ಪವನ್ ಕಲ್ಯಾಣ್ ಹೊಸ ಸಿನಿಮಾ ಚಿತ್ರೀಕರಣ ಮುಗಿವ ಮುಂಚೆಯೇ ನೂರಾರು ಕೋಟಿ ಆಫರ್!
ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಪ್ರಮುಖರು. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಕೇರಳ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪವನ್ ಕಲ್ಯಾಣ್ ಹೊಂದಿದ್ದಾರೆ.
ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ಆಯಿತೆಂದರೆ ಮೊದಲ ಮೂರು ದಿನ ಹೌಸ್‌ಫುಲ್ ಪಕ್ಕಾ, ಸಿನಿಮಾ ತುಸು ಚೆನ್ನಾಗಿದ್ದರೆ ಮುಗಿಯಿತು ಎರಡು ವಾರದ ವರೆಗೆ ಟಿಕೆಟ್ ಸಿಗದು.
ಪಕ್ಕಾ ಸೂಪರ್ ಹಿಟ್ ನಟ ಎನಿಸಿಕೊಂಡಿರುವ ಪವನ್ ಕಲ್ಯಾಣ್ ಸಿನಿಮಾಗಳಿಗೆ ಭಾರಿ ಡಿಮ್ಯಾಂಡ್ ಅವರ ಸಿನಿಮಾ ಸೆಟ್ಟೇರುತ್ತಿದ್ದಂತೆಯೇ ಹಿನ್ನೆಲೆಯಲ್ಲಿ ಸಿನಿಮಾದ ಬ್ಯುಸಿನೆಸ್ ಲೆಕ್ಕಾಚಾರ, ಚರ್ಚೆ ಆರಂಭವಾಗಿಬಿಡುತ್ತದೆ. ಇದೀಗ ಪವನ್ ನಟನೆಯ 'ಹರಿಹರ ವೀರ ಮಲ್ಲು' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಆದರೆ ಈಗಲೇ ಸಿನಿಮಾಕ್ಕೆ ನೂರಾರು ಕೋಟಿ ಆಫರ್ ಬಂದಿದೆ.

ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿರುವ 'ಹರಿ ಹರ ವೀರ ಮಲ್ಲು' ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ರೆಟ್ರೊ ಲುಕ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಐತಿಹಾಸಿಕ ಕತೆಯನ್ನು ಈ ಸಿನಿಮಾ ಹೊಂದಿದ್ದು, ಪಕ್ಕಾ ಆಕ್ಷನ್ ಸಿನಿಮಾ ಇದಾಗಿದೆ. ಸಿನಿಮಾದ ಚಿತ್ರೀಕರಣ ಮುಗಿಯಲು ಇನ್ನೂ ಕೆಲವು ತಿಂಗಳುಗಳು ಬಾಕಿ ಇದೆ ಆದರೆ ಈಗಲೇ ಸಿನಿಮಾಕ್ಕೆ ನೂರಾರು ಕೋಟಿ ಆಫರ್ ಬಂದಿದೆ.
'ಹರಿ ಹರ ವೀರ ಮಲ್ಲು' ಸಿನಿಮಾದ ಆಡಿಯೋ ಹಕ್ಕನ್ನು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ಸಂಸ್ಥೆ ಟಿಪ್ಸ್ ಖರೀದಿಸಿದೆ. ಸಿನಿಮಾದ ಆಡಿಯೋ ಹಕ್ಕುಗಳಿಗೆ ಭಾರಿ ದೊಡ್ಡ ಮೊತ್ತವನ್ನೇ ಟಿಪ್ಸ್ ನೀಡಿದೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿರುವ ಈ ಸಿನಿಮಾದ ಹಾಡುಗಳಿಗೆ ಟಿಪ್ಸ್ ಸುಮಾರು 20 ಕೋಟಿ ನೀಡಿದೆ ಎನ್ನಲಾಗುತ್ತಿದೆ.
ಇನ್ನು ಸಿನಿಮಾ ಬಿಡುಗಡೆಗೆ ವಿತರಕರಿಂದ ಈಗಲೇ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲಿಯೂ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಸಿನಿಮಾದ ಬಿಡುಗಡೆಗೆ ಹಕ್ಕಿನ ಖರೀದಿಗೆ ಕೇಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಬೇರೆ ಬೇರೆ ರಾಜ್ಯಗಳಿಂದಲೂ ವಿತರಕರು ಚಿತ್ರತಂಡವನ್ನು ಸಂಪರ್ಕಿಸಿ ಭಾರಿ ಮೊತ್ತದ ಆಫರ್‌ಗಳನ್ನು ನೀಡುತ್ತಿದ್ದಾರಂತೆ. ವಿದೇಶಗಳಿಂದಲೂ ಸಿನಿಮಾ ಖರೀದಿಗೆ ಆಫರ್ ಬರುತ್ತಿವೆ.
ಇನ್ನು ಅಮೆಜಾನ್ ಪ್ರೈಂ ಸಹ ಪವನ್ ಕಲ್ಯಾಣ್ ಸಿನಿಮಾ ಖರೀದಿಗೆ ಭಾರಿ ಉತ್ಸಾಹ ತೋರಿದೆ. ಈ ಹಿಂದೆ 'ವಕೀಲ್ ಸಾಬ್' ಸಿನಿಮಾವನ್ನು ಖರೀದಿಸಿದ್ದ ಅಮೆಜಾನ್ ಪ್ರೈಂ, ಇದೀಗ 'ಹರಿ ಹರ ವೀರ ಮಲ್ಲು' ಸಿನಿಮಾಕ್ಕೂ ಭಾರಿ ಮೊತ್ತದ ಆಫರ್ ಅನ್ನೇ ನೀಡಿದೆ. ಆದರೆ ನಿರ್ಮಾಪಕರಾದ ಮೆಗಾ ಸೂರ್ಯ ಪ್ರೊಡಕ್ಷನ್ ಸಂಸ್ಥೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ.
ಇನ್ನು ಹರಿಹರ ವೀರ ಮಲ್ಲು ಸಿನಿಮಾ ಐತಿಹಾಸಿಕ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ ಹಾಗೂ ಅರ್ಜುನ್ ರಾಮ್‌ಪಾಲ್ ಅವರುಗಳು ಸಹ ಇದ್ದಾರೆ. ಸಿನಿಮಾದ ಐಟಂ ಹಾಡೊಂದರಲ್ಲಿ ಪೂಜಿತಾ ಪೊನ್ನಾಡ ನಟಿಸಿದ್ದಾರೆ.
'ಹರಿ ಹರ ವೀರ ಮಲ್ಲು' ಮಾತ್ರವೇ ಅಲ್ಲದೆ ಇನ್ನೂ ಕೆಲವು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ತೊಡಗಿಕೊಂಡಿದ್ದಾರೆ. ಸುರೇಂದ್ರ ರೆಡ್ಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ. ಜೊತೆಗೆ 'ಭವದೀಯಡು ಭಗತ್‌ಸಿಂಗ್' ಸಿನಿಮಾದಲ್ಲಿಯೂ ಪವನ್ ಕಲ್ಯಾಣ್ ನಟಿಸಲಿದ್ದಾರೆ.


Click it and Unblock the Notifications











