"10 ಜನಕ್ಕಿರುವ ಎನರ್ಜಿ ನರೇಶ್‌ಗೆ ಇದೆ, ನನಗೆ ಸುಸ್ತಾಗತ್ತೆ"; ಪವಿತ್ರಾ ಲೋಕೇಶ್ ಏನೋ ಹೇಳಿದ್ರೆ...
ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಇವರಿಬ್ಬರ ಪ್ರೇಮಾಯಣ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇವರಿಬ್ಬರ ವಿರುದ್ಧ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆಕ್ರೋಶಗೊಂಡಿದ್ದರು. ಭಾರೀ ಹೈಡ್ರಾಮಾ ನಡೆದು ಕೊನೆಗೆ ತಾವಿಬ್ಬರು ರಿಲೇಷನ್‌ಶಿಪ್‌ನಲ್ಲಿರುವ ವಿಚಾರವನ್ನು ಜೋಡಿ ಹಂಚಿಕೊಂಡಿತ್ತು.
ನರೇಶ್‌ಗೆ ಡಿವೋರ್ಸ್ ಕೊಡಲು ರಮ್ಯಾ ರಘುಪತಿ ನಿರಾಕರಿಸಿದ್ದಾರೆ. ಹಾಗಾಗಿ ನರೇಶ್ - ಪವಿತ್ರಾ ಇನ್ನು ಮದುವೆ ಆಗಿಲ್ಲ. ಆದರೆ ಗುಟ್ಟಾಗಿ ಇಬ್ಬರೂ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಇದೆಲ್ಲದರ ನಡುವೆ ತಮ್ಮದೇ ನಿಜಜೀವನದ ಕಥೆಯನ್ನು ನರೇಶ್ ಸಿನಿಮಾ ಮಾಡಿದ್ದರು. ತೆಲುಗು ಹಾಗೂ ಕನ್ನಡದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಗೆಲ್ಲಲಿಲ್ಲ. ಆ ಸಿನಿಮಾ ಕೂಡ ವಿವಾದಕ್ಕೆ ಗುರಿಯಾಗಿತ್ತು.

ಅಂದಹಾಗೆ ನಟ ನರೇಶ್ 65ನೇ ವಸಂತಕ್ಕೆ(ಜನವರಿ 20ರಂದು) ಕಾಲಿಟ್ಟಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಪವಿತ್ರಾ ಲೋಕೇಶ್ ಕೂಡ ಹಾಜರಾಗಿದ್ದರು. ನರೇಶ್ ತಮ್ಮ ಸಿನಿಕರಿಯರ್, ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕನಸಿನ ಪಾತ್ರದ ಮಾತನಾಡಿದ್ದಾರೆ. ತಮ್ಮ ತಾಯಿ ವಿಜಯ ನಿರ್ಮಲಾ ಅವರಿಗೆ ಪದ್ಮ ಪ್ರಶಸ್ತಿ ಕೊಡಿಸಬೇಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪವಿತ್ರಾ ಲೋಕೇಶ್ ಮಾತನಾಡಿ ನರೇಶ್ ಅವರನ್ನು ಹಾಡಿ ಹೊಗಳಿದ್ದಾರೆ. ಆಕೆಯ ಕೆಲ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪವಿತ್ರಾ ಹೇಳಿದ್ದ ಅರ್ಥವೇ ಬೇರೆ, ನೆಟ್ಟಿಗರು ಮಾತ್ರ ಬೇರೆ ರೀತಿ ಟ್ರೋಲ್ ಮಾಡುತ್ತಿದ್ದಾರೆ. ಪವಿತ್ರಾ ಮಾತನಾಡಿ ಹುಟ್ಟುಹಬ್ಬಕ್ಕೆ ನರೇಶ್ ಅವರಿಗೆ ಶರ್ಟ್ ಗಿಫ್ಟ್ ಕೊಟ್ಟೆ. ಅದನ್ನು ಈಗ ಹಾಕಿಕೊಂಡಿದ್ದಾರೆ ಎಂದಿದ್ದಾರೆ. ಇನ್ನು ನಾನು ಉಟ್ಟಿರುವ ಸೀರೆಯನ್ನು ನರೇಶ್ ಸೆಲೆಕ್ಟ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಪವಿತ್ರಾ ಲೋಕೇಶ್ "ನಾನು ನೋಡಿದಂತೆ ನರೇಶ್ ಬಹಳ ಬ್ಯುಸಿ ಇರುತ್ತಾರೆ. ಇವತ್ತಿಗೂ ಹೊಸ ನಿರ್ದೇಶಕರ ಚಿತ್ರಗಳಲ್ಲಿ ನಟಿಸಲು ತುಡಿಯುತ್ತಾರೆ. 10 ಜನರ ಎನರ್ಜಿ ನರೇಶ್‌ಗೆ ಇದೆ. ಆ ಎನರ್ಜಿಯನ್ನು ನಾವೆಲ್ಲಾ ತಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಿಬ್ಬಂದಿ, ನಾನು ಎಲ್ಲರೂ ಸುಸ್ತಾಗಿ ಬಿಡುತ್ತೀವಿ. ಇನ್ನುಳಿದ ಕೆಲಸ ನೀನೇ ಮಾಡ್ಕೊ ಎನ್ನುತ್ತೀನಿ. ಅವ್ರು ಮಾತ್ರ ಸುಸ್ತಾಗಲ್ಲ. ಅಷ್ಟು ಜೋಶ್, ಡೆಡಿಕೇಷನ್‌ನಿಂದ ಕೆಲಸ ಮಾಡುತ್ತಾರೆ" ಎನ್ನುವ ಅರ್ಥದಲ್ಲಿ ಪವಿತ್ರಾ ಹೇಳಿದ್ದಾರೆ.
ಸದ್ಯ ಪವಿತ್ರಾ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. ಕೆಲವರು ಇದಕ್ಕೆ ಡಬಲ್ ಮೀನಿಂಗ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಹಾಗಾಗಿ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇನ್ನು ನರೇಶ್ ಮಾತನಾಡಿ ನನಗೆ 'ನಪುಂಸಕ'ನ ಪಾತ್ರ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಇದಕ್ಕೂ ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
1972ರಲ್ಲಿ ಬಂದ 'ಪಂಡಂಟಿ ಕಾಪುರಂ' ಚಿತ್ರದಲ್ಲಿ ನರೇಶ್ ಬಾಲನಟನಾಗಿ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಕೆಲ ಸಿನಿಮಾಗಳಲ್ಲಿ ಬಾಲ ನಟನಾಗಿಯೇ ಮಿಂಚಿದ್ದರು. 17ನೇ ವಯಸ್ಸಿನಲ್ಲಿ 'ನಾಲುಗು ಸ್ತಂಭಲಾಟ' ಚಿತ್ರದ ಮೂಲಕ ಹೀರೊ ಆಗಿದ್ದರು. ನಿಧಾನವಾಗಿ ನರೇಶ್ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಕಳೆದ ವಾರ ತೆರೆಕಂಡ 'ಸಂಕ್ರಾಂತಿಗೆ ವಸ್ತುನ್ನಾಂ' ಚಿತ್ರದಲ್ಲಿ ಕೂಡ ನರೇಶ್ ನಟಿಸಿದ್ದಾರೆ. ಈ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಇನ್ನು ನರೇಶ್- ಪವಿತ್ರಾ ಲೋಕೇಶ್ ಕೆಲ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹೀಗೆ ಒಟ್ಟಿಗೆ ನಟಿಸುವಾಗಲೇ ಇಬ್ಬರ ನಡುವೆ ಪ್ರೀತಿ ಮೂಡಿತ್ತು ಎಂದು ತಮ್ಮ ಲವ್ ಸ್ಟೋರಿಯನ್ನು ಇಬ್ಬರೂ ಹಂಚಿಕೊಂಡಿದ್ದರು.


Click it and Unblock the Notifications











