ಪವನ್ ಕಲ್ಯಾಣ್ ಸಿನಿಮಾದ 3 ಕೋಟಿ ಕಲೆಕ್ಷನ್ ಮುರಿದು ಹಾಕಲು ರೆಡಿಯಾಗ್ತಿದೆ ಪ್ರಭಾಸ್ ಸಿನಿಮಾ!

ತೆಲುಗು ಚಿತ್ರರಂಗದಲ್ಲಿ ಸದ್ಯ ವಿಂಟೇಜ್ ಸೂಪರ್ ಹಿಟ್ ಚಿತ್ರಗಳ ಮರು ಬಿಡುಗಡೆಯ ಪರ್ವ ನಡೆಯುತ್ತಿದೆ. ಇತ್ತೀಚೆಗಷ್ಟೇ ಹತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಧನುಷ್ ಅಭಿನಯದ 3 ಸಿನಿಮಾದ ತೆಲುಗು ಡಬ್ ವರ್ಷನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಆಶ್ಚರ್ಯವೇನೆಂದರೆ ಈ ಸಿನಿಮಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತೆಲುಗು ರಾಜ್ಯಗಳ ಹಲವು ನಗರಗಳಲ್ಲಿ 3 ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ಹೀಗೆ ಈ ಚಿತ್ರ ಮೊಬೈಲ್‌ನಲ್ಲಿಯೂ ಲಭ್ಯವಿರುವಾಗ ಇಷ್ಟು ದೊಡ್ಡ ಮಟ್ಟಕ್ಕೆ ಪ್ರದರ್ಶನ ಕಂಡು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಈ ಚಿತ್ರ ಮಾತ್ರವಲ್ಲದೇ ಇದಕ್ಕೂ ಮುನ್ನ ನಟ ಚಿರಂಜೀವಿ ಹುಟ್ಟುಹಬ್ಬದ ಪ್ರಯುಕ್ತ ವಿಂಟೇಜ್ ಬ್ಲಾಕ್ ಬಸ್ಟರ್ ಇಂಡಸ್ಟ್ರಿ ಹಿಟ್ ಘರಾನಾ ಮೊಗುಡು ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. ಆದರೆ ಘರಾನಾ ಮೊಗುಡು ನಿರೀಕ್ಷಿಸಿದಷ್ಟು ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ. ಇನ್ನು ಘರಾನಾ ಮೊಗುಡು ನಂತರ ರೀ ರಿಲೀಸ್ ಆದ ಪವನ್ ಕಲ್ಯಾಣ್ ಸಿನಿಮಾ ಮಾಡಿದ ಕಲೆಕ್ಷನ್ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಹೌದು, ಮೊದಲಿಗೆ ಮಹೇಶ್ ಬಾಬು ಹುಟ್ಟುಹಬ್ಬದ ಅಂಗವಾಗಿ ರೀ ರಿಲೀಸ್ ಆಗಿದ್ದ ಪೋಕಿರಿ ಚಿತ್ರ ಮಾಡಿದ ಕಲೆಕ್ಷನ್ ಧೂಳಿಪಟ ಆಗುವ ರೀತಿ ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಮರುಬಿಡುಗಡೆಯಾಗಿ ಕಲೆಕ್ಷನ್ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಅವರ ಜಲ್ಸಾ ಚಿತ್ರದ ಈ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಅನ್ನು ಮುರಿದು ಹಾಕಲು ಪ್ರಭಾಸ್ ಸಿನಿಮಾವೊಂದು ತಯಾರಾಗುತ್ತಿದೆ.

