ಆಂಧ್ರ ಡಿಸಿಎಂ ಆಗಿ ಪವನ್ ಪ್ರಮಾಣ ವಚನ ಸ್ವೀಕಾರ; ಜನಸೇನಾನಿಗೆ ತಿಂಗಳ ಸಂಬಳ, ಭತ್ಯೆ ಎಷ್ಟು?
ಇಷ್ಟು ದಿನ ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷರಾಗಿದ್ದ ಪವನ್ ಕಲ್ಯಾಣ್ ಇನ್ನು ಮುಂದೆ ಆಂಧ್ರ ಉಪಮುಖ್ಯಮಂತ್ರಿ. "ಪವನ್ ಕಲ್ಯಾಣ್ ಎಂಬ ನಾನು" ಎಂದು ಪವರ್ ಸ್ಟಾರ್ ಆಂಧ್ರ ಸಚಿವರಾಗಿ, ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸದ್ಯ ಆಂಧ್ರಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದೆ.
ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ಆಂಧ್ರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಂದ್ರಬಾಬು ಅವರೊಂದಿಗೆ ಮೈತ್ರಿಕೂಟದ 24 ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದರು. ಇನ್ನು ಇದೇ ಮೊದಲಬಾರಿಗೆ ಪಿಠಾಪುರದಿಂದ ಶಾಸಕರಾಗಿ ಆಯ್ಕೆಯಾದ ಪವನ್ ಕಲ್ಯಾಣ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ. ಪದಗ್ರಹಣ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ಆಂಧ್ರ ಹಲವು ಗಣ್ಯರು ಸಾಕ್ಷಿ ಆಗಿದ್ದಾರೆ.

ಪ್ರಧಾನಿ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್, ಪವನ್ ಸಹೋದರ ಚಿರಂಜೀವಿ ಸೇರಿದಂತೆ ಹಲವರು ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಮರಾವತಿಯ ಕೇಸರಪಲ್ಲಿಯ ವೇದಿಕೆಯಲ್ಲಿ ರಾಜ್ಯಪಾಲ ಅಬ್ದುಲ್ ನಜೀರ್ ನೂತನ ಸಚಿವರು ಪ್ರತಿಜ್ಞಾವಿಧಿ ಭೋದಿಸಿದರು. ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. "ಕೊನಿದೇಲ ಪವನ್ ಕಲ್ಯಾಣ್ ಎಂಬ ನಾನು" ಎಂದು ಪ್ರತಿಜ್ಞಾವಿಧಿ ಆರಂಭಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪವನ್ ಕಲ್ಯಾಣ್ ಬಳಿಕ ವೇದಿಕೆಯಲ್ಲಿದ್ದ ಗಣ್ಯರಿಗೆ ನಮಸ್ಕರಿಸಿದರು. ಸಹೋದರ ಚಿರಂಜೀವಿ ಆಶೀರ್ವಾದ ಪಡೆದರು. ಪವನ್ ಕಲ್ಯಾಣ್ ಸಚಿವರಾಗಿ, ಆಂಧ್ರ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಹಾಗಾಗಿ ಪವನ್ ಸಂಬಳ, ಭತ್ಯೆ ಎಷ್ಟಿರಲಿದೆ ಎನ್ನುವ ವಿಚಾರದ ಭಾರೀ ಚರ್ಚೆ ಆಗುತ್ತಿದೆ. ಕಾರಣ ಟಾಲಿವುಡ್‌ನಲ್ಲಿ ಪವರ್ ಸ್ಟಾರ್ ಕ್ರೇಜ್ ಜೋರಾಗಿದೆ. ಚಿತ್ರವೊಂದಕ್ಕೆ 60 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಮುಂದೆ ಡಿಸಿಎಂ ಆಗಿ ಎಷ್ಟು ಸಂಬಳ ಬರಬಹುದು ಎನ್ನುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಪವನ್ ಕಲ್ಯಾಣ್ ಶಾಸಕನಾಗಿ ಸಂಪೂರ್ಣ ಸಂಬಳ ಪಡೆಯುತ್ತೇನೆ. ಅದಕ್ಕೆ ಹಲವು ಪಟ್ಟು ಕೆಲಸ ಮಾಡುತ್ತೇನೆ. ನನ್ನ ಸಂಬಳ ಪ್ರತಿಯೊಬ್ಬರ ತೆರಿಗೆ ಹಣ. ಅಂದರೆ ಜನರ ರಕ್ತ, ಬೆವರಿನ ಫಲ. ನಾನು ಸಂಬಳ ತೆಗೆದುಕೊಂಡಾಗ ಅದು ನನ್ನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದಿದ್ದರು.
ಶಾಸಕರ ಸಂಬಳ, ಭತ್ಯೆ ಆಯಾ ರಾಜ್ಯಗಳಿಗೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಆಂಧ್ರ ಸರ್ಕಾರ ಪ್ರಸ್ತುತ ಪ್ರತಿ ಶಾಸಕರಿಗೆ 1 ಲಕ್ಷ 25 ಸಾವಿರ ರೂ. ಸಂಬಳ ನೀಡುತ್ತಿದೆ. ಇನ್ನು ಶಾಸಕರಿಗೆ ಸರಕಾರ ವಸತಿ ಸೌಕರ್ಯ ಕಲ್ಪಿಸಬೇಕು. ಆದರೆ ಸದ್ಯಕ್ಕೆ ಆಂಧ್ರದಲ್ಲಿ ಆ ಸೌಲಭ್ಯವಿಲ್ಲ. ಹಾಗಾಗಿ ಎಚ್‌ಆರ್‌ಎ ಅಡಿಯಲ್ಲಿ ಹೆಚ್ಚುವರಿಯಾಗಿ 50 ಸಾವಿರ ನೀಡಲಾಗುತ್ತದೆ. ಹಾಗಾಗಿ ಒಟ್ಟು ಸಂಬಳ 1 ಲಕ್ಷ 75 ಸಾವಿರ ರೂ. ಆಗುತ್ತದೆ. ಕ್ಷೇತ್ರ ಭತ್ಯೆ, ಕಚೇರಿ ಭತ್ಯೆ ಮತ್ತು ವಸತಿ ಭತ್ಯೆಯೂ ಇರುತ್ತದೆ.
ಶಾಸಕರ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ 1 ಪ್ಲಸ್ 1 ಅಥವಾ 2 ಪ್ಲಸ್ 2 ಭದ್ರತೆ ನೀಡುತ್ತದೆ. ಇನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಸ್ಪೀಕರ್, ವಿರೋಧ ಪಕ್ಷದ ನಾಯಕನಿಗೆ ಸಾಮಾನ್ಯವಾಗಿ ಶಾಸಕರಿಗಿಂತ ಹೆಚ್ಚಿನ ಸಂಬಳ ಇರುತ್ತದೆ. ಹಾಗಾಗಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಪವನ್ ಕಲ್ಯಾಣ್‌ಗೆ 2 ಲಕ್ಷಕ್ಕಿಂತ ಹೆಚ್ಚು ಸಂಬಳ ಹಾಗೂ ಭತ್ಯೆ ಪ್ರತಿ ತಿಂಗಳು ಸಿಗಲಿದೆ.


Click it and Unblock the Notifications











