ಮತ್ತೊಂದು ಚಿತ್ರಕ್ಕೆ ಪವನ್ ಕಲ್ಯಾಣ್ ಸಹಿ; ಕನ್ನಡ ಮೂಲದ ನಟಿ ನಾಯಕಿ?
ಎರಡು ವರ್ಷಗಳ ನಂತರ ಪವನ್ ಕಲ್ಯಾಣ್ ಮತ್ತೆ ಬಣ್ಣ ಹಚ್ಚಿದ್ದು 'ವಕೀಲ್ ಸಾಬ್' ಚಿತ್ರ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ವಕೀಲ್ ಸಾಬ್ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಸಿನಿಮಾಕ್ಕೆ ಪವನ್ ಕಲ್ಯಾಣ್ ಸಹಿ ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ನಿರ್ದೇಶಕ ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದು, ಸಿನಿಮಾದ ಉಳಿದ ನಟರನ್ನು, ನಾಯಕಿಯನ್ನು ಆರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕರ್ನಾಟಕ ಮೂಲದ ಒಬ್ಬ ಅನುಭವಿ ನಾಯಕಿಯ ಹೆಸರು ಬಹುತೇಕ ಅಂತಿಮವಾಗಿದೆ.

ಪವನ್ ಕಲ್ಯಾಣ್ ಜೊತೆಗೆ ಅನುಷ್ಕಾ ಮೊದಲ ಸಿನಿಮಾ?
ಪವನ್ ಕಲ್ಯಾಣ್ ಎದುರು ನಟಿ ಅನುಷ್ಕಾ ಶೆಟ್ಟಿ ನಟಿಸುವ ಸಾಧ್ಯತೆ ಇದೆ. ತೆಲುಗು ಸಿನಿಮಾದಲ್ಲಿ ನಟನೆ ಆರಂಭಿಸಿ 15 ವರ್ಷವಾದರೂ ಅನುಷ್ಕಾ ಪವನ್ ಕಲ್ಯಾಣ್ ಜೊತೆ ನಟಿಸಿರಲಿಲ್ಲ, ಅನುಷ್ಕಾ ಶೆಟ್ಟಿ ಹೆಸರು ಅಂತಿಮವಾದಲ್ಲಿ ಮೊದಲ ಬಾರಿಗೆ ಅನುಷ್ಕಾ ಪವನ್ ಕಲ್ಯಾಣ್ ಒಟ್ಟಾಗಿ ನಟಿಸಲಿದ್ದಾರೆ.

ವಿರೂಪಾಕ್ಷ ಎಂದು ಹೆಸರಿಡಲಾಗಿದೆ
ಸಿನಿಮಾಕ್ಕೆ 'ವಿರೂಪಾಕ್ಷ' ಎಂಬ ಹೆಸರಿಡಲಾಗಿದೆ. ಆದರೆ ಚಿತ್ರತಂಡ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಅನುಷ್ಕಾ ಶೆಟ್ಟಿ ಜೊತೆಗೆ ಇನ್ನೂ ಕೆಲವು ಹೆಸರುಗಳು ನಾಯಕಿ ಪಾತ್ರಕ್ಕೆ ಪಟ್ಟಿಯಲ್ಲಿವೆ ಎನ್ನಲಾಗಿದೆ.

ಅತಿಥಿ ಪಾತ್ರಕ್ಕಷ್ಟೇ ಸೀಮಿತವಾ ಅನುಷ್ಕಾ ಶೆಟ್ಟಿ?
ಅನುಷ್ಕಾ ಶೆಟ್ಟಿ ಅವರನ್ನು ಅತಿಥಿ ಪಾತ್ರಕ್ಕೆ ಕೇಳಲಾಗಿದೆ ನಾಯಕಿ ಪಾತ್ರಕ್ಕಾಗಿ ಅಲ್ಲವೆಂಬ ಮಾತುಗಳು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ಚಿರಂಜೀವಿ ಅವರ ಇತ್ತೀಚಿನ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದರು. ಇದೇ ರೀತಿಯ ಪಾತ್ರವನ್ನು ವಿರೂಪಾಕ್ಷ ಸಿನಿಮಾದಲ್ಲಿಯೂ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿಶ್ಯಬ್ಧಂ ಬಿಡುಗಡೆಗೆ ಕಾಯುತ್ತಿರುವ ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಿಶ್ಯಬ್ಧಂ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.


Click it and Unblock the Notifications











