ಕೆವಿಎನ್- ಚಿರಂಜೀವಿ ಚಿತ್ರಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾನ್ ಕ್ಲಾಪ್; ಇಲ್ಲದೆ ಚಿತ್ರಗಳು
ಹೊಂಬಾಳೆ ಫಿಲ್ಮ್ಸ್ ಹಾದಿಯಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಪರಭಾಷೆಗಳಲ್ಲಿ ಸಿನಿಮಾಗಳನ್ನು ತಯಾರಿಸುತ್ತಿದೆ. ಸೋಲು ಗೆಲುವಿನ ಬಗ್ಗೆ ಯೋಚಿಸದೇ ಹಣ ಸುರಿಯುತ್ತಿದೆ. ಸದ್ಯ ಚಿರಂಜೀವಿ ನಟನೆಯ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದೆ.
ಇನ್ನು ಹೆಸರಿಡದ ಸಿನಿಮಾ ಮುಹೂರ್ತ ನೆರವೇರಿದೆ. ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಬಾಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಮೆಗಾಸ್ಟಾರ್ ಅಬ್ಬರಿಸೋಕೆ ಬರ್ತಿದ್ದಾರೆ. ಇತ್ತೀಚೆಗೆ ಪಾತ್ರಕ್ಕಾಗಿ ಕಸರತ್ತು ಮಾಡಿ ಚಿರಂಜಿವಿ ಬೆವರಿಳಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು.

ಕನ್ನಡದಲ್ಲಿ 'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಪದೇ ಪದೆ ಈ ಸಿನಿಮಾ ರಿಲೀಸ್ ಮುಂದಕ್ಕೆ ಹೋಗ್ತಿದೆ. ತಮಿಳಿನಲ್ಲಿ ವಿಜಯ್ ಕಾಂಬಿನೇಷನ್‌ನಲ್ಲಿ ಮಾಡಿರುವ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗಿಲ್ಲ. ಕನ್ನಡದಲ್ಲಿ ಬಂದ 'ಕೆಡಿ' ಸಿನಿಮಾ ಲಾಭ ತಂದು ಕೊಟ್ಟಿಲ್ಲ. ಆದರೂ ಕೆವಿಎನ್ ಸಂಸ್ಥೆ ದರ್ಬಾರ್ ಮುಂದುವರೆದಿದೆ.
ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಕೆವಿಎನ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಚಿರಂಜೀವಿ ನಟಿಸಿದ 'ವಾಲ್ತೇರು ವೀರಯ್ಯ' ಚಿತ್ರವನ್ನು ಬಾಬಿ ನಿರ್ದೇಶನ ಮಾಡಿದ್ದರು. ಅದೇ ಕಾಂಬಿನೇಷನ್ ಮತ್ತೆ ರಿಪೀಟ್ ಆಗ್ತಿದೆ. ಇದು ಚಿರು ನಟನೆಯ 158ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ 'ಮೆಗಾ 158' ಹೆಸರಿನಲ್ಲಿ ಸಿನಿಮಾ ಶುರುವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಪವನ್ ಕಲ್ಯಾಣ್ ಜೊತೆ ಮತ್ತೊಬ್ಬ ಸಹೋದರ ನಾಗಬಾಬು ಕೂಡ ಹಾಜರಾಗಿದ್ದರು.
ಚಿರಂಜೀವಿ ಪುತ್ರಿ ಸುಶ್ಮಿತಾ, ನಾಗಬಾಬು ಪುತ್ರಿ ನಿಹಾರಿಕಾ, ಭಾವ ಅಲ್ಲು ಅರವಿಂದ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಭಾಗಿ ಆಗಿ ಚಿತ್ರಕ್ಕೆ ಶುಭ ಕೋರಿದರು. 'ಮನ ಶಂಕರವಪ್ರಸಾದ್‌ಗಾರು' ಸಿನಿಮಾ ಮೂಲಕ ಚಿರಂಜೀವಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 'ವಿಶ್ವಂಭರ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೊಂದು ಸಿನಿಮಾ ಶುರುವಾಗಿದೆ.
'ಮೆಗಾ 158' ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಮ್‌ಚರಣ್ ಕೂಡ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಬಹಳ ಹಿಂದಿನಿಂದಲೂ ರಾಮ್‌ಚರಣ್ ಜೊತೆ ಸಿನಿಮಾ ಮಾಡಲು ಕೆವಿಎನ್ ಸಂಸ್ಥೆ ಮಾತುಕತೆ ನಡೆಸುತ್ತಿದೆ. ನರ್ತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಸಾಧ್ಯವಾಗಲಿಲ್ಲ.
ರಾಮ್‌ಚರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ಕೆವಿಎನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಸಾದ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಚಿರಂಜೀವಿ ಕಾಂಬಿನೇಷನ್‌ನಲ್ಲಿ ಸಿನಿಮಾ ಆರಂಭಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಸಾಥ್ ಕೊಡಲಿದ್ದಾರೆ.
ಈ ಸಿನಿಮಾ ಮೂಲಕ ಕೆವಿಎನ್ ಸಂಸ್ಥೆ ತೆಲುಗು ಚಿತ್ರರಂಗ ಪ್ರವೇಶಿಸಿದೆ. ಮುಂದೆ ಸ್ಟಾರ್ ನಟರ ಜೊತೆ ಸಿನಿಮಾ ಮಾಡಲು ತಯಾರಿ ನಡೆದಿದೆ. 'ಟಾಕ್ಸಿಕ್' ಹಾಗೂ 'ಜನ ನಾಯಗನ್' ಸಿನಿಮಾಗಳ ಬಿಡುಗಡೆ ತಡವಾಗುತ್ತಿದ್ದರೂ ಸಂಸ್ಥೆ ಮಾತ್ರ ಹಿಂದಡಿ ಇಡುತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳನ್ನು ಆರಂಭಿಸುತ್ತಲೇ ಇದೆ. ಒಂದು ಬಾಲಿವುಡ್ ಚಿತ್ರಕ್ಕೂ ಈಗಾಗಲೇ ಚಾಲನೆ ಕೊಡಲಾಗಿದೆ. ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿಖಾನ್ ನಟಿಸಲಿದ್ದಾರೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. 'ಬಾಲನ್ ದಿ ಬಾಯ್' ಎಂಬ ಮಲಯಾಳಂ ಚಿತ್ರವನ್ನು ಸಂಸ್ಥೆ ಕೈಗೆತ್ತಿಕೊಂಡಿದೆ.


Click it and Unblock the Notifications