Re Release ; ಚುನಾವಣೆಯಲ್ಲಿ ಗೆಲುವಿನ ನಗಾರಿ ಬಾರಿಸಿದ ಬೆನ್ನಲ್ಲೇ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!
ಸ್ಟಾರ್‌ಗಳ ಸಿನಿಮಾ ಇಲ್ಲದೇ ಸೊರಗುತ್ತಿರುವ ಚಿತ್ರಮಂದಿರಗಳಿಗೆ ಈಗ ಹಳೆಯ ಸಿನಿಮಾಗಳೇ ಆಸರೆ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಮಲಯಾಳಂ ಹೊರತು ಪಡಿಸಿದರೆ ಬಹುತೇಕ ಎಲ್ಲ ಭಾಷೆಯಲ್ಲಿ ಕೂಡ ಇದೇ ತರಹದ ವಾತಾವರಣ ಇದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪವನ್ ಕಲ್ಯಾಣ್ ಅಭಿನಯದ ಪುರಾತನ ಸಿನಿಮಾ ಈ ಜೂನ್ 15ಕ್ಕೆ ಬಿಡುಗಡೆಯಾಗಲಿದೆ.
ಹೌದು, ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಪವನ್ ಕಲ್ಯಾಣ್ ರಣಕೇಕೆ ಹಾಕಿದ್ದೇ ತಡ, ಪವನ್ ಕಲ್ಯಾಣ್ ಅಭಿನಯದ ಹಳೆಯ ಸಿನಿಮಾಗಳ ಮೇಲೀಗ ತೆಲುಗು ಚಿತ್ರರಂಗದ ಕಣ್ಣು ಬಿದ್ದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಪವನ್ ಕಲ್ಯಾಣ್ ಅವರ ಸದ್ಯದ ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿರುವ ತೆಲುಗು ಉದ್ಯಮ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ತಮ್ಮುಡು' ಚಿತ್ರವನ್ನ ಮರು ಬಿಡುಗಡೆ ಮಾಡುತ್ತಿದೆ.

ಇದೇ ದಿನದಂದು ಸರಿಯಾಗಿ 25 ವರ್ಷದ ಹಿಂದೆ ಬಿಡುಗಡೆತಾಗಿದ್ದ ಈ ಚಿತ್ರ ಆ ಕಾಲಕ್ಕೆ ದಾಖಲೆ ಬರೆದಿತ್ತು. ಸಿನಿ ರಸಿಕರ ಹೃದಯವನ್ನು ಗೆದ್ದಿತ್ತು. ಪಿ.ಎ.ಅರುಣ್ ಪ್ರಸಾದ್ ನಿರ್ದೇಶನದಲ್ಲಿ ಬಂದಿದ್ದ ಈ ಚಿತ್ರದಲ್ಲಿ ಪ್ರೀತಿ ಜಿಂಗಾನಿಯಾ ಮತ್ತು ಆದಿತಿ ಆದಿತಿ ಗೋವಿತ್ರಿಕರ್ ನಾಯಕಿ ಪಾತ್ರಗಳನ್ನ ನಿರ್ವಹಿಸಿದ್ದರು.
ಅಂದ್ಹಾಗೇ ಆಮೀರ್ ಖಾನ್ ಅಭಿನಯದ ಜೋ ಜೀತಾ ವಹಿ ಸಿಂಖಧರ್ ಚಿತ್ರದಿಂದ ಪ್ರೇರಣೆಗೊಂಡು ಸಿದ್ಧವಾದ ತಮ್ಮುಡು ಚಿತ್ರ ಕನ್ನಡಕ್ಕೆ ರಿಮೇಕ್ ಆಗಿತ್ತು. ಕನ್ನಡದಲ್ಲಿ 'ಯುವರಾಜ' ಹೆಸರಿನಲ್ಲಿ ಶಿವರಾಜ್ ಕುಮಾರ್ ರೀಮೇಕ್ ಮಾಡಿದ್ದರು. ಆ ಸಿನಿಮಾ ಸಹ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇನ್ನೂ ತಮಿಳಿನಲ್ಲಿಯೂ ಕೂಡ ಈ ಚಿತ್ರ 'ಬದ್ರಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಇಳಯ ದಳಪತಿ ವಿಜಯ್ ಪವನ್ ಕಲ್ಯಾಣ್ ಪಾತ್ರವನ್ನ ನಿರ್ವಹಿಸಿದ್ದರು. ಆ ನಂತರ 2003ರಲ್ಲಿ ಚಾಂಪಿಯನ್ ಹೆಸರಿನಲ್ಲಿ ಬೆಂಗಾಲಿ ಭಾಷೆಗೆ ಕೂಡ ರಿಮೇಕ್ ಆಗಿತ್ತು ಈ ಸಿನಿಮಾ.

ಹೀಗೆ ಆ ಕಾಲದಲ್ಲಿ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿ, ಹತ್ತಾರು ದಾಖಲೆಯನ್ನ ಬರೆದ ಈ ಸಿನಿಮಾವನ್ನ ಈಗ 25 ವರ್ಷದ ನಂತರ ಮರು ಬಿಡುಗಡೆ ಮಾಡಲಾಗುತ್ತಿದೆ. ಇನ್ನೂ ಪವನ್ ಕಲ್ಯಾಣ್ ಆಕ್ಟರ್ ಆಗಿ ಅಲ್ಲ ಬದಲಿಗೆ ಪೊಲಿಟಿಷಿಯನ್ ಆಗಿ ಜನ ಮನ ಗೆದ್ದಿದ್ದಾರೆ. ಪೀಠಾಪುರಂದ ಶಾಸಕರಾಗಿದ್ದಾರೆ. ಹೀಗಾಗಿ ತಮ್ಮುಡು ಚಿತ್ರಕ್ಕೆ ಅದ್ಧೂರಿ ಮತ್ತು ಭವ್ಯವಾದ ಸ್ವಾಗತ ಸಿಗುವ ನಿರೀಕ್ಷೆ ತೆಲುಗು ಚಿತ್ರರಂಗಕ್ಕೆ ಇದೆ.
ಉಳಿದಂತೆ 'ಎನ್ಡಿಎ'ದ ಪ್ರಮುಖ ಭಾಗ ಆಗಿರುವ ಪವನ್ ಕಲ್ಯಾಣ್ ಅವರಿಗೆ ಆಂಧ್ರ ಸರ್ಕಾರದಲ್ಲಿ ಪ್ರಮುಖ ಖಾತೆಯೂ ದೊರೆಯಲಿದೆ ಎನ್ನಲಾಗುತ್ತಿದೆ. ರಾಜಕಾರಣದ ನಡುವೆ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುವುದು ಮುಂದುವರೆಸುತ್ತಾರೆಯೇ ಇಲ್ಲವೇ ಎಂಬ ಅನುಮಾನ ಅಭಿಮಾನಿಗಳಿಗಿದೆ. ಪವನ್ ನಟಿಸಿರುವ 'ಓಜಿ', 'ಹರಿಹರ ವೀರಮಲ್ಲು' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳ ಬಿಡುಗಡೆಗೆ ರೆಡಿಯಿದೆ. ಈ ಸಿನಿಮಾಗಳು ಬಿಡುಗಡೆ ದಿನಾಂಕ ಸದ್ಯದಲ್ಲಿಯೇ ಘೋಷಣೆ ಆಗಲಿದೆ.


Click it and Unblock the Notifications











