ಪವನ್ ಜೊತೆ ಮಗ ಚಿತ್ರರಂಗ ಪ್ರವೇಶ; ಒಂದೇ ಚಿತ್ರದಲ್ಲಿ ತಂದೆ-ಮಗನ ಜುಗಲ್ಬಂದಿ?
ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರದ ಉಪಮುಖ್ಯಮಂತ್ರಿ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯರಂಗದಲ್ಲಿ ಬ್ಯುಸಿಯಿದ್ದ ಕಾರಣ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ನಟಿಸುತ್ತಿದ್ದ ಚಿತ್ರಗಳನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಪವನ್ ಮುಂದಿನ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗ್ತಿದೆ.
ಪವರ್ ಸ್ಟಾರ್ 'ಹರಿಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಎನ್ನುವ 3 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹಳ ದಿನಗಳಿಂದ ಈ ಚಿತ್ರಗಳ ಚಿತ್ರೀಕರಣ ನಿಂತು ಹೋಗಿತ್ತು. ಸದ್ಯ 'OG' ಚಿತ್ರದ ಚಿತ್ರೀಕರಣಕ್ಕೆ ಮತ್ತೆ ಹಾಜರ್ ಆಗಿದ್ದಾರೆ. ಈ ಸುದ್ದಿ ಹೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸರ್ಕಾರದ ಕೆಲಸಗಳ ನಡುವೆಯೇ ಈ ಚಿತ್ರಗಳನ್ನು ಮುಗಿಸಲು ಪವನ್ ಕಲ್ಯಾಣ್ ಮನಸ್ಸು ಮಾಡಿದ್ದಾರೆ.

ಮುಂದೆ ಚಿತ್ರರಂಗದಿಂದ ಪವನ್ ಕಲ್ಯಾಣ್ ಸಂಪೂರ್ಣವಾಗಿ ದೂರವಾಗುತ್ತಾರಾ? ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದೆ. ನೆಚ್ಚಿನ ನಟ ಆಂಧ್ರದ ಡಿಸಿಎಂ ಆಗಿರುವ ಸಂತೋಷವೂ ಇದೆ, ಜೊತೆಗೆ ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ? ಎನ್ನುವ ಆತಂಕವೂ ಮನೆ ಮಾಡಿದೆ. ಇದೆಲ್ಲದರ ನಡುವೆ ಪವನ್ ಪುತ್ರ ಅಕಿರಾ ನಂದನ್ ಸಿನಿಎಂಟ್ರಿ ಬಗ್ಗೆ ಚರ್ಚೆ ಶುರುವಾಗಿದೆ.
ಪವನ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಕೆಲ ಕಾರ್ಯಕ್ರಮಗಳಲ್ಲಿ ಅಕಿರಾ ನಂದನ್ ಕಾಣಿಸಿಕೊಂಡಿದ್ದ. ತಂದೆ ಜೊತೆ ದೆಹಲಿಗೆ ತೆರಳಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದ. ಆ ಫೋಟೊಗಳು ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅಕಿರಾ ಟಾಲಿವುಡ್ ಎಂಟ್ರಿ ಬಗ್ಗೆ ಗುಸುಗುಸು ಶುರುವಾಯಿತು. ಈ ಆರಡಿ ಕಟೌಟ್ ಚಿತ್ರರಂಗಕ್ಕೆ ಬಂದರೆ ಹಬ್ಬ ಎಂದು ಅಭಿಮಾನಿಗಳು ಸಂಭ್ರಮಿಸಿದ್ದರು. ಇದೀಗ 'OG' ಚಿತ್ರದ ಅತಿಥಿ ಪಾತ್ರದಲ್ಲಿ ಅಕಿರಾ ನಟಿಸುತ್ತಾನೆ ಎಂದು ಗುಲ್ಲಾಗಿದೆ.

'OG' ಸಿನಿಮಾ ಚಿತ್ರೀಕರಣ ಪುನರಾರಂಭವಾಗುತ್ತಿದ್ದಂತೆ ಇಂತಾದೊಂದು ಸುದ್ದಿ ಕೇಳಿಬರ್ತಿದೆ. ಆದರೆ ಅಕಿರಾ ನಂದರ್ ಚಿತ್ರರಂಗಕ್ಕೆ ಬರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮಗ ಬಣ್ಣದಲೋಕಕ್ಕೆ ಬರುವುದು ಇಷ್ಟವಿಲ್ಲ ಎಂದು ರೇಣು ದೇಸಾಯಿ ಹೇಳಿದ್ದರು. ಮುಂದೆ ಆತನ ಅಭಿರುಚಿರ ಹೇಗಿರುತ್ತದೆ ನೋಡೋಣ ಎಂದಿದ್ದರು. ಸದ್ಯ ಓದುತ್ತಿರುವ ಅಕಿರಾ ಸಿನಿಮಾ ಎಡಿಟಿಂಗ್ ಬಗ್ಗೆ ಒಲವು ಮೂಡಿಸಿದ್ದಾನೆ. ಆತ ಎಡಿಟ್ ಮಾಡಿದ್ದ ವೀಡಿಯೋವೊಂದನ್ನು ತಾಯಿ ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದರು.
'ಸಾಹೋ' ಸಿನಿಮಾ ಖ್ಯಾತಿಯ ಸುಜಿತ್ ಇದೀಗ 'OG' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'RRR' ಸಿನಿಮಾ ನಿರ್ಮಿಸಿದ್ದ ಡಿವಿವಿ ದಾನಯ್ಯ ಬಂಡವಾಳ ಹೂಡುತ್ತಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಓಜಸ್ ಗಂಭೀರ ಎಂಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಪವರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಜನವರಿಯಲ್ಲೇ ಸಿನಿಮಾ ಸೆಟ್ಟೇರಿತ್ತು.
'OG' ಚಿತ್ರಕ್ಕಾಗಿ ಪವನ್ ಕಲ್ಯಾಣ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಪ್ರಭಾಸ್ ಸಹ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ಪ್ರಕಾಶ್ ರಾಜ್, ಪ್ರಿಯಾಂಕ ಮೋಹನ್, ಅರ್ಜುನ್ ದಾಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಬೇಕಿತ್ತು. ಶೂಟಿಂಗ್ ತಡವಾಗಿ ರಿಲೀಸ್ ಸಹ ಮುಂದಕ್ಕೆ ಹೋಗಿದೆ.
ಚಿರಂಜೀವಿ ಹಾದಿಯಲ್ಲಿ ಸಹೋದರರಾದ ಪವನ್, ನಾಗಬಾಬು ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಚಿರು ಸೋದರಳಿಯ ಅಲ್ಲು ಅರ್ಜುನ್ ಪ್ರವೇಶಿಸಿ ಗೆದ್ದರು. ಬಳಿಕ ಪುತ್ರ ರಾಮ್‌ಚರಣ್ ಸೇರಿದಂತೆ ಮೆಗಾ ಫ್ಯಾಮಿಲಿಯಿಂದ ನಾಲ್ಕೈದು ಜನ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಪವನ್ ಪುತ್ರ ಅಕಿರಾ ನಂದನ್ ಕೂಡ ಚಿತ್ರರಂಗಕ್ಕೆ ಬರ್ತಾನಾ? ಕಾದು ನೋಡಬೇಕಿದೆ.


Click it and Unblock the Notifications











