ತಮ್ಮ ಸಿನಿಮಾ ಸಂಭಾವನೆ ಎಷ್ಟು ಎಂದು ಬಹಿರಂಗವಾಗಿ ಘೋಷಿಸಿದ ಪವನ್ ಕಲ್ಯಾಣ್: ದಂಗಾದ ಟಾಲಿವುಡ್
ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ಸಂಭಾವನೆ ತಗೋತ್ತಾರಂತೆ, ಸಲ್ಮಾನ್ ಖಾನ್ 80 ಕೋಟಿ ಚಾರ್ಜ್ ಮಾಡ್ತಾರಂತೆ ದಳಪತಿ ವಿಜಯ್ 100 ಕೋಟಿ ಕೇಳ್ತಾರಂತೆ, ರಜನಿಕಾಂತ್ ರೆಮ್ಯೂನರೇಷನ್ 100 ಕೋಟಿ ಮೀರಿದೆಯಂತೆ ಹೀಗೆ ಅಂತೆ ಕಂತೆ ಸುದ್ದಿಗಳನ್ನು ಕೇಳ್ತಿರ್ತೀವಿ. ಆದರೆ ಯಾರು ಕೂಡ ತಮ್ಮ ಸಂಭಾವನೆ ಎಷ್ಟು ಎನ್ನುವುದನ್ನು ಬಹಿರಂಗವಾಗಿ ಹೇಳುವುದಿಲ್ಲ. ಆದರೆ ನಟ ಪವನ್ ಕಲ್ಯಾಣ್ ಹೇಳಿದ್ದಾರೆ.
ನಟ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಜನಸೇನಾ ಪಕ್ಷ ಸ್ಥಾಪಿಸಿ ಆಂಧ್ರ ರಾಜಕಾರಣದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತರು ಛಲ ಬಿಡದೇ ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದರೆ ಎದುರಾಳಿ ಪಕ್ಷಗಳ ನಾಯಕರು ಪದೇ ಪದೇ ಪವರ್ ಸ್ಟಾರ್‌ನ ಟೀಕೆ ಮಾಡುತ್ತಿದ್ದಾರೆ. ದುಡ್ಡಿಗಾಗಿ ಪವನ್ ರಾಜಕೀಯಕ್ಕೆ ಬಂದಿದ್ದಾರೆ. ಆ ಪಕ್ಷದಿಂದ ಇಷ್ಟು ಸಿಗುತ್ತಿದೆ, ಪ್ಯಾಕೇಜಿಗಾಗಿ ಅಭಿಮಾನಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮೂದಲಿಸುತ್ತಿರುತ್ತಾರೆ. ಅಂತಹವರಿಗೆ ಇದೀಗ ಪವನ್ ಉತ್ತರ ಕೊಟ್ಟಿದ್ದಾರೆ.

ನಾನ್ಯಾಕೆ ದುಡ್ಡಿಗಾಗಿ ನನ್ನನ್ನು ನಾನು ಮಾಡಿಕೊಳ್ಳಲಿ, ನಾನು ಸಿನಿಮಾ ಮಾಡಿಕೊಂಡು ಇದ್ದರೆ ಆರಾಮಾಗಿ ಇರಬಹುದು. ದಿನಕ್ಕೆ ನನ್ನ ಸಿನಿಮಾ ಸಂಭಾವನೆ 2 ಕೋಟಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಷ್ಟುದಿನ ಅಂತೆ ಕಂತೆ ಎಂದು ಕೇಳಿದ ಸುದ್ದಿ ನಿಜಾನೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ(ಮಾರ್ಚ್ 14) ಜನಸೇನಾ ಪಕ್ಷದ 10ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಜನಸೇನಾನಿ ಮಾತನಾಡಿದರು. ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಮಚಲಿಪಟ್ನಂದಲ್ಲಿ ಸಮಾವೇಶ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ "ಹಣಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ. ಅವಶ್ಯಕತೆ ಬಿದ್ದರೆ ಹಣ ಸಂಪಾದಿಸಿ ನಿಮಗೆ ಕೊಡುವಂತಹ ವ್ಯಕ್ತಿ. ಅದುಬಿಟ್ಟು ಹಣಕ್ಕಾಗಿ ಆಸೆ ಬೀಳಲ್ಲ. ನನಗೆ ಹಣದ ಅವಶ್ಯಕತೆ ಇಲ್ಲ. ಇವನ್ನು ನಾನು ಧೈರ್ಯವಾಗಿ ಹೇಳುತ್ತೇನೆ. ಈಗ ನಾನು ಮಾಡುತ್ತಿರುವ ಸಿನಿಮಾ ಚಿತ್ರೀಕರಣದಲ್ಲಿ 22 ದಿನ ಭಾಗಿ ಆಗುತ್ತಿದ್ದೇನೆ. ಆ ಚಿತ್ರಕ್ಕಾಗಿ ದಿನಕ್ಕೆ 2 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದೇನೆ. ಅಂದರೆ 22 ದಿನಕ್ಕೆ ಅಂದಾಜು 45 ಕೋಟಿ ರೂ. ತೆಗೆದುಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

