ್ಟರು. ಶಾಲಿನಿ ಪಾಂಡೆಗೂ ಹಲವು ಅವಕಾಶ ಲಭಿಸಿದವು. ನಿರ್ದೇಶಕ ಸಂದೀಪ್ ವಂಗ ಸಹ ಹಿಂದಿಯಲ್ಲಿ ರಣಬೀರ್ ಕಪೂರ್‌ಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡದಲ್ಲಿಯೂ ನಟಿಸಿರುವ ಪಾರ್ವತಿ ನಾಯರ್
2014 ರಿಂದಲೂ ನಟಿಸುತ್ತಿರುವ ನಟಿ ಪಾರ್ವತಿ ನಾಯರ್ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ 'ವಾಸ್ಕೊಡಿಗಾಮಾ' ಸಿನಿಮಾಕ್ಕೆ ಇವರೇ ನಾಯಕಿ. ರಮೇಶ್ ಅರವಿಂದ್ ನಿರ್ದೇಶಿಸಿ ಕಮಲ್ ಹಾಸನ್ ನಟಿಸಿದ್ದ 'ಉತ್ತಮ ವಿಲನ್' ಸಿನಿಮಾದಲ್ಲಿಯೂ ಪಾರ್ವತಿ ನಾಯರ್ ನಟಿಸಿದ್ದರು. ಇದೀಗ ಪಾರ್ವತಿ ನಟನೆಯ ಹಿಂದಿ ಸಿನಿಮಾ '83' ಬಿಡುಗಡೆ ಆಗಬೇಕಿದೆ. ತಮಿಳಿನ 'ಆಲಂಬನ' ಹೆಸರಿನ ಸಿನಿಮಾದಲ್ಲಿಯೂ ಪಾರ್ವತಿ ನಟಿಸುತ್ತಿದ್ದಾರೆ.


Click it and Unblock the Notifications