ಪ್ರಭಾಸ್ ಹುಟ್ಟುಹಬ್ಬಕ್ಕೆ ವರ್ಷಂ ರೀ ರಿಲೀಸ್
ಮುಂಬರುವ ಅಕ್ಟೋಬರ್ 23ಕ್ಕೆ ಟಾಲಿವುಡ್ ಟಾಪ್ ನಟ ಪ್ರಭಾಸ್ 43ನೇ ವಸಂತಕ್ಕೆ ಕಾಲಿಡಲಿದ್ದು, ಈ ದಿನದಂದು ಪ್ರಭಾಸ್ ಅಭಿನಯದ ಎವರ್ ಗ್ರೀನ್ ಸೂಪರ್ ಹಿಟ್ ವರ್ಷಂ ಚಿತ್ರವನ್ನು ಮರುಬಿಡುಗಡೆ ಮಾಡಲು ತಯಾರಿ ನಡೆಸಿಕೊಳ್ಳಲಾಗುತ್ತಿದೆ. ಈಗಾಗಲೇ ಈ ಚಿತ್ರದ ಪ್ರಿಂಟ್ ಅನ್ನು 4K ರೆಸಲ್ಯೂಷನ್ ಆಗಿ ಬದಲಾಯಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರಭಾಸ್ ಹುಟ್ಟುಹಬ್ಬಕ್ಕೆ ವರ್ಷಂ 4K ತೆರೆಗೆ ಬರಲಿದೆ. 2003ರಲ್ಲಿ ಬಿಡುಗಡೆಯಾಗಿದ್ದ ಪ್ರಭಾಸ್ ಅಭಿನಯದ ಈ ಮೂರನೇ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದರು ಹಾಗೂ ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಪ್ರಭಾಸ್ ಅವರಿಗೆ ಸ್ಟಾರ್ ಇಮೇಜ್ ತಂದುಕೊಟ್ಟಿದ್ದ ಈ ಚಿತ್ರ ಮರು ಬಿಡುಗಡೆಯಾದರೆ ಪವನ್ ಕಲ್ಯಾಣ್ ಜಲ್ಸಾ ಚಿತ್ರ ಮರುಬಿಡುಗಡೆಯಾಗಿ ಸಂಪಾದಿಸಿದ್ದ ಕಲೆಕ್ಷನ್ ಅನ್ನು ಬ್ರೇಕ್ ಮಾಡುವುದು ಖಚಿತ ಎನ್ನಲಾಗುತ್ತಿದೆ.

ವರ್ಷಂ ಜತೆ ಬಿಲ್ಲಾ ಕೂಡ ರೀ ರಿಲೀಸ್
ಇನ್ನು ಈ ಬಾರಿ ಪ್ರಭಾಸ್ ಹುಟ್ಟುಹಬ್ಬಕ್ಕೆ ವರ್ಷಂ ಮಾತ್ರವಲ್ಲದೆ ಪ್ರಭಾಸ್ ಅಭಿನಯದ ಮತ್ತೊಂದು ಸೂಪರ್ ಹಿಟ್ ಚಲನಚಿತ್ರ ಬಿಲ್ಲಾ ಕೂಡ ರೀ ರಿಲೀಸ್ ಆಗಲು ತಯಾರಾಗಿದೆ. 2009ರಲ್ಲಿ ತೆರೆಕಂಡಿದ್ದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಈ ಚಿತ್ರ ಕೂಡ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದು, ಒಂದೊಳ್ಳೆ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

ಎರಡೂ ಚಿತ್ರ ಬಿಡುಗಡೆಯಾದರೆ ಪವನ್ ಕಲ್ಯಾಣ್ ರೆಕಾರ್ಡ್ ಮುರಿಯುವುದು ಕಷ್ಟ!
ಇನ್ನು ಪ್ರಭಾಸ್ ಹುಟ್ಟುಹಬ್ಬದ ಅಂಗವಾಗಿ ಈ ಎರಡೂ ಚಿತ್ರಗಳು ಒಮ್ಮೆಲೆ ಮರು ಬಿಡುಗಡೆಯಾದರೆ ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಚಿತ್ರದ ಮರು ಬಿಡುಗಡೆಯ ಕಲೆಕ್ಷನ್ ದಾಖಲೆಯನ್ನು ಮುರಿಯುವುದು ಕಷ್ಟ ಎನ್ನಬಹುದು. ಹೀಗಾಗಿ ಎರಡರಲ್ಲಿ ಯಾವುದಾದರೊಂದು ಚಿತ್ರ ಬಿಡುಗಡೆಯಾದರೆ ಪ್ರಭಾಸ್ ಪವನ್ ಕಲ್ಯಾಣ್ ದಾಖಲೆಯನ್ನು ಮುರಿದು ನೂತನ ದಾಖಲೆ ಬರೆಯಲಿದ್ದಾರೆ ಎನ್ನುತ್ತಿದ್ದಾರೆ ತೆಲುಗು ಸಿನಿ ಪ್ರೇಕ್ಷಕರು.

ಜಲ್ಸಾ ಕಲೆಕ್ಷನ್ ಎಷ್ಟು?
ಮಹೇಶ್ ಬಾಬು ಹುಟ್ಟುಹಬ್ಬದ ಅಂಗವಾಗಿ ಮರು ಬಿಡುಗಡೆಯಾಗಿದ್ದ ಪೋಕಿರಿ 1.76 ಕೋಟಿ ಕಲೆಕ್ಷನ್ ಮಾಡಿತ್ತು ಹಾಗೂ ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಮರುಬಿಡುಗಡೆಯಾಗಿ 3.20 ಕೋಟಿ ಕಲೆಕ್ಷನ್ ಮಾಡಿತ್ತು.


Click it and Unblock the Notifications











