ಹಠಾತ್ತನೆ ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ: ಲೆಕ್ಕಾಚಾರವೇನು?
ಆಂಧ್ರ ಪ್ರದೇಶದಲ್ಲಿ ಚಿತ್ರರಂಗ ಹಾಗೂ ಸರ್ಕಾರದ ನಡುವೆ ಏರ್ಪಟ್ಟಿದ್ದ ಬಿಕ್ಕಟ್ಟಿಗೆ ಪವನ್ ಕಲ್ಯಾಣ್ ಅವರೇ ಕಾರಣ ಎನ್ನಲಾಗುತ್ತಿತ್ತು.
ಪವನ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆದಾಗ ಆಂಧ್ರ ಸಿಎಂ ಜಗನ್ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ನಡುವೆ ನಡೆದ ಸಂಘರ್ಷ, ಸಿನಿಮಾ ಬಿಡುಗಡೆಗೆ ಮುನ್ನ ಪವನ್ ಕಲ್ಯಾಣ್, ಆಂಧ್ರ ಸರ್ಕಾರದ ಮೇಲೆ ಮಾಡಿದ್ದ ಟೀಕೆ ಎಲ್ಲದರಿಂದಾಗಿ ಚಿತ್ರರಂಗದ ವಿರುದ್ಧ ಜಗನ್ ಕಠಿಣ ನಿಲುವು ತೆಗೆದುಕೊಂಡರು ಎನ್ನಲಾಗಿತ್ತು. ಅದು ಬಹುತೇಕವೂ ಸತ್ಯವೂ ಆಗಿತ್ತು.
ಚಿತ್ರರಂಗ v/s ಜಗನ್ ಸರ್ಕಾರದ ವಿಷಯದಲ್ಲಿ ಪವನ್ ತುಸು ಅತಿಯಾಗಿಯೇ ಪ್ರವರ್ತಸಿದ್ದರು. ಸಿಎಂ ಜಗನ್ ಅನ್ನು ಬಹಿರಂಗ ಸಭೆಯಲ್ಲಿ ಏಕವಚನದಲ್ಲಿ ಬೈದಿದ್ದರು. ಬಳಿಕ ಜಗನ್ ನಿರ್ಣಯ ಇನ್ನಷ್ಟು ಕಟುವಾಯಿತು.

ಜಗನ್ ಸರ್ಕಾರ ಚಿತ್ರಮಂದಿರಗಳ ಮೇಲೆ ಕಠಿಣ ನಿಯಮ, ನಿರ್ಬಂಧಗಳನ್ನು ಹೇರಿರುವ ಕಾರಣ ಪವನ್ ಕಲ್ಯಾಣ್‌ರ ಹೊಸ ಸಿನಿಮಾ 'ಭೀಮ್ಲ ನಾಯಕ್' ಆಂಧ್ರದಲ್ಲಿ ಬಿಡುಗಡೆಯೇ ಆಗುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ಹಠಾತ್ತನೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ.
'ಭೀಮ್ಲ ನಾಯಕ್' ಸಿನಿಮಾವು ಫೆಬ್ರವರಿ 25ರಂದು ತೆರೆಗೆ ಬರಲಿದೆ. ಈ ಸಿನಿಮಾದ ಬಿಡುಗಡೆ ಏಪ್ರಿಲ್ ಬಳಿಕ ಎನ್ನಲಾಗಿತ್ತು. ಆದರೆ ಕೇವಲ ಹತ್ತೇ ದಿನದಲ್ಲಿ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಜಗನ್ ಸರ್ಕಾರದೊಟ್ಟಿಗೆ ಪವನ್ ಕಲ್ಯಾಣ್‌ರ ಹಿರಿಯ ಸಹೋದರ ಚಿರಂಜೀವಿ ಮಾತುಕತೆ ನಡೆಸಿದ್ದು, ಚಿತ್ರರಂಗಕ್ಕೆ ಅನುಕೂಲವಾಗುವಂತೆ ಆದೇಶದಲ್ಲಿ ಮಾರ್ಪಾಟು ತರುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ.
ಚಿತ್ರಮಂದಿರಗಳ ಕುರಿತಂತೆ ಜಗನ್ ಸರ್ಕಾರವು ಹೊಸ ಆದೇಶ ಶೀಘ್ರವೇ ಹೊರಡಿಸಲಿದೆ. ಆದರೆ ಹೊಸ ಆದೇಶ ಹೊರಡಿಸುವ ಮುನ್ನವೇ 'ಭೀಮ್ಲ ನಾಯಕ್' ಸಿನಿಮಾ ಬಿಡುಗಡೆ ಆಗುತ್ತಿದೆ.
ಒಂದೊಮ್ಮೆ ಈ ಸಿನಿಮಾದಿಂದಾಗಿ ಮತ್ತೆ ಜಗನ್ ಅಭಿಮಾನಿಗಳು, ಪವನ್ ಅಭಿಮಾನಿಗಳ ನಡುವೆ ಸಂಘರ್ಷ ಉಂಟಾದರೆ ನಟ ಚಿರಂಜೀವಿ ಪಟ್ಟಿರುವ ಶ್ರಮ ಮಣ್ಣು ಪಾಲಾಗಲಿದೆ.
ಪವನ್‌ರ 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಈ ಸಿನಿಮಾದಲ್ಲಿ ಪವನ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ನಿತ್ಯ ಮೆನನ್ ಹಾಗೂ ಮಲಯಾಳಂ ನಟಿ ಸಂಯುಕ್ತ ಮೆನನ್ ನಟಿಸಿದ್ದಾರೆ.
ಫೆಬ್ರವರಿ 25 ರ ವೇಳೆಗೆ ಕನ್ನಡದ ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಫೆಬ್ರವರಿ 24 ರಂದು ಬಿಡುಗಡೆ ಆದರೆ, 'ಬೈಟು ಲವ್', 'ಓಲ್ಡ್ ಮಾಂಕ್' 'ಅಘೋರ' ಸಿನಿಮಾಗಳು ಬಿಡುಗಡೆ ಆಗುತ್ತಿವೆ.


Click it and Unblock the Notifications











