ಯಶ್ ನಿರ್ಧಾರ ಬದಲಾದರೇನಂತೆ ; ಮುಂದಿಟ್ಟಿದ್ದ ಹೆಜ್ಜೆ ಹಿಂದಿಟ್ಟ ಪವನ್ ಕಲ್ಯಾಣ್- 'ಧುರಂಧರ್'ಗೆ ಉಸ್ತಾದ್ ಭಗತ್ ಸಿಂಗ್ ಸವಾಲು
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಕೂಡ ಪ್ರೇಕ್ಷಕರಿಗೆ ಕಾಡುತ್ತೆ.
ಈ ಹಿನ್ನೆಲೆ ''ಧುರಂಧರ್ 2'' ಮತ್ತು ''ಟಾಕ್ಸಿಕ್'' ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿವೆ ಎನ್ನುವ ಸುದ್ದಿ ಬಂದಾಗ ಹಲವರು ಚಿಂತಾಕ್ರಾಂತರಾಗಿದ್ದರು. ಇಬ್ಬರಲ್ಲಿ ಯಾರಾದರೂ ಒಬ್ಬರು ಮನ ಬದಲಿಸಿ, ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿ ಎಂದು ಮನವಿಯನ್ನು ಮಾಡಿಕೊಂಡಿದ್ದರು.

ಹಲವರ ಪ್ರಾರ್ಥನೆಯ ಫಲವಾ..? ಒಟ್ನಲ್ಲಿ ಸದ್ಯ ಕಣದಿಂದ ಯಶ್ ಹಿಂದೆ ಸರಿದಿದ್ದಾರೆ. ತಮ್ಮ ''ಟಾಕ್ಸಿಕ್'' ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ. ಆದರೇನಂತೆ ಪವನ್ ಕಲ್ಯಾಣ್ ಮುಂದೆ ಇಟ್ಟಿದ್ದ ಹೆಜ್ಜೆಯನ್ನು ಹಿಂದೆ ಇಟ್ಟಿದ್ದಾರೆ. ಯಶ್ ಇಲ್ಲದಿದ್ದರೇನು ''ಧುರಂಧರ್''ನ ನಾನು ಕಡಿವಾಣ ಹಾಕುತ್ತೇನೆ ಎಂದು ತಮ್ಮ ಉಸ್ತಾದ್ ಭಗತ್ ಸಿಂಗ್‌ನ ಮಾರ್ಚ್ 19ರಂದು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ದಕ್ಷಿಣದಲ್ಲಿ ಧುರಂಧರ್ ಗೆ ಸವಾಲನ್ನು ಹಾಕಿದ್ದಾರೆ ಪವನ್ ಕಲ್ಯಾಣ್.
ಹೌದು, ''ಉಸ್ತಾದ್ ಭಗತ್ ಸಿಂಗ್''.. ಹೆಚ್ಚು ಕಡಿಮೆ ಮೂರು, ಮೂರುವರೆ ವರ್ಷದ ಹಿಂದಿನ ಚಿತ್ರ. ಪವನ್ ಕಲ್ಯಾಣ್ ರಾಜಕೀಯ ಪ್ರವೇಶದಿಂದ ತೆವಳುತ್ತಾ ಸಾಗಿದ ಈ ಚಿತ್ರ ಹಾಗೇ ನೋಡಿದರೆ ಮಾರ್ಚ್ 26ರಂದು ಬಿಡುಗಡೆಯಾಗಬೇಕಿತ್ತು.
ಆದರೆ ಈಗ ''ಟಾಕ್ಸಿಕ್'' ಮಾರ್ಚ್ 19ರ ಜಾಗದಿಂದ ಖಾಲಿ ಮಾಡಿದೆ. ಈ ಹಿನ್ನೆಲೆ ''ಉಸ್ತಾದ್ ಭಗತ್ ಸಿಂಗ್'' ಯೋಚನೆ ಮತ್ತು ಯೋಜನೆ ಬದಲಾಗಿದೆ. ''ಈದ್'' ಮತ್ತು ''ಯುಗಾದಿ'' ರಜೆಯ ಮಜಾವನ್ನು ''ಧುರಂಧರ್''ಗೆ ಮಾತ್ರ ಅನುಭವಿಸಿದರೆ ಹೇಗೆ..? ಎಂಬ ಆಲೋಚನೆ ಚಿತ್ರತಂಡದ್ದಾಗಿದ್ದರು ಆಗಿರಬಹುದು. ಹೀಗಾಗಿಯೇ ಏನೋ ಸದ್ಯ ಮುಂದೆ ಇಟ್ಟಿದ್ದ ಹೆಜ್ಜೆಯನ್ನು ''ಉಸ್ತಾದ್ ಭಗತ್ ಸಿಂಗ್'' ಹಿಂದಿಟ್ಟಿದ್ದಾನೆ. ಮಾರ್ಚ್ 19ರಂದು ''ಧುರಂಧರ್ 2''ಗೆ ಬಾಕ್ಸಾಫೀಸ್‌ನಲ್ಲಿ ಸವಾಲು ಹಾಕಲು ಅಣಿಯಾಗಿದ್ದಾನೆ.
ಇನ್ನು ತೆಲುಗು ರಾಜ್ಯದಲ್ಲಿ ಪವನ್ ಕಲ್ಯಾಣ್ ಅವರ ವರ್ಚಸ್ಸು ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ. ಕೇವಲ ಆಂಧ್ರ ಮತ್ತು ತೆಲಂಗಾಣ ಮಾತ್ರವಲ್ಲ. ಕರ್ನಾಟಕವೂ ಸೇರಿ ಭಾರತದೆಲ್ಲೆಡೆ ಪವನ್ ಕಲ್ಯಾಣ್‌ಗೆ ಅಭಿಮಾನಿಗಳಿದ್ದಾರೆ. ಈ ಹಿನ್ನೆಲೆ ''ಉಸ್ತಾದ್ ಭಗತ್ ಸಿಂಗ್'' ಬಂಪರ್ ಓಪನಿಂಗ್ ಪಡೆಯುವುದು ಖಚಿತ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಮಾರ್ಚ್ 18ರಂದೇ ವಿಶ್ವದ ಹಲವಡೆ ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.

ಹಾಗಂಥ, ''ಧುರಂಧರ್''ನ ಕಡೆಗಣಿಸುವಂತೆ ಇಲ್ಲ. ಯಾಕೆಂದರೆ ''ಧುರಂಧರ್''ಪರ ಜನರ ಒಲವು ಹೆಚ್ಚಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ. ಸಪ್ತಸಾಗರದಾಚೆ ಕೂಡ ''ಧುರಂಧರ್'' ಹವಾ ಇದೆ. ಇನ್ನುಳಿದಂತೆ ಹರೀಶ್ ಶಂಕರ್ ನಿರ್ದೇಶನದ ''ಉಸ್ತಾದ್ ಭಗತ್ ಸಿಂಗ್'' ಚಿತ್ರದಲ್ಲಿ ಶ್ರೀಲೀಲಾ ಮತ್ತು ರಾಶಿ ಖನ್ನಾ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.
ಒಟ್ನಲ್ಲಿ ಸದ್ಯ ಮಾರ್ಚ್ 19ರಂದು ''ಧುರಂಧರ್ 2'' ಮತ್ತು ''ಉಸ್ತಾದ್ ಭಗತ್ ಸಿಂಗ್'' ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಅವತ್ತೇ ಕನ್ನಡದಲ್ಲಿ ''ಲವ್ ಮಾಕ್ಟೇಲ್ 3'' ಕೂಡ ಬಿಡುಗಡೆಯಾಗಲಿದೆ. ''ಧುರಂಧರ್ 2'' ಮತ್ತು ''ಉಸ್ತಾದ್ ಭಗತ್ ಸಿಂಗ್'' ನಡುವಿನ ಈ ಸಿನಿ ಸಮರ ರೋಚಕವಾಗಿರುವುದರಲ್ಲಿ ಅನುಮಾನ ಇಲ್ಲ. ಈ ಇಬ್ಬರಲ್ಲಿ ಯಾರು ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ''ಧುರಂಧರ್ 2''ವೇಗಕ್ಕೆ ''ಉಸ್ತಾದ್ ಭಗತ್ ಸಿಂಗ್'' ಕಡಿವಾಣ ಹಾಕುವಲ್ಲಿ ಯಶಸ್ವಿಯಾಗ್ತಾನಾ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











