ರಾಜಮೌಳಿ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ಗರಂ
ನಿರ್ದೇಶಕ ರಾಜಮೌಳಿ ತೆಲುಗು ಚಿತ್ರರಂಗದಲ್ಲಿ ಅಜಾತ ಶತ್ರು. ಎಲ್ಲ ನಾಯಕ ನಟರು, ನಿರ್ಮಾಪಕರು, ತಂತ್ರಜ್ಞರೊಟ್ಟಿಗೆ ಉತ್ತಮ ಬಾಂಧವ್ಯವನ್ನು ರಾಜಮೌಳಿ ಹೊಂದಿದ್ದಾರೆ. ರಾಜಮೌಳಿಯನ್ನು ಟೀಕಿಸುವ ರಾಮ್ ಗೋಪಾಲ್ ವರ್ಮಾ ಜೊತೆಗೂ ನಗು-ನಗುತ್ತಾ ಮಾತನಾಡುತ್ತಾರೆ ರಾಜಮೌಳಿ.
ಆದರೆ ಇಂತಿಪ್ಪ ರಾಜಮೌಳಿ ವಿರುದ್ಧ ನಟ ಪವನ್ ಕಲ್ಯಾಣ್ ಅಭಿಮಾನಿಗಳು ಬಹಳ ಆಕ್ರೋಶಗೊಂಡಿದ್ದಾರೆ. ಅದಕ್ಕೆ ಸಕಾರಣವೂ ಇದೆ.
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುವುದಾಗಿ ನಿಶ್ಚಯವಾಗಿತ್ತು. ಆದರೆ ರಾಜಮೌಳಿ ಹಾಗೂ ಅವರ 'ಆರ್‌ಆರ್‌ಆರ್' ತಂಡದ ಮನವಿಯಿಂದಾಗಿ ಅವರ ಸಿನಿಮಾಕ್ಕೆ ಹಾದಿ ಮಾಡಿಕೊಡಲು ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಯ್ತು. ಇದು ಪವನ್ ಕಲ್ಯಾಣ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಒಬ್ಬರು. ಅವರ ಸಿನಿಮಾದ ಬಿಡುಗಡೆಯನ್ನು ಮತ್ತೊಂದು ಸಿನಿಮಾದ ಕಾರಣದಿಂದ ಮುಂದೂಡುವುದು ಅವರ ಅಸಂಖ್ಯ ಅಭಿಮಾನಿಗಳಿಗೆ ಸರಿ ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜಮೌಳಿ ವಿರುದ್ಧ ಟೀಕೆ, ನಿಂದನೆಗಳನ್ನು ಪವನ್ ಅಭಿಮಾನಿಗಳು ಮಾಡುತ್ತಿದ್ದಾರೆ.
ರಾಜಮೌಳಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇತರೆ ಸಿನಿಮಾಗಳ ಬಿಡುಗಡೆಯನ್ನು ತಡೆದಿದ್ದಾರೆ ಎಂದು ಪವನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಆರ್‌ಆರ್‌ಆರ್' ಸಿನಿಮಾವು ತಮ್ಮ ಬಿಡುಗಡೆ ದಿನಾಂಕ ಘೋಷಿಸುವ ಮುನ್ನವೇ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದ ಸಿನಿಮಾಗಳ ಬಿಡುಗಡೆಯನ್ನು ಸಹ ಮುಂದೂಡುವಂತೆ ರಾಜಮೌಳಿ ಮಾಡಿದ್ದಾರೆ. 'ಆರ್‌ಆರ್‌ಆರ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವಾಗ ಯಾವ ನಿರ್ಮಾಪಕರನ್ನೂ ಸಂಪರ್ಕಿಸದೇ ಇದ್ದ ರಾಜಮೌಳಿ ಇದೀಗ ತಮ್ಮ ಸಿನಿಮಾ ಬಿಡುಗಡೆಗಾಗಿ ನಿರ್ಮಾಪಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾದ ಬಿಡುಗಡೆ ಮುಂದೂಡಲ್ಪಡುವುದು ನಿರ್ಮಾಪಕ ಸೂರ್ಯದೇವರ ನಾಗವಂಶಿ ಅವರಿಗೆ ಇಷ್ಟವಿರಲಿಲ್ಲ. ಆದರೆ ನಿರ್ಮಾಪಕ ದಿಲ್ ರಾಜು ಮೂಲಕ ಒತ್ತಡ ಹೇರಿಸಿ 'ಭೀಮ್ಲ ನಾಯಕ್' ಸಿನಿಮಾದ ಬಿಡುಗಡೆ ಮುಂದೂಡುವಂತೆ ರಾಜಮೌಳಿ ಮಾಡಿದ್ದಾರೆ. ನಿನ್ನೆ ನಡೆದ ನಿರ್ಮಾಪಕರ ಸಭೆಗೆ ಆಗಮಿಸಿದ್ದ ಸೂರ್ಯದೇವರ ನಾಗವಂಶಿ ಅರ್ಧದಲ್ಲಿಯೇ ಎದ್ದು ಹೋದರು. ಆ ಬಳಿಕ ನಿರ್ಮಾಪಕ ದಿಲ್ ರಾಜ್, 'ಭೀಮ್ಲ ನಾಯಕ್' ಸಿನಿಮಾವನ್ನು ಮುಂದೂಡಲಾಗಿರುವ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು.
ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಸಿನಿಮಾಗಳಿಗೆ ಸಿಗುವ ಓಪನಿಂಗ್ ಇನ್ನಾವುದೇ ಸಿನಿಮಾಗಳಿಗೂ ಸಿಗುವುದಿಲ್ಲ. 'ಆರ್‌ಆರ್‌ಆರ್' ಸಿನಿಮಾ ಎಷ್ಟೇ ಬಿಗ್ ಬಜೆಟ್, ಒಳ್ಳೆ ಕಂಟೆಂಟ್ ಸಿನಿಮಾ ಆಗಿದ್ದರೂ ಪವನ್ ಕಲ್ಯಾಣ್ ಸ್ಟಾರ್ ಡಮ್ ಮುಂದೆ ತರಗೆಲೆಯಾಗಿಬಿಡುವ ಆತಂಕ ಇತ್ತು. ಹಾಗಾಗಿಯೇ ರಾಜಮೌಳಿ ತಮ್ಮ ಗೆಳೆಯ ಹಾಗೂ ಪವನ್ ಕಲ್ಯಾಣ್‌ಗೂ ಆಪ್ತವಾಗಿರುವ ನಿರ್ಮಾಪಕ ದಿಲ್ ರಾಜು ಮೂಲಕ ಒತ್ತಡ ತಂದು ಸಿನಿಮಾವನ್ನು ಮುಂದಕ್ಕೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಂತರ ಟ್ವೀಟ್ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ.
ಆದರೆ ರಾಜಮೌಳಿ ಎಷ್ಟೇ ಒತ್ತಡ ಹಾಕಿದರೂ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆಯನ್ನು ಮುಂದೂಡಲು ಒಪ್ಪಿಕೊಂಡಿಲ್ಲ. 'ರಾಧೆ-ಶ್ಯಾಮ್' ಸಿನಿಮಾವು ಜನವರಿ 12 ರಂದು ತೆರೆಗೆ ಬರುವುದು ಪಕ್ಕಾ ಎನ್ನಲಾಗಿದೆ. ಸಿನಿಮಾದ ಬಿಡುಗಡೆ ಮುಂದೂಡುವಂತೆ ಮಾಡಲು ರಾಜಮೌಳಿ ಹಲವು ಯತ್ನಗಳನ್ನು ಮಾಡಿದರಾದರೂ ಈಗಾಗಲೇ ಬಿಡುಗಡೆ ಬಹಳ ತಡವಾಗಿರುವ ಕಾರಣ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದಿದೆ. ಇದರಿಂದಾಗಿ ಪ್ರಭಾಸ್ ಹಾಗೂ ರಾಜಮೌಳಿ ನಡುವೆ ಮನಸ್ಥಾಪ ಸಹ ಉಂಟಾಗಿದೆ ಎನ್ನಲಾಗುತ್ತಿದೆ.
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್. ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಾಣಾ ದಗ್ಗುಬಾಟಿ ಪವನ್ ಎದುರು ಮತ್ತೊಬ್ಬ ನಾಯಕನಾಗಿ ನಟಿಸಿದ್ದಾರೆ. ಸಿನಿಮಾವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡಿದ್ದು, ಮೂಲ ಮಲಯಾಳಂ ಸಿನಿಮಾವನ್ನು ಪವನ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ತಿದ್ದಿ ಚಿತ್ರಕತೆ ಬರೆದುಕೊಟ್ಟಿರುವುದು ನಿರ್ದೇಶಕ ತ್ರಿವಿಕ್ರಮ್.


Click it and Unblock the Notifications