"ಪ್ರತಿ ಚಿತ್ರಕ್ಕೂ ಅಷ್ಟು ಕೊಡುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ನನ್ನ ಆವರೇಜ್ ಸಿನಿಮಾ ಸಂಭಾವನೆ. ಇದೆಲ್ಲಾ ನೀವು ನನಗೆ ಸ್ಥಾನ ಅದು. ನಿಮ್ಮ ಹೃದಯದಲ್ಲಿ ಇಟ್ಟುಕೊಂಡ ಸ್ಥಾನ ಅದು. ನನಗೆ ಹಣದ ಅವಶ್ಯಕತೆ ಏನಿದೆ. ನಾನು ಸಂಪಾದಿಸಲಾಗದ ಹಣವೇ? ನಾನು ನೋಡದ ಸುಖವೇ? ಒಂದು ಹೊತ್ತು ತಿನ್ನುತ್ತೇನೆ ನಾನು. ನನ್ನ ಹೊಟ್ಟೆ ತುಂಬಿದರೆ ನಿಮ್ಮ ಕಷ್ಟ ಗೊತ್ತಾಗಲ್ಲ ಎಂದು ಒಂದೊತ್ತು ತಿನ್ನುತ್ತೇನೆ. ಸರ್ಕಾರಿ ಉದ್ಯೋಗಿ ಮಗ ನಾನು. ಕಷ್ಟ ನನಗೆ ಗೊತ್ತು. ಇಷ್ಟು ಸಂಪಾದಿಸುವ ತಾಕತ್ತು ಇದ್ದು ನಾನು ರಾಜಕೀಯದಲ್ಲಿ ಯಾಕೆ ಇದ್ದೀನಿ? 1964ರಿಂದ ಎಲ್ಲರೂ ಒಂದೇ ಹೇಳ್ತಿದ್ದಾರೆ. ಬದಲಾವಣೆ ಆಗಬೇಕು ಎಂದು"
"ಎಲ್ಲರೂ ಮಾತನಾಡುತ್ತಿದ್ದಾರೆ. ಆಡಳಿತದಲ್ಲಿ ಬದಲಾವಣೆ ಆಗಬೇಕು ಎಂದು. ಎಲ್ಲರೂ ಜಿಗಿಯಲು ಹೇಳುತ್ತಾರೆ. ಜಿಗಿಯುವವರು ಇಲ್ಲ. ಮುನ್ನಡೆಸುವವರು ಇಲ್ಲ. ನಾನು ಜಿಗಿದಿದ್ದೇನೆ ಧೈರ್ಯವಾಗಿ. ನೀವು ಸೋಲಿಸಿದಿರಿ. ಆದರೆ ನನಗೆ ನೋವಿಲ್ಲ. ನಿಮ್ಮ ನಂಬಿಕೆ ಗಳಿಸುತ್ತೇನೆ" ಎಂದು ಪವನ್ ಹೇಳಿದ್ದಾರೆ. ಪವರ್ ಸ್ಟಾರ್ ಸದ್ಯ ತಮಿಳಿನ 'ವಿನೋದಯ ಸಿತಂ' ಸಿನಿಮಾ ರೀಮೆಕ್‌ನಲ್ಲಿ ನಟಿಸ್ತಿದ್ದಾರೆ. ಇದೇ ಚಿತ್ರಕ್ಕೆ 22 ದಿನ ಕಾಲ್‌ಶೀಟ್ ಕೊಟ್ಟು 45 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಪಕ್ಷ ಸಂಘಟನೆಯ ಜೊತೆಗೆ 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಮತ್ತೆರಡು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಅಣ್ಣ ಚಿರಂಜೀವಿ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ತಮ್ಮದೇ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಮಾಡಿರುವ 25 ಸಿನಿಮಾಗಳಿಂದ 100 ಸಿನಿಮಾಗಳಷ್ಟು ಸ್ಟಾರ್‌ಡಮ್ ಸಂಪಾದಿಸಿದ್ದಾರೆ. ಆ 25 ಸಿನಿಮಾಗಳಲ್ಲೂ ಹಿಟ್‌ಗಿಂತ ಫ್ಲಾಪ್ ಸಿನಿಮಾಗಳೇ ಸಂಖ್ಯೆಯೇ ದೊಡ್ಡದಿದೆ. ಆದರೆ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ಇನ್ನು ಪವನ್ 'ವಿನೋದಯ ಸಿತಂ' ಚಿತ್ರಕ್ಕೆ 45 ಕೋಟಿ ಸಂಭಾವನೆ ಎಂದು ಘೋಷಿಸಿದ್ದಾರೆ. ಆದರೆ ಇದರ 2ರಷ್ಟು(80 ಕೋಟಿ) ಪಡೆಯುತ್ತಿದ್ದಾರೆ ಎನ್ನುವ ವಾದವೂ ಇದೆ.


Click it and Unblock the Notifications











