ಮತ್ತೊಂದು ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್; ಟೈಟಲ್ ಏನು?
ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಫುಲ್ ಬ್ಯುಸಿಯಾಗಿದ್ದಾರೆ. ಮುಂದೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇದೇ ವಿಚಾರವನ್ನು ಪವನ್ ಕೂಡ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಅದನ್ನು ಒಪ್ಪಲು ಸಿದ್ಧರಿಲ್ಲ. ನೆಚ್ಚಿನ ನಟನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ತೆರೆಮರೆಯಲ್ಲಿ ಮತ್ತೊಂದು ಚಿತ್ರಕ್ಕೆ ತಯಾರಿ ನಡೀತಿದೆ.
ಪವನ್ ನಟಿಸಿದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಹೀನಾಯವಾಗಿ ಸೋತಿತ್ತು. ಪವರ್ ಸ್ಟಾರ್ ಜೊತೆ ಮತ್ತೊಂದು ಸಿನಿಮಾ ಮಾಡಿ ಗೆಲ್ಲುವುದಾಗಿ ನಿರ್ದೇಶಕ ಹರೀಶ್ ಶಂಕರ್ ಹೇಳಿದ್ದಾರೆ. ನಾಲ್ಕೈದು ವರ್ಷಗಳಿಂದ ಪವನ್ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಚುನಾವಣೆಗೂ ಮುನ್ನ 'ಹರಿಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳನ್ನು ಆರಂಭಿಸಿದ್ದರು. ಜನಸೇನಾ ಪಕ್ಷ ಸಂಘಟನೆ, ಚುನವಣೆ ಪ್ರಚಾರದ ನೆಪವೊಡ್ಡಿ ಸಿನಿಮಾಗಳ ಚಿತ್ರೀಕರಣದಿಂದ ಬಿಡುವು ಪಡೆದಿದ್ದರು.

ಚುನಾವಣೆಯಲ್ಲಿ ಗೆದ್ದು ಆಂಧ್ರ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪವನ್ ಸೈಲೆಂಟ್ ಆಗಿದ್ದರು. ಒಂದು ವರ್ಷ ಸುಮ್ಮನಿದ್ದು ಬಳಿಕ ನಿಂತು ಹೋಗಿದ್ದ ಸಿನಿಮಾಗಳನ್ನು ಕಂಪ್ಲೀಟ್ ಮಾಡಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. 3 ಸಿನಿಮಾಗಳಿಗೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಆದರೆ ಬಳಿಕ ಗೆಲ್ಲಲಿಲ್ಲ. ಇದ್ದಿದ್ದರಲ್ಲಿ 'OG' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗ್ಯಾಂಗ್‌ಸ್ಟರ್ ಆಗಿ ಪವನ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
ಸದ್ಯ 'OG' ಚಿತ್ರದ ಸೀಕ್ವೆಲ್ 'ಓಜಸ್ ಗಂಭೀರ- ರಾಂಪೇಜ್ ಬಿಗಿನ್ಸ್' ಎಂಬ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ಆರಂಭವಾಗಿದೆ ಎನ್ನಲಾಗ್ತಿದೆ. ಇದು 'OG' ಸೀಕ್ವೆಲ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಮುಂದುವರೆದ ಕಥೆ ಅಲ್ಲ, ಹಿಂದಿನ ಕಥೆ. ಹಾಗಾಗಿ ಇದು ಪ್ರೀಕ್ವೆಲ್ ಎನ್ನುವ ವಾದವೂ ಇದೆ. ತಮ್ಮ ಬ್ಯುಸಿ ರಾಜಕೀಯ ಶೆಡ್ಯೂಲ್ ನಡುವೆ ಚಿತ್ರದಲ್ಲಿ ನಟಿಸೋಕೆ ಪವನ್ ಕಲ್ಯಾಣ್ ಒಪ್ಪಿದ್ದಾರೆ ಎನ್ನಲಾಗ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತವೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

'ಓಜಸ್ ಗಂಭೀರ- ರಾಂಪೇಜ್ ಬಿಗಿನ್ಸ್' ಚಿತ್ರದಲ್ಲಿ ಸ್ವತಂತ್ರಪೂರ್ವ ಕಾಲದ ಕಥೆ ಕೂಡ ಇರುತ್ತದೆ ಎನ್ನಲಾಗ್ತಿದೆ. ನೇತಾಜಿ ಸುಭಾಷ್ ಚಂದ್ರಬೋಸ್ ಕಥೆಯನ್ನು ಹೇಳುವ ಸಾಧ್ಯತೆಯಿದೆ ಎನ್ನುವ ಊಹಾಪೋಹ ಶುರುವಾಗಿದೆ. ಐತಿಹಾಸಿಕ ಘಟನೆಗಳ ಹಿನ್ನೆಲೆಯಲ್ಲಿ ಕಾಲ್ಪನಿಕ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಅಮಿತಾಬ್ ಬಚ್ಚನ್ ಹಾಗೂ ರಾಮ್‌ಚರಣ್ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಅದೇ ನಿಜವಾದರೆ ಜನಸೇನಾನಿಗಳಿಗೆ ಹಬ್ಬವೇ ಸರಿ.
ಪವನ್ ಕಲ್ಯಾಣ್ ಸಿನಿಮಾಗಳಿಗೆ ಇವತ್ತಿಗೂ ಕ್ರೇಜ್ ಇದೆ. ಅವರ ಸಿನಿಮಾಗಳಿಗೆ ಸಿಗುವ ಓಪನಿಂಗ್, ರೆಸ್ಪಾನ್ಸ್ ನೋಡಿದ್ರೆ ಗೊತ್ತಾಗುತ್ತದೆ. ಆದರೆ ಒಳ್ಳೆ ಕಥೆ ಸಿಕ್ಕಿ ಎಲ್ಲಾ ಕೂಡಿ ಬಂದರೆ ಸಿನಿಮಾ ಹಿಟ್ ಆಗುವುದು ಗ್ಯಾರಂಟಿ. ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಚಿತ್ರರಂಗ ಪ್ರವೇಶದ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. ತಮ್ಮ ಬಳಿಕ ಮಗನನ್ನು ಪವನ್ ಚಿತ್ರರಂಗಕ್ಕೆ ಪರಿಚಯಿಸಲು ಮನಸ್ಸು ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'OG' ಪ್ರೀಕ್ವೆಲ್‌ನಲ್ಲಿ ಅಕಿರಾ ನಟಿಸಬಹುದು ಎನ್ನುವ ಊಹಾಪೋಹ ದಟ್ಟವಾಗಿದೆ.
ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಏಪ್ರಿಲ್ 16ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.


Click it and Unblock the Notifications











