ಪವನ್ ಕಲ್ಯಾಣ್, ಹಾಸ್ಯ ಸಿನಿಮಾ ಇದ್ದಂತೆ: ನಾನಿ
ಈ ಹಿಂದಿನ ಕೆಲವು ಸಮಯಕ್ಕೆ ಹೋಲಿಸಿದರೆ ನಟ ಪವನ್ ಕಲ್ಯಾಣ್ ರಾಜಕೀಯದಲ್ಲಿ ಈಗ ಹೆಚ್ಚಿಗೆ ಸಕ್ರಿಯವಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ ವಿರುದ್ಧ ತೀವ್ರ ವಾಗ್ದಾಳಿ, ಹೋರಾಟಗಳನ್ನು ಆರಂಭಿಸಿದ್ದಾರೆ.
ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ಪವನ್ ಕಲ್ಯಾಣ್ ಹಾಗೂ ಜಗನ್ ನಡುವೆ ವಾಗ್ಯುದ್ಧ ನಡೆಯುತ್ತಲೇ ಇದ್ದು, ದಿನೇ ದಿನೇ ಇದು ಹೆಚ್ಚಾಗುತ್ತಿದೆ.
ವೇದಿಕೆ ಸಿಕ್ಕಾಗೆಲ್ಲ ನಟ ಪವನ್ ಕಲ್ಯಾಣ್, ಜಗನ್ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇದ್ದಾರೆ. 'ರಿಪಬ್ಲಿಕ್' ಸಿನಿಮಾದ ಕಾರ್ಯಕ್ರಮದಲ್ಲಿ ಜಗನ್ ಮೇಲೆ ಏಕವಚನದ ವಾಗ್ದಾಳಿಯನ್ನು ನಟ ಪವನ್ ಕಲ್ಯಾಣ್ ಮಾಡಿದ್ದರು. ಆ ಬಳಿಕ ಜಗನ್ ಬೆಂಬಲಿಗರು ಸಹ ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.

ಇದೀಗ ಆಂಧ್ರ ಪ್ರದೇಶದ ಮಂತ್ರಿ ಪೆರ್ನಿ ನಾನಿ, ಪವನ್ ಕಲ್ಯಾಣ್ ಅನ್ನು 'ಹಾಸ್ಯ ಸಿನಿಮಾ' ಎಂದು ಮೂದಲಿಸಿದ್ದಾರೆ.
''ಪವನ್ ಕಲ್ಯಾಣ್ ಒಂದು ರೀತಿ ಹಾಸ್ಯ ಸಿನಿಮಾ ಇದ್ದಂತೆ. ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಮಾನ್ಯತೆ ನೀಡಬೇಕೆಂಬ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಪವನ್ ಕಲ್ಯಾಣ್ ಹೇಳಿದ್ದರು. ವಿಶೇಷ ಸ್ಥಾನ ಮಾನ ಹೋರಾಟಕ್ಕೆ ಸಂಬಂಧಿಸಿದಂತೆ ಲೋಕಸಭೆ ಸದಸ್ಯರು ರಾಜೀನಾಮೆ ನೀಡಿದರೆ ನಾನು ದೆಹಲಿಗೆ ಬಂದು ಅವರೊಟ್ಟಿಗೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದರು. ಅಂತೆಯೇ ನಮ್ಮ ಸಂಸದರು ರಾಜೀನಾಮೆ ನೀಡಿದರು ಆದರೆ ಪವನ್ ಕಲ್ಯಾಣ್ ನಾಪತ್ತೆ'' ಎಂದರು ಸಚಿವ ಪೆರ್ನಿ ನಾನಿ.
''ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ-ಮಾನ ವಿಷಯದಲ್ಲಿ ಹಾಸ್ಯ ಮಾಡಿರುವ ಪವನ್ ಕಲ್ಯಾಣ್ ಇದೀಗ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ವಿಷಯವಾಗಿ ತಮಾಷೆ ಮಾಡುತ್ತಿದ್ದಾರೆ. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ವಿಷಯವಾಗಿ ಈಗಾಗಲೇ ಒಂದು ಸುಳ್ಳು ಶೋ ಮಾಡಿರುವ ಪವನ್ ಕಲ್ಯಾಣ್ ಇದೀಗ. ಮಂಗಳಗಿರಿಗೆ ಹೋಗಿ ಅಲ್ಲಿಯೂ ಸುಳ್ಳು ಹೇಳಲು, ಫ್ಲಾಪ್ ಶೋ ನೀಡುತ್ತಿದ್ದಾರೆ'' ಎಂದರು.
