Pawan Kalyan: "ನಮ್ಮ ಅತ್ತಿಗೆ ಮಾಡಿದ ದ್ರೋಹದಿಂದ ನಾನು ಇವತ್ತು ನಿಮ್ಮ ಮುಂದೆ ನಿಂತಿದ್ದೀನಿ": ಪವನ್ ಕಲ್ಯಾಣ್
ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಾಯಿಧರಮ್ ತೇಜ್ ನಟನೆಯ 'ಬ್ರೋ' ಸಿನಿಮಾ ಈ ವಾರ ತೆರೆಗಪ್ಪಳಿಸುತ್ತಿದೆ. ಹೈದರಾಬಾದ್‌ನಲ್ಲಿ ನಿನ್ನೆ(ಜುಲೈ26) ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ವೇದಿಕೆ ಏರಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಪವರ್ ಸ್ಟಾರ್ ಮಾತುಗಳನ್ನು ಕೇಳಿ ಅಭಿಮಾನಿಗಳು ಖುಷಿಯಾದರು.
'ಬ್ರೋ' ಸಿನಿಮಾ ಜೊತೆ ಜೊತೆಗೆ ಮೆಗಾ ಫ್ಯಾಮಿಲಿ ಸ್ಟಾರ್ಸ್, ಚಿತ್ರರಂಗ, ರಾಜಕೀಯ ಎಲ್ಲದರ ಬಗ್ಗೆಯೂ ಪವನ್ ಪ್ರಸ್ತಾಪಿಸಿದರು. ಈ ವೇಳೆ ತಮ್ಮ ಅತ್ತಿಗೆ ಸುರೇಖಾ ಬಗ್ಗೆ ಪವರ್ ಸ್ಟಾರ್ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆಕೆ ಮಾಡಿದ ದ್ರೋಹದಿಂದ ಇವತ್ತು ನಾನು ಇಲ್ಲಿದ್ದೀನಿ. ತನಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇರಲಿಲ್ಲ, ಅದರ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಆದರೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜಮೀನಿನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅಣ್ಣ ಮೆಗಾ ಸ್ಟಾರ್ ಆಗಿ ಮರೆಯುತ್ತಿದ್ದಾಗ ಹೀರೊ ಆಗ್ತೀಯಾ ಎಂದು ಕೇಳಿದರು. ಆಗ ಭಯ ಆಗಿತ್ತು. ನನ್ನ ಕೈಯಲ್ಲಿ ಇದು ಸಾಧ್ಯಾನಾ? ಎನಿಸಿತ್ತು.

"ಯಾವಾಗಲೂ ಜೀವನದಲ್ಲಿ ನಮ್ಮನ್ನು ನಂಬುವ ಜನರು ಬಹಳ ಮುಖ್ಯ. ನಮ್ಮ ಅತ್ತಿಗೆ ಸುರೇಖಾ ನನ್ನನ್ನು ನಂಬಿದಳು. ಸಿನಿಮಾಗಳಲ್ಲಿ ನಟಿಸುವಂತೆ ಪ್ರೋತ್ಸಾಹಿಸಿದಳು. ಒಮ್ಮೆ ಜಗದಂಬಾ ಥಿಯೇಟರ್‌ನಲ್ಲಿ ಎಲ್ಲರೂ ಬಸ್ ಮೇಲೆ ಏರಿ ಡ್ಯಾನ್ಸ್ ಮಾಡುವಂತೆ ಹೇಳಿದ್ದರು. ಅವತ್ತು ಸಾಕಪ್ಪಾ ಸಾಕು, ಸತ್ತೇ ಹೋಗಿಬಿಡ್ತೀನಿ ಎನಿಸಿತ್ತು. ಅವತ್ತೇ ನಾನು ನಮ್ಮ ಅತ್ತಿಗೆಗೆ ಫೋನ್ ಮಾಡಿ ಕೇಳಿದೆ. ನನಗೆ ಯಾಕೆ ಇದೆಲ್ಲಾ ಮಾಡೋಕೆ ಹೇಳಿದ್ರು ಎಂದು ದಬಾಯಿಸಿದೆ. ಅಂದು ಆಕೆ ಮಾಡಿದ ತಪ್ಪಿನಿಂದಾಗಿ ನಾನು ಇಂದು ಇಮ್ಮ ಮುಂದೆ ನಿಂತಿದ್ದೀನಿ. ಇದಕ್ಕೆಲ್ಲಾ ಅತ್ತಿಗೆ ಮಾಡಿದ ದ್ರೋಹ ಕಾರಣ" ಎಂದು ಫನ್ನಿಯಾಗಿ ಪವನ್ ಹೇಳಿದ್ದಾರೆ.
