ವೇದಿಕೆಯಲ್ಲಿ ಕತ್ತಿ ಝಳಪಿಸಿ ಪವನ್ ಸ್ಟಂಟ್; ಕೂದಲೆಳೆಯಲ್ಲಿ ಪಾರಾದ ಬಾಡಿಗಾರ್ಡ್
ಆಂಧ್ರ ಡಿಸಿಎಂ, ತೆಲುಗು ನಟ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸುಜಿತ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಗ್ಯಾಂಗ್‌ಸ್ಟರ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಬಂದ ಟ್ರೈಲರ್ ಹಿಟ್ ಆಗಿ ಗಮನ ಸೆಳೆದಿದೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಕರ್ನಾಟಕದಲ್ಲಿ ಕೂಡ ಅಭಿಮಾನಿಗಳು ಸಿನಿಮಾ ನೋಡಲು ಕಾಯ್ತಿದ್ದಾರೆ.
ಭಾನುವಾರ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಭಾರೀ ಮಳೆಯಿಂದ ಕಾರ್ಯಕ್ರಮ ಅಸ್ತವ್ಯಸ್ಥವಾಗಿತ್ತು. ಮಳೆ ನಡುವೆಯೂ ನಟ ಪವನ್ ಕಲ್ಯಾಣ್ ವೇದಿಕೆ ಏರಿ ಅಭಿಮಾನಿಗಳನ್ನು ರಂಜಿಸಿದ್ದರು. ಅಭಿಮಾನಿಗಳು ಕೂಡ ಮಳೆಯನ್ನು ಲೆಕ್ಕಿಸದೇ ತೊಯ್ದು ತೊಪ್ಪೆಯಾದರೂ ಕಾರ್ಯಕ್ರಮವನ್ನು ಕೊನೆಯವರೆಗೂ ನೋಡಿದರು. ವೇದಿಕೆಯಲ್ಲಿ ಪವನ್ ಕಲ್ಯಾಣ್‌ಗೆ ಸಿಬ್ಬಂದಿ ಕೊಡೆ ಹಿಡಿದು ರಕ್ಷಣೆಗೆ ನಿಂತಿದ್ದರು. ಆದರೂ ಕೊಂಚ ಮಳೆಯಲ್ಲಿ ನೆನೆದು ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ.

'OG' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಪವನ್ ಕಲ್ಯಾಣ್ ಕತ್ತಿ ಹಿಡಿದು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಚಿತ್ರದಲ್ಲಿ ಕತ್ತಿ ಝಳಪಿಸಿದಂತೆ ವೇದಿಕೆಯಲ್ಲಿ ಕತ್ತಿ ತಿರುವಿ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನ ಮಾಡಿದರು. ಅದು ಸಖತ್ ವೈರಲ್ ಆಗುತ್ತಿದೆ. ಸದ್ಯ ಇದೇ ವಿಚಾರ ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಆಗುತ್ತಿದೆ.
ಪವನ್ ಕಲ್ಯಾಣ್ ಈಗ ವೇದಿಕೆ ಮೇಲೆ ದೊಡ್ಡ ಕತ್ತಿ ಹಿಡಿದು ಝಳಪಿಸುವಾಗ ಬಾಡಿಗಾರ್ಡ್ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಪವನ್ ಕತ್ತಿ ತಿರುವಿದಾಗ ಪಕ್ಕದಲ್ಲೇ ಇದ್ದ ಬಾಡಿಗಾರ್ಡ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೊಂಚ ಎಡವಟ್ಟು ಆಗಿದ್ದರೂ ಆತನ ಮುಖಕ್ಕೆ ಕತ್ತಿ ತಾಗುತ್ತಿತ್ತು. ಪಕ್ಕದಲ್ಲೇ ಇದ್ದ ಮತ್ತೊಬ್ಬರು ಆತನನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಪಾಯದಿಂದ ಪಾರಾದರು. ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಪವನ್ ಕಲ್ಯಾಣ್ ಥೇಟ್ ಸಿನಿಮಾ ಶೈಲಿಯಲ್ಲಿ ವೇದಿಕೆಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದು ಈ ಅಚಾತುರ್ಯಕ್ಕೆ ಕಾರಣವಾಗಿತ್ತು.