''ತಮ್ಮ ಸಿನಿಮಾಗಳನ್ನು ಫ್ರೀ ಆಗಿ ಆಂಧ್ರದಲ್ಲಿ ಪ್ರದರ್ಶನ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ, ಅವರು ತಮ್ಮ ಸಿನಿಮಾಗಳನ್ನು ಫ್ರೀ ಆಗಿ ಪ್ರದರ್ಶನ ಮಾಡುವುದೇನೂ ಬೇಡ. ಸಿನಿಮಾ ರಂಗದಲ್ಲಿರುವ ಬ್ಲಾಕ್ ಮಾರ್ಕೆಟ್ ತಡೆಗಟ್ಟಿದರೆ ಸಾಕು'' ಎಂದರು ಪೆರ್ನಿ ನಾನಿ.
''ಪವನ್ ಕಲ್ಯಾಣ್‌ಗೆ ಹೋಲಿಸಿದರೆ ನಟ ಬಾಲಕೃಷ್ಣ ಎಷ್ಟೋ ವಾಸಿ. ಅವರು ಈ ಬಗ್ಗೆ ಟಿಕೆಟ್ ವಿಷಯದ ಬಗ್ಗೆ ಆಗಲಿ ಬೇರೆ ಯಾವುದೇ ವಿಷಯವಾಗಿ ಪವನ್ ಕಲ್ಯಾಣ್ ರೀತಿ ಬಾಯಿಗೆ ಬಂದಂತೆ ಮಾತನಾಡಿಲ್ಲ'' ಎಂದರು.
ಕೆಲವು ದಿನಗಳ ಹಿಂದೆ ವೈಜಾಗ್ (ವಿಶಾಖಪಟ್ಟಣಂ) ಉಕ್ಕು ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ಜನಸೇನಾ ಪಕ್ಷವು ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, '''ನ್ನ ಸಿನಿಮಾಗಳನ್ನು ತಡೆದು ಬಿಟ್ಟರು. ನನ್ನ ಸಿನಿಮಾಗಳನ್ನು ತಡೆವ ಮೂಲಕ ನನ್ನ ಆರ್ಥಿಕ ಮೂಲಗಳನ್ನು ಬಂದ್ ಮಾಡಿ ನನ್ನನ್ನು ಹೆದರಿಸಲು ನೋಡಿದರು. ಆದರೆ ನಾನು ಹೆದರುವ ವ್ಯಕ್ತಿ ಅಲ್ಲ. ನಾನು ಮನಸ್ಸು ಮಾಡಿದರೆ ನನ್ನ ಸಿನಿಮಾಗಳನ್ನು ಇಡೀ ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಬೇಕಾದರೆ ತೋರಿಸುತ್ತೀನಿ'' ಎಂದು ಸವಾಲು ಹಾಕಿದ್ದರು.
ಮುಂದುವರೆದು, ''ಸಿನಿಮಾ ಟಿಕೆಟ್ ವ್ಯವಹಾರದಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ಹೇಳಿದ್ದಾರೆ. ಸರಿ ಒಪ್ಪಿಕೊಳ್ಳೋಣ, ಕೆಲವು ಚಿತ್ರಮಂದಿರ ಮಾಲೀಕರು ಸರಿಯಾಗಿ ತೆರಿಗೆ ಪಾವತಿಸದೇ ಇರಬಹುದು. ಆದರೆ ಈ ಸರ್ಕಾರ ತಾನೇ ತಯಾರಿಸಿ ಮಾರುತ್ತಿರುವ ಮದ್ಯದ ವ್ಯವಹಾರದಲ್ಲಿ ಪಾರದರ್ಶಕತೆ ಇದೆಯಾ? ಮದ್ಯಪಾನ ನಿಷೇಧ ಎಂದು ಹೇಳಿದರು ಸಿಎಂ ಆದರೆ ಕೊನೆಗೆ ತಾವೇ ಮದ್ಯ ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆ ಎಲ್ಲ ವ್ಯವಹಾರ ನಗದು ರೂಪದಲ್ಲಿಯೇ ನಡೆಯುತ್ತದೆ ಹಾಗಿದ್ದರೆ ಅದರಲ್ಲಿ ಪಾರದರ್ಶಕತೆ ಎಲ್ಲಿದೆ. ಮದ್ಯ ವ್ಯಾಪಾರದಿಂದ ಬಂದ ಹಣವನ್ನು ಲಾರಿಯಲ್ಲಿ ತುಂಬಿ ಅದರ ಭದ್ರತೆಯ ನಡುವೆ ಆ ಹಣವನ್ನು ಸಾಗಿಸಲಾಗುತ್ತಿದೆಯಂತೆ. ಇದಾ ನಿಮ್ಮ ಪಾರದರ್ಶಕತೆ'' ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದರು.


Click it and Unblock the Notifications











