ಕರ್ನಾಟಕದಲ್ಲಿ ತೆಲುಗು ಪೋಸ್ಟರ್ ಹಾಕಲು ಬಿಡ್ಲಿಲ್ಲ; ಆದ್ರೆ 'ಕಾಂತಾರ' ಚಿತ್ರಕ್ಕೆ ನಾವು ತಾರತಮ್ಯ ಮಾಡ್ಲಿಲ್ಲ
ವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೀತು. ಪವನ್ ಕಲ್ಯಾಣ್ ವೇದಿಕೆ ಏರಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಆಂಧ್ರ ಸರ್ಕಾರ ಸದಾ ಚಿತ್ರರಂಗದ ಜೊತೆಗೆ ಇರುತ್ತದೆ ಎಂದಿದ್ದಾರೆ. ಯಾವುದೇ ಚಿತ್ರಕ್ಕೆ ನಾವು ತಾರತಮ್ಯ ಮಾಡಲ್ಲ ಎಂದಿದ್ದಾರೆ.
ಹರೀಶ್ ಶಂಕರ್ ನಿರ್ದೇಶನದ ಕಾಪ್ ಆಕ್ಷನ್ ಥ್ರಿಲ್ಲರ್ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ತಡವಾಗಿದ್ದರಿಂದ ಮಾರ್ಚ್ 28ಕ್ಕೆ ಬರಬೇಕಿದ್ದ ಚಿತ್ರವನ್ನು ಮಾರ್ಚ್ 19ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ನಡೀತಿದೆ. ಸುಮಾರು ಅರ್ಧ ಗಂಟೆ ಪವನ್ ಕಲ್ಯಾಣ್ ವೇದಿಕೆಯಲ್ಲಿ ಮಾತನಾಡಿದರು. ದೊಡ್ಡ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸಲು ಅನುಮತಿ ಹೇಳ್ತಾರೆ. ಹಿಂದು ಮುಂದು ನೋಡದೇ ಸರ್ಕಾರ ಇದಕ್ಕೆ ಒಪ್ಪಿಗೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

"ಟಿಕೆಟ್ ದರ ಹೆಚ್ಚಿಸುವುದರಿಂದ ಸಮಸ್ಯೆ ಏನಿಲ್ಲ. ಜನರಿಗೆ ಸಿನಿಮಾ ನೋಡುವಂತೆ ಯಾರು ಬಲವಂತ ಮಾಡುತ್ತಿಲ್ಲ. ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ ಅಂತ ಬಹಳ ಆಯ್ಕೆಗಳಿವೆ. ಮೊದಲ ದಿನ ಸಿನಿಮಾ ನೋಡಬೇಕು ಎಂದು ಕೆಲವರು ಉತ್ಸಾಹ ವ್ಯಕ್ತಪಡಿಸುತ್ತಾರೆ. ನನ್ನ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸದೇ ಇದ್ರೂ ಬೇರೆ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸಲು ಸಲಹೆ ನೀಡಿದ್ದೀನಿ. ನಿರ್ಮಾಪಕರು ಯಾರು ದೇಹಿ ಎಂದು ಬೇಡಿಕೊಳ್ಳಬೇಡಿ, ನೀವು ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿರ್ತೀರಾ ಎನ್ನುವುದು ನನಗೆ ಗೊತ್ತು. ಟಿಕೆಟ್ ದರ ಹೆಚ್ಚಿಸಿದ್ರು 18% ಜಿಎಸ್‌ಟಿ ಹೋಗುತ್ತದೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
'ಪುಷ್ಪ', ಪ್ರಭಾಸ್ ನಟನೆಯ 'ಕಲ್ಕಿ', ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್ ಹೀಗೆ ಎಲ್ಲರ ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಅನುಮತಿ ಕೊಟ್ಟಿದ್ದೇವೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ನಿರ್ದೇಶಕ ಹರೀಶ್ ಶಂಕರ್ 'ಕಾಂತಾರ'-1 ಸಿನಿಮಾ ಹೆಸರು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತನಾಡಿ "ಕರ್ನಾಟಕದಲ್ಲಿ ತೆಲುಗು ಸಿನಿಮಾ ಪೋಸ್ಟರ್ ಹಾಕಬಾರದು ಎಂದು ಕೆಲವ್ರು ಹೇಳಿದ್ರು. ಆದರೂ 'ಕಾಂತಾರ- 1' ಚಿತ್ರದ ಟಿಕೆಟ್ ದರ ಹೆಚ್ಚಿಸುವ ವಿಚಾರದಲ್ಲಿ ಯಾವುದೇ ತಾರತಮ್ಯ ನಾವು ಮಾಡ್ಲಿಲ್ಲ. ಅದು ಭಾರತದ ಸಿನಿಮಾ, ಎಲ್ಲಾ ಕಡೆ ಚೆನ್ನಾಗಿ ಪ್ರದರ್ಶನ ಕಾಣಬೇಕು" ಎಂದಿದ್ದಾರೆ.
ಕರ್ನಾಟಕದಲ್ಲಿ ತೆಲುಗು ಸಿನಿಮಾ ಪೋಸ್ಟರ್ ಹಾಕದಂತೆ ಯಾರು ತಡೆಯಲಿಲ್ಲ. ಆದರೆ ಪರಭಾಷಾ ಅಭಿಮಾನಿಗಳ ಅಟ್ಟಹಾಸಕ್ಕೆ ಕನ್ನಡ ಪರ ಸಂಘಟನೆಗಳು ತಡೆ ಒಡ್ಡಿದ್ದವು. ಚಿತ್ರಮಂದಿರಗಳ ಆವರಣದಲ್ಲಿ ಡಿಜೆ ಹಾಕಲು ಅವಕಾಶ ಇಲ್ಲ. ಆದರೂ ಪವನ್ ಕಲ್ಯಾಣ್ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಚಿತ್ರಮಂದಿರದ ಆವರಣದಲ್ಲಿ ಡಿಜೆ ಹಾಕಿ ಸಂಭ್ರಮಿಸಲು ಕೆಲವರು ಪ್ರಯತ್ನಿಸಿದ್ದರು. ಅದೇ ರೀತಿ ಕರ್ನಾಟಕದಲ್ಲಿ ಕನ್ನಡದಲ್ಲೇ ಸಿನಿಮಾ ಬ್ಯಾನರ್‌ಗಳನ್ನು ಅಭಿಮಾನಿಗಳು ಹಾಕಬೇಕು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿದ್ದರು. ಇದನ್ನು ನೋಡಿ ಕರ್ನಾಟಕದಲ್ಲಿ ತೆಲುಗು ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಿದರು ಎಂದು ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಬಿಂಬಿಸಲಾಗಿತ್ತು.
ಸದ್ಯ ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಹಳ ಹಿಂದೆ ಶುರುವಾಗಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಅಂತೂ ಇಂತೂ ಈ ವಾರ ತೆರೆಗೆ ಬರ್ತಿದೆ. ಒಂದರ್ಥದಲ್ಲಿ ಪವನ್ ಕಲ್ಯಾಣ್ ಕೊನೆ ಸಿನಿಮಾ ಎಂದೇ ಬಿಂಬಿಸಲಾಗುತ್ತಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











