ಪವನ್ ಕಲ್ಯಾಣ್ ಬಿಗ್‌ಬಜೆಟ್ ಸಿನಿಮಾ ನವೆಂಬರ್ ನಲ್ಲಿ ಪ್ರಾರಂಭ: ಹೆಸರೇನು ಗೊತ್ತೆ?
ನಟ ಪವನ್ ಕಲ್ಯಾಣ್ ರಾಜಕೀಯದಲ್ಲೊಂದು ಕಾಲು ಸಿನಿಮಾ ರಂಗದಲ್ಲೊಂದು ಕಾಲಿಟ್ಟು ಸಾಗುತ್ತಿದ್ದಾರೆ. ಕಳೆದ ಕೆಲ ವರ್ಷಳಲ್ಲಿ ಹೆಚ್ಚಿಗೆ ರಾಜಕೀಯ ರಂಗದಲ್ಲಿ ತೊಡಗಿಕೊಂಡಿದ್ದ ಪವನ್ ಕಲ್ಯಾಣ್, ಈಗ ಸಿನಿಮಾ ರಂಗದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ.
ಹೌದು, ಸಿನಿಮಾಗಳ ನಡುವೆ ವರ್ಷಗಟ್ಟಲೆ ಅಂತರ ಇಟ್ಟುಕೊಳ್ಳುತ್ತಿದ್ದ ಪವನ್ ಕಲ್ಯಾಣ್, ತಮ್ಮ ಬಹುಪಾಲು ಸಮಯವನ್ನು ರಾಜಕೀಯಕ್ಕೆ ಮೀಸಲಾಗಿರಿಸಿದ್ದರು, ಆದರೆ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಿಗೆ ತೊಡಗಿಕೊಳ್ಳುತ್ತಿದ್ದು, ಸರತಿಯಲ್ಲಿ ಪವನ್ ಕಲ್ಯಾಣ್ ಸಿನಿಮಾಗಳು ಸೆಟ್ಟೇರಲಿವೆ.
ಭಾರಿ ಬಿಗ್ ಬಜೆಟ್ ಸಿನಿಮಾವೊಂದನ್ನು ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದು, ಪ್ರಸ್ತುತ ಚಿತ್ರೀಕರಣದ ಅಂತ್ಯದಲ್ಲಿರುವ ವಕೀಲ್ ಸಾಬ್ ಮುಗಿದ ನಂತರ ಆ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಪವನ್ ಕಲ್ಯಾಣ್.

ಭಾರಿ ಬಜೆಟ್ ಸಿನಿಮಾದಲ್ಲಿ ಪವನ್ ನಟನೆ
ಹೌದು, ಕ್ರಿಶ್ ನಿರ್ದೇಶನದ ಐತಿಹಾಸಿಕ, ಪೌರಾಣಿಕ ಸಿನಿಮಾ 'ವಿರೂಪಾಕ್ಷ' ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದು, ಇದು ಭಾರಿ ಬಜೆಟ್ ಸಿನಿಮಾ ಆಗಿರಲಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಗೌತಮಿ ಪುತ್ರ ಶಾತಕರ್ಣಿ ನಿರ್ದೇಶಿಸಿದ್ದ ಕ್ರಿಶ್
ಕ್ರಿಶ್ ಈ ಹಿಂದೆ ಬಾಲಕೃಷ್ಣ ನಟಿಸಿದ್ದ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾ ನಿರ್ದೇಶಿಸಿದ್ದರು. ಐತಿಹಾಸಿಕ ಸಿನಿಮಾವನ್ನು ಪಕ್ಕಾ ಪ್ಲ್ಯಾನ್ ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಿದ್ದರು ಕ್ರಿಶ್, ಹಾಗಾಗಿ ವಿರೂಪಾಕ್ಷ ಸಿನಿಮಾ ಸಹ ಅಷ್ಟೇ ವೇಗವಾಗಿ ಮುಗಿಸುವ ನಿರೀಕ್ಷೆ ಇದೆ.

ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭ
ಪವನ್ ಕಲ್ಯಾಣ್-ಕ್ರಿಶ್ ಜೋಡಿಯ ಸಿನಿಮಾ ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಲು ಕ್ರಿಶ್ ಮತ್ತು ನಿರ್ಮಾಪಕರು ಯೋಜನೆ ರೂಪಿಸುತ್ತಿದ್ದಾರೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸುವಂತೆ ಪವನ್ ಸಹ ಒತ್ತಾಯಿಸಿದ್ದಾರಂತೆ.
Recommended Video

ಹಿಂದಿಯ ಪಿಂಕ್ ಸಿನಿಮಾ ರೀಮೇಕ್
ಪವನ್ ಕಲ್ಯಾಣ್ ಪ್ರಸ್ತುತ ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಪಿಂಕ್ ಸಿನಿಮಾದ ರೀಮೇಕ್ ವಕೀಲ್ ಸಾಬ್ ಆಗಿದ್ದು, ಹಲವು ಬದಲಾವಣೆಗಳೊಂದಿಗೆ ಈ ರೀಮೇಕ್ ಮಾಡಲಾಗುತ್ತಿದೆ. ಸಿನಿಮಾದ ಬಹುಪಾಲು ಚಿತ್ರೀಕರಣ ಈಗಾಗಲೇ ಮುಗಿದಿದೆ.


Click it and Unblock the Notifications