ತೆಲುಗಿನಲ್ಲಿ ಕಟಾಣ ಎಂದು ಕರೆಯುವ ಉದ್ದನೆಯ ಕತ್ತಿ ಹಿಡಿದು ಕೂಲಿಂಗ್ ಗ್ಲಾಸ್ ಧರಿಸಿ ಪವನ್ ಕಲ್ಯಾಣ್ ವೇದಿಕೆ ಏರಿದ್ದರು. ಮೊದಲಿಗೆ ಎಲ್ಲರನ್ನು ಪಕ್ಕ ಸರಿಸಿ ಪವನ್ ಕತ್ತಿ ಝಳಪಿಸಲು ಮುಂದಾಗಿದ್ದರು. ಆದರೂ ಬಾಡಿಗಾರ್ಡ್ ಅವರ ಹಿಂದೆ ಹೋಗಿದ್ದರಿಂದ ಈ ಅಪಾಯ ಎದುರಾಗಿತ್ತು. ಇನ್ನು ಅದು ನಿಜವಾದ ಖಡ್ಗವೇ ಅಥವಾ ಸಿನಿಮಾ ಚಿತ್ರೀಕರಣಕ್ಕೆ ಬಳಸುವ ಡಮ್ಮಿ ಖಡ್ಗ ಎನ್ನುವುದು ಗೊತ್ತಿಲ್ಲ. ಇನ್ನು ಪ್ರೀ ರಿಲೀಸ್ ಈವೆಂಟ್‌ನಲ್ಲಿ ಟ್ರೈಲರ್ ಬಿಡುಗಡೆ ಸಾಧ್ಯವಿಲ್ಲ ಎಂದಾಗ ಪವನ್ ಗರಂ ಆಗಿದ್ದರು.
ಡಿಐ ಮುಗಿಯದ ಕಾರಣ ಸದ್ಯಕ್ಕೆ ಟ್ರೈಲರ್ ಬಿಡುಗಡೆ ಸಾಧ್ಯವಿಲ್ಲ ಎಂದು ನಿರ್ದೇಶಕ ಸುಜಿತ್ ಹೇಳಿದ್ದರು. ಡಿಐ ಎಲ್ಲಾ ನಮ್ಮ ಫ್ಯಾನ್ಸ್ ನೋಡ್ಕೊತ್ತಾರೆ. ಪರವಾಗಿಲ್ಲ ಈಗ ಇಲ್ಲೇ ಪ್ರದರ್ಶನ ಮಾಡಿ ಎಂದು ಪಟ್ಟು ಹಿಡಿದರು. ಕೊಂಚ ಸಮಯ ತೆಗೆದುಕೊಂಡ ತಂಡ ಬಳಿಕ ವೇದಿಕೆಯಲ್ಲಿ ಟ್ರೈಲರ್ ಪ್ರದರ್ಶಿಸಿದ್ದರು. ವೇದಿಕೆಯಲ್ಲಿ ಇದ್ದವರು ಮಾತ್ರ ಅದನ್ನು ವೀಕ್ಷಿಸಲು ಸಾಧ್ಯವಾಗಿತ್ತು.
ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರಬೇಕು ಅಂದಾಗಲೇ ಸಾಕಷ್ಟು ತಯಾರಿ ನಡೆಸಿದ್ದರು. ಮಾರ್ಷಲ್ ಆರ್ಟ್ಸ್, ಕತ್ತಿ ವರಸೆ ಎಲ್ಲವನ್ನು ಆರಂಭದಲ್ಲೇ ಕಲಿತ್ತಿದ್ದರು. 'ಖುಷಿ' ಚಿತ್ರದಲ್ಲಿ ಕೂಡ ಪವನ್ ಕತ್ತಿ ಹಿಡಿದು ಕಮಾಲ್ ಮಾಡಿದ್ದರು. "ನಾನು ಯಾವತ್ತು ಯಾವುದೇ ಕಾರ್ಯಕ್ರಮಗಳಿಗೆ ಈ ರೀತಿ ಬರ್ತಿಲಿಲ್ಲ. ನಿರ್ದೇಶಕ ಸುಜಿತ್ ಮಾಡಿದ ಒತ್ತಾಯಕ್ಕೆ ಮಣಿದು 'OG' ಸಿನಿಮಾ ಗೆಟಪ್ ಕಾಸ್ಟ್ಯೂಮ್‌ನಲ್ಲೇ ಬರುವಂತಾಯಿತು. ಇದೆಲ್ಲಾ ನಿಮಗಾಗಿ" ಎಂದು ಪವನ್ ಹೇಳಿದ್ದರು.
ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'OG' ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಇಮ್ರಾನ್ ಹಶ್ಮಿ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಕನ್ನಡ ನಟ ಭಜರಂಗಿ ಲೋಕಿ ಕೂಡ ಚಿತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications











