ಸೆನ್ಸಾರ್ ಮುಗಿಸಿದ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್'; ರನ್ ಟೈಮ್ ರಿವೀಲ್
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ತಿಂಗಳ ಕೊನೆಗೆ ಬರಬೇಕಿದ್ದ ಸಿನಿಮಾ ರಿಲೀಸ್ ಡೇಟ್ ಇತ್ತೀಚೆಗೆ ಬದಲಾಯಿಸಲಾಗಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ ತಡವಾಗುತ್ತಿದ್ದಂತೆ ಅದರ ಲಾಭ ಪಡೆಯಲು 'ಉಸ್ತಾದ್ ಭಗತ್ ಸಿಂಗ್' ರೆಡಿಯಾಗಿದ್ದಾನೆ. ಈಗ ಸೆನ್ಸಾರ್ ಮುಗಿಸಿ ತೆರೆಗೆ ಬರಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹರೀಶ್ ಶಂಕರ್ ನಿರ್ದೇಶನದ ಪೊಲೀಸ್ ಡ್ರಾಮಾ ಸಿನಿಮಾ ಇದು. ಪವನ್ ಮತ್ತೆ ಖಾಕಿ ಖದರ್ ತೋರಿಸ್ತಿದ್ದು ಶ್ರೀಲೀಲಾ ನಾಯಕಿಯಾಗಿ ನಟಿಸಿರುವುದು ವಿಶೇಷ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ರಾಜಕೀಯರಂಗದಲ್ಲಿ ಸಕ್ರಿಯವಾದ ಬಳಿಕ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರಾಗಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈಗ ಬಿಡುಗಡೆ ಆಗ್ತಿದೆ.

ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೂ ಮುನ್ನ ಪವನ್ ನಟಿಸಿದ್ದ 3 ಸಿನಿಮಾಗಳು ಅರ್ಧಕ್ಕೆ ನಿಂತಿತ್ತು. ಚುನಾವಣೆಯಲ್ಲಿ ಗೆದ್ದು ಡಿಸಿಎಂ ಪಟ್ಟ ಅಲಂಕರಿಸಿದ ಬಳಿಕ ಒಂದೊಂದೇ ಸಿನಿಮಾ ಕಂಪ್ಲೀಟ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. 'ಹರಿಹರ ವೀರಮಲ್ಲು' ಹಾಗೂ 'ಓಜಿ' ಚಿತ್ರಗಳು ಭಾರೀ ನಿರೀಕ್ಷೆಯಿಂದ ಬಂದು ಸೋತಿದ್ದವು. ಇದೀಗ ಉಳಿದಿರುವುದು 'ಉಸ್ತಾದ್ ಭಗತ್ ಸಿಂಗ್' ಮಾತ್ರ.
ಪವನ್ ಕಲ್ಯಾಣ್ ನಟನೆಯ 'ಗಬ್ಬರ್ ಸಿಂಗ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಾಲಿವುಡ್ 'ದಬಾಂಗ್' ಸಿನಿಮಾ ರೀಮೆಕ್ ಆಗಿದ್ದರೂ ಸಾಕಷ್ಟು ಬದಲಾವಣೆ ಮಾಡಿಕೊಂಡು ಹರೀಶ್ ಶಂಕರ್ ಚಿತ್ರ ನಿರ್ದೇಶನ ಮಾಡಿದ್ದರು. ಆ ಬಳಿಕ ಮತ್ತೊಮ್ಮೆ ಪವನ್ ಕಲ್ಯಾಣ್ ಜೊತೆ ಹರೀಶ್ ಕೈಜೋಡಿಸಿದ್ದಾರೆ. ಹಾಗಾಗಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕುತೂಹಲ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ರನ್‌ಟೈನ್ 2 ಗಂಟೆ 34 ನಿಮಿಷ ಎನ್ನುವುದು ಗೊತ್ತಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಪವನ್ ಕಲ್ಯಾಣ್ ಹಾಗೂ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ, ಪಾರ್ತಿಬನ್, ಅಶುತೋಷ್ ರಾಣಾ, ನವಾಬ್ ಶಾ, ರಾಜೀವ್ ಕನಕಾಲ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ತಮಿಳಿನ 'ತೇರಿ' ಚಿತ್ರದ ರೀಮೆಕ್ 'ಉಸ್ತಾದ್ ಭಗತ್ ಸಿಂಗ್' ಎಂದು ಹೇಳಲಾಗಿತ್ತು. ಆದರೆ ಸ್ವತಃ ನಿರ್ದೇಶಕ ಹರೀಶ್ ಶಂಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಯಾವುದೇ ಸಿನಿಮಾ ರೀಮೆಕ್ ಅಲ್ಲ ಎಂದಿದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಎಸ್. ತಮನ್ ಹಿನ್ನೆಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ.
5 ವರ್ಷಗಳ ಹಿಂದೆ ಅಂದರೆ 2021ರಲ್ಲಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಘೋಷಣೆ ಆಗಿತ್ತು. ಆಗ 'ಭವದೀಯುಡು ಭಗತ್ ಸಿಂಗ್' ಎಂದು ಟೈಟಲ್ ಫಿಕ್ಸ್ ಆಗಿತ್ತು. ಬಳಿಕ ಬದಲಿಸಲಾಯಿತು. 2023ರ ಏಪ್ರಿಲ್‌ನಲ್ಲಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮಾಡಲಾಗಿತ್ತು. ಕಳೆದ ವರ್ಷ ಮತ್ತೆ ಸಿನಿಮಾ ಚಿತ್ರೀಕರಣ ಪುನರಾರಂಭ ಮಾಡಿ ಮುಗಿಸಲಾಗಿತ್ತು. ಅಮೇಜಾನ್ ಪ್ರೈಂ ವೀಡಿಯೋಗೆ ಓಟಿಟಿ ರೈಟ್ಸ್ ಮಾರಾಟವಾಗಿದೆ.
ರಾಜಕೀಯರಂಗದಲ್ಲಿ ಪವನ್ ಕಲ್ಯಾಣ್ ಬಹಳ ಬ್ಯುಸಿಯಾಗಿದ್ದಾರೆ. ಮುಂದೆ ಪವರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸ್ತಾರೋ ಇಲ್ಲವೋ ಎನ್ನುವ ಅನುಮಾನ ಮೂಡಿದೆ. ಹಾಗಾಗಿ ಕೊನೆಯ ಚಿತ್ರವನ್ನು ದೊಡ್ಡದಾಗಿ ಸಂಭ್ರಮಾಚರಣೆ ಮಾಡಿ ಬರಮಾಡಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











