2 ತಿಂಗಳ ಹಿಂದಷ್ಟೇ ಟೀಸರ್ ರಿಲೀಸ್ ಮಾಡಿದ್ದ ಪವನ್ ಕಲ್ಯಾಣ್ ಚಿತ್ರ ನಿಂತೋಯ್ತಾ?
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರಗಳೆಂದರೆ ತೆಲುಗು ರಾಜ್ಯಗಳಲ್ಲಿ ಎಲ್ಲಿಲ್ಲದ ಕ್ರೇಜ್. ಟಾಲಿವುಡ್‌ನಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟನೆಂದೇ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಚಿತ್ರಗಳೆಂದರೆ ಲಾಭ ಫಿಕ್ಸ್ ಎಂಬ ಮಿನಿಮಮ್ ಗ್ಯಾರಂಟಿ ಸಿನಿ ರಸಿಕರಲ್ಲಿ ಹಾಗೂ ಚಿತ್ರ ನಿರ್ಮಾಪಕರಲ್ಲಿ ಮನೆ ಮಾಡಿದೆ.
ಹೀಗಾಗಿಯೇ ಪವನ್ ಕಲ್ಯಾಣ್ ಚಿತ್ರಗಳಿಗೆ ಬಂಡವಾಳ ಹೂಡಲು ನಿರ್ಮಾಪಕರ ಸಾಲೇ ಕಾಯುತ್ತಿದೆ. ಇನ್ನು ಈ ಹಿಂದೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದ ಪವನ್ ಕಲ್ಯಾಣ್ ತಮ್ಮದೇ ಆದ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಬಳಿಕ ಸಿನಿಮಾದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿಲ್ಲ. ರಾಜಕೀಯ ಸಮಾವೇಶಗಳು ಹಾಗೂ ಕೆಲಸಗಳ ನಿಮಿತ್ತ ಹೆಚ್ಚಾಗಿ ಬ್ಯುಸಿ ಇರುವ ಪವನ್ ಕಲ್ಯಾಣ್ ಆಗೊಂದು ಹೀಗೊಂದು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.

ಕಳೆದ ವರ್ಷ ಬಿಡುಗಡೆಗೊಂಡಿದ್ದ ಮಲಯಾಳಂನ ಹಿಟ್ ಚಿತ್ರ ಅಯ್ಯಪ್ಪನುಮ್ ಕೋಶಿಯುಮ್‌ನ ತೆಲುಗು ರಿಮೇಕ್ ಆದ ಭೀಮ್ಲಾ ನಾಯಕ್‌ನಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ, ಪವನ್ ಕಲ್ಯಾಣ್ ನಟನೆಯ ಯಾವುದೇ ಚಿತ್ರಗಳೂ ಸಹ ನಂತರದ ದಿನಗಳಲ್ಲಿ ಬಿಡುಗಡೆಗೊಂಡಿಲ್ಲ. ಸದ್ಯ ಪವನ್ ಕಲ್ಯಾಣ್ ಕೈನಲ್ಲಿ ಘೋಷಣೆಯಾದ ನಾಲ್ಕು ಚಿತ್ರಗಳಿವೆ.
ಬ್ರೋ, ಹರಿಹರ ವೀರಮಲ್ಲು, ಓಜಿ ಹಾಗೂ ಉಸ್ತಾದ್ ಭಗತ್ ಸಿಂಗ್ ಚಿತ್ರಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಒಂದೆಡೆ ರಾಜಕೀಯದ ಕೆಲಸಗಳು ಹಾಗೂ ಇತ್ತ ನಾಲ್ಕು ಚಿತ್ರಗಳಲ್ಲಿ ಒಟ್ಟಿಗೆ ನಟನೆ ಮಾಡುವ ಸಾಹಸವನ್ನು ಪವನ್ ಕಲ್ಯಾಣ್ ಮಾಡಿದ್ದರು. ಆದರೆ ಇದು ಯಾಕೋ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಒತ್ತಡ ಹೆಚ್ಚಾದ ಕಾರಣ ಇದೀಗ ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೆ ಬ್ರೇಕ್ ನೀಡಿದ್ದಾರೆ.
ರಾಜಕೀಯ ಕೆಲಸಗಳು ಹಾಗೂ ಸಾಲು ಸಾಲು ಚಿತ್ರಗಳಲ್ಲಿ ನಟಿಸುವುದು ಕಷ್ಟದ ಕೆಲಸವಾದ ಕಾರಣ ಉಸ್ತಾದ್ ಭಗತ್ ಸಿಂಗ್ ಚಿತ್ರದ ಚಿತ್ರೀಕರಣವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಕಾರಣ ಇದೀಗ ನಿರ್ದೇಶಕ ಹರೀಶ್ ಶಂಕರ್ ರವಿತೇಜಾಗೆ ಮತ್ತೊಂದು ಚಿತ್ರ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ತೆಲುಗು ಸಿನಿ ಅಡ್ಡಾದಲ್ಲಿ ಹರಿದಾಡುತ್ತಿದೆ.
ಹೌದು, ಬಾಲಿವುಡ್‌ನ ಅಜಯ್ ದೇವಗನ್ ನಟನೆಯ ರೈಡ್ ಚಿತ್ರದ ರಿಮೇಕ್‌ನಲ್ಲಿ ರವಿತೇಜಾ ನಟಿಸಲಿದ್ದು, ಈ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಬರೋಬ್ಬರಿ 11 ವರ್ಷಗಳ ಬಳಿಕ ರವಿತೇಜಾ ಹಾಗೂ ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಶನ್ ಅಡಿಯಲ್ಲಿ ಚಿತ್ರವೊಂದು ಮೂಡಿ ಬರಲಿದೆ.
ಇನ್ನು ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್ ಕಾಂಬಿನೇಶನ್‌ನ ಉಸ್ತಾದ್ ಭಗತ್ ಸಿಂಗ್ ಚಿತ್ರ ಮುಂದೂಡಲ್ಪಟ್ಟಿರುವುದು ಸದ್ಯ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ. ಭೀಮ್ಲಾ ನಾಯಕ್ ಹಾಗೂ ಸರ್ದಾರ್ ಗಬ್ಬರ್ ಸಿಂಗ್ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪವನ್ ಕಲ್ಯಾಣ್ ಈ ಹಿಂದೆ ತೆರೆಗೆ ಬಂದಿದ್ದ ಗಬ್ಬರ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡಷ್ಟು ರಗಡ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ ಎರಡು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಪವನ್ ಕಲ್ಯಾಣ್ ಹಾಗೂ ಶ್ರೀಲೀಲಾ ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದ ಟೀಸರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಗಬ್ಬರ್ ಸಿಂಗ್ ಚಿತ್ರವನ್ನು ನೆನಪಿಸಿತ್ತು. ಈ ಟೀಸರ್‌ನಲ್ಲಿ ಪಂಚೆ ಹಿಂದೆ ಗನ್ ಇಟ್ಟುಕೊಂಡು ರಗಡ್ ಪೊಲೀಸ್ ಅವತಾರದಲ್ಲಿ ಧೂಳ್ ಎಬ್ಬಿಸಿದ್ದ ಪವನ್ ಕಲ್ಯಾಣ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದರು. ಇಷ್ಟರ ಮಟ್ಟಿಗೆ ಸದ್ದು ಮಾಡಿದ್ದ ಚಿತ್ರದ ಶೂಟಿಂಗ್ ಇದೀಗ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವುದು ಬೇಸರದ ಸಂಗತಿಯೇ ಸರಿ.


Click it and Unblock the Notifications