ನಾನು ಈ ಹಂತಕ್ಕೆ ಏರುತ್ತೇನೆ, ಇಷ್ಟು ದೊಡ್ಡ ವೇದಿಕೆ ನನಗೆ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಈ ರೀತಿಯ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡುತ್ತಿದ್ದರೆ ಇದು ಕನಸಾ, ನಿಜಾನಾ ಎನಿಸುತ್ತದೆ. ಇದು ನಾನು ಬಯಸಿದ ಜೀವನವಲ್ಲ, ದೇವರು ಕೊಟ್ಟಿದ್ದು. ಏನೋ ಸಾಮಾನ್ಯ ಜೀವನ ಸಾಗಿಸಿದರೆ ಸಾಕು ಎಂದುಕೊಂಡಿದ್ದೆ. ಆದರೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಕ್ಕೆ ನಾನು ಅದೃಷ್ಟವಂತ. ನಿಮ್ಮ ಪ್ರೀತಿಗೆ ಪದಗಳಿಂದ ಧನ್ಯವಾದ ಹೇಳಲು ಸಾಧ್ಯವಿಲ್ಲ. ನನಗೆ ಮಾತನಾಡಲು ಗೊತ್ತಿಲ್ಲ, ಬದಲಿಗೆ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಆಸೆ ಇದೆ" ಎಂದಿದ್ದಾರೆ.
ಚಿಕ್ಕಂದಿನಿಂದಲೂ ಪವನ್ ಕಲ್ಯಾಣ್ ಅಂತರ್ಮುಖಿ ಆಗಿದ್ದರಂತೆ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಬಹಳ ನಾಚಿಕೆ ಸ್ವಭಾವದವರಾಗಿದ್ದ ಪವರ್ ಸ್ಟಾರ್ ಸಸಾ ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದರು. ಎಸ್‌ಎಸ್‌ಎಲ್‌ಸಿ ಬಳಿಕ ಪಠ್ಯಪುಸ್ತಕ ಬಿಟ್ಟು ಆಧ್ಯಾತ್ಮಕ ಪುಸ್ತಕಗಳನ್ನು ಓದುವುದರಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು. ಪಿಯುಸಿಯಲ್ಲಿ ಫೇಲ್ ಆಗಿದ್ದಾಗ ಬೇಸತ್ತು ಆತ್ಮಹತ್ಯೆಗೂ ಪವನ್ ಕಲ್ಯಾಣ್ ಯತ್ನಿಸಿದ್ದರಂತೆ. ಆದರೆ ಕುಟುಂಬ ಸದಸ್ಯರು ನೋಡಿ ಜೀವ ಉಳಿಸಿದ್ದರು.ಆದರೆ ಚಿರಂಜೀವಿ ಪತ್ನಿ ಸುರೇಖಾ ಮೈದುನನ್ನು ಸಿನಿಮಾಗಳಲ್ಲಿ ನಟಿಸುವಂತೆ ಪ್ರೇರೇಪಿಸಿದರು.
ಒಟ್ಟಾರೆ ಸಿನಿಮಾಗಳಲ್ಲಿ ನಟಿಸೋದೇ ನನಗೆ ಇಷ್ಟವಿರಲಿಲ್ಲ. ಆದರೆ ಅತ್ತಿಗೆಯ ಒತ್ತಾಯಕ್ಕೆ ನಟಿಸಲು ಆರಂಭಿಸಿದೆ. ಕಠಿಣ ಪರಿಶ್ರಮದಿಂದ ಸ್ಟಾರ್ ನಟನಾದೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದೆ. ಅದೇ ಕಾರಣಕ್ಕೆ ಸಮಾಜಕ್ಕೆ ಏನಾದರೂ ತಿರುಗಿ ಕೊಡಬೇಕು ಎನ್ನುವ ಕಾರಣಕ್ಕೆ ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕಿರುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ.
ತಮಿಳಿನ 'ವಿನೋದಯ ಸಿತಂ' ಚಿತ್ರವನ್ನು ಸಮುದ್ರಖನಿ 'ಬ್ರೋ' ಹೆಸರಿನಲ್ಲಿ ತೆಲುಗಿಗೆ ರೀಮೆಕ್ ಮಾಡಿದ್ದಾರೆ. ಮೂಲ ಚಿತ್ರದಲ್ಲಿ ತಂಬಿ ರಾಮಯ್ಯ ಹಾಗೂ ಸಮುದ್ರಖನಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಒಂದಷ್ಟು ಬದಲಾವಣೆ ಮಾಡಿ ತ್ರಿವಿಕ್ರಮ್ ಶ್ರೀನಿವಾಸ್ ತೆಲುಗಿನಲ್ಲಿ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಸಮಯ ಎನ್ನುವ ದೇವರ ರೂಪದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಯಾವುದಕ್ಕೂ ನನಗೆ ಸಮಯ ಇಲ್ಲ ಎನ್ನುವ ನಾಯಕನಿಗೆ ಸಮಯವೇ ಎದುರಾದರೆ ಏನಾಗುತ್ತದೆ? ಎನ್ನುವುದನ್ನು ಈ ಚಿತ್ರದ ಕಥೆ.


Click it and Unblock the Notifications











