ದಿನಕ್ಕೆ ₹2 ಕೋಟಿ ಸಂಭಾವನೆ ಪಡೆಯುವ ಪವನ್ ಕಲ್ಯಾಣ್ ಒಟ್ಟು ಆಸ್ತಿ, ಸಾಲ ಎಷ್ಟಿದೆ?
ತೆಲುಗು ನಟ ಪವನ್ ಕಲ್ಯಾಣ್ ರಾಜಕೀಯರಂಗದಲ್ಲೂ ಸಕ್ರಿಯರಾಗಿದ್ದಾರೆ. ತಮ್ಮದೇ ಜನಸೇನಾ ಪಕ್ಷ ಸ್ಥಾಪಿಸಿ ಜನ ಸೇವೆ ಮಾಡುವ ಮಹದಾಸೆ ಹೊಂದಿದ್ದಾರೆ. ಕಳೆದ ಆಂಧ್ರ ವಿಧಾನಸಭೆ ಚುನವಾಣೆಯಲ್ಲಿ ಪವರ್ ಸ್ಟಾರ್ ಹೀನಾಯವಾಗಿ ಸೋತಿದ್ದರು. ಈ ಬಾರಿ ಟಿಡಿಪಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದಾರೆ.
ಈ ಬಾರಿ ಆಂಧ್ರದ ಪಿತಂಪುರ ಕ್ಷೇತ್ರದಿಂದ ಪವನ್ ಕಲ್ಯಾಣ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಲೋಕಸಭೆ ಚುನಾವಣೆ ಜೊತೆಗೆ ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೀತಿದೆ. ನಾಮಪತ್ರ ಸಲ್ಲಿಕೆ ವೇಳೆ ಪವನ್ ಕಲ್ಯಾಣ್ ತಮ್ಮ ಆಸ್ತಿ, ಸಾಲ ಎಲ್ಲವನ್ನು ಘೋಷಿಸಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಜನಸೇನಾನಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಬಳಿ ಒಟ್ಟು 164.53 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದಾರೆ.

ಪವನ್ ಬಳಿ 65.77 ಕೋಟಿ ರೂ. ಆಸ್ತಿ, 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ 1.10 ಕೋಟಿ ರೂ. ನಷ್ಟವನ್ನು ನಮೂದಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ 114 ಕೋಟಿ ರೂ. ಆಸ್ತಿ ಸಂಪಾದಿಸಿರುವುದಾಗಿ ಮಾಹಿತಿ ನೀಡಿದ್ದಾರೆ. 2019ರ ವಿಧಾನಸಭೆ ಚುನಾವಣೆ ವೇಳೆ ತಮ್ಮ ಬಳಿ 56 ಕೋಟಿ ರೂ. ಆಸ್ತಿ ಇರುವುದಾಗಿ ಪವನ್ ಅಫಿಡವಿಟ್‌ನಲ್ಲಿ ನಮೂದಿಸಿದ್ದರು. ಈ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಮಾಹಿತಿ ನೀಡಿದ್ದಾರೆ.
ಪವನ್ ಕಲ್ಯಾಣ್ 64 ಕೋಟಿ ರೂ.ಸಾಲ ಹೊಂದಿದ್ದಾರೆ. ಇದರಲ್ಲಿ ವಿವಿಧ ಬ್ಯಾಂಕ್‌ಗಳಿಂದ 17 ಕೋಟಿ ರೂ. ಹಾಗೂ ಮತ್ತು ಕೆಲ ವ್ಯಕ್ತಿಗಳಿಂದ 46 ಕೋಟಿ 70 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ತಿಳಿಸಿದ್ದಾರೆ. ಇನ್ನು ವಿವಿಧ ಸಂಘಟನೆಗಳು, ಜನಸೇನಾ ಪಕ್ಷದಿಂದ ಕೈಗೊಳ್ಳುವ ಸೇವಾ ಕಾರ್ಯಕ್ರಮಗಳು ಹಾಗೂ ಪಕ್ಷದ ಕಾರ್ಯಕ್ರಮಗಳಿಗೆ ಪವರ್ ಸ್ಟಾರ್ ಕಲ್ಯಾಣ್ 20 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ತಮ್ಮ ಜನಸೇನಾ ಪಕ್ಷಕ್ಕೆ 17 ರೂ. ದೇಣಿಗೆ ನೀಡಿರುವ ಬಗ್ಗೆ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.
ಚಿರಂಜೀವಿ ಪತ್ನಿ ಸುರೇಖಾ ಅಂದರೆ ತಮ್ಮ ಅತ್ತಿಗೆ ಬಳಿ ಕೂಡ 2 ಕೋಟಿ ರೂ. ಸಾಲ ಪಡೆದಿರುವುದಾಗಿ ಪವನ್ ಕಲ್ಯಾಣ್ ಮಾಹಿತಿ ನೀಡಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ನಾನು ಏನಾದರೂ ಸಾಧಿಸಿದ್ದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಅತ್ತಿಗೆ ಸುರೇಖಾ ಎಂದು ಸಾಕಷ್ಟು ಬಾರಿ ಪವರ್ ಸ್ಟಾರ್ ಹೇಳಿಕೊಂಡಿದ್ದಾರೆ.

ಸಹೋದರ ಚಿರಂಜೀವಿ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ಹೀರೊ ಆಗಿ ಸಕ್ಸಸ್ ಕಂಡರು. ತಮ್ಮ ವಿಭಿನ್ನ ಮ್ಯಾನರಿಸಂ, ಆಕ್ಷನ್, ಸ್ಟೈಲ್‌ನಿಂದ ಸಿನಿರಸಿಕರ ಮನಗೆದ್ದರು. ಸಹೋದರ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿದಾಗ ಜೊತೆಗೆ ನಿಂತರು. ಆದರೆ ಚಿರು ಈ ಪ್ರಯತ್ನದಲ್ಲಿ ಗೆಲ್ಲಲಿಲ್ಲ. ಬಳಿಕ ಪವನ್ ಕಲ್ಯಾಣ್ 2014ರಲ್ಲಿ ಜನಸೇನಾ ಪಕ್ಷ ಸ್ಥಾಪಿಸಿದರು.
'ಬ್ರೋ' ಚಿತ್ರದಲ್ಲಿ ಪವನ್ ಕಲ್ಯಾಣ್ ಕೊನೆಯದಾಗಿ ನಟಿಸಿದ್ದರು. ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆ ಚಿತ್ರಕ್ಕಾಗಿ 22 ದಿನ ಕಾಲ್‌ಶೀಟ್ ಕೊಟ್ಟಿದ್ದ ಪವರ್ ಸ್ಟಾರ್ 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದರೆ ದಿನಕ್ಕೆ 2 ಕೋಟಿ ರೂ. ಎನ್ನಬಹುದು. ಈ ವಿಚಾರವನ್ನು ಖುದ್ದು ಪವನ್ ಕಲ್ಯಾಣ್ ಪಕ್ಷದ ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಈ ಬಾರಿ ಜಗನ್ ಸರ್ಕಾರ ಇಳಿಸಲು ಪವನ್ ಕಲ್ಯಾಣ್ ಪಣ ತೊಟ್ಟಿದ್ದಾರೆ. ಆದರೆ ಅದು ಸುಲಭವಾಗಿಲ್ಲ ಎನ್ನಲಾಗುತ್ತಿದೆ.


Click it and Unblock the Notifications











