ಶ್ರೀಲೀಲಾ ವೇದಿಕೆಯಲ್ಲಿ ನಟ ಮಹೇಶ್ ಅಚಂತ ಕಡೆ ವಾರೆನೋಟ ಬೀರಿದ್ದೇಕೆ? ಮೌನ ಮುರಿದ ನಟ
ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಪವನ್ ಕಲ್ಯಾಣ್ ಜೋಡಿಯಾಗಿ ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಭಾನುವಾರ(ಮಾರ್ಚ್ 15) ಸಂಜೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಡೀತು.
ಪವನ್ ಕಲ್ಯಾಣ್, ಶ್ರೀಲೀಲಾ ಸೇರಿದಂತೆ ಇಡೀ ಚಿತ್ರತಂಡ ಈವೆಂಟ್‌ನಲ್ಲಿ ಭಾಗಿ ಆಗಿತ್ತು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬಹಳ ಹೊತ್ತು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಅಂತಿಮವಾಗಿ ವೇದಿಕೆ ಏರಿ ಅರ್ಧ ಗಂಟೆ ಸಮಯ ಮಾತನಾಡಿದರು. 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದರು. ಇಡೀ ಚಿತ್ರತಂಡ ಆಗ ಪವನ್ ಹಿಂದೆ ನಿಂತಿತ್ತು. ಶ್ರೀಲೀಲಾ ಹಿಂದೆ ಹಾಸ್ಯನಟ ಮಹೇಶ್ ಅಚಂತ ನಿಂತಿದ್ದರು. ಪವರ್ ಸ್ಟಾರ್ ಭಾಷಣದ ನಡುವೆ ಶ್ರೀಲೀಲಾ ಒಮ್ಮೆ ಹಿಂದೆ ತಿರುಗಿ ನೋಡಿದ್ದರು.

ಪವನ್ ಮಾತನಾಡುತ್ತಿರುವಾಗ ಹಿಂದೆ ನಿಂತಿದ್ದ ಮಹೇಶ್ ಅಚಂತ ಕಡೆ ತಿರುಗಿ ವಾರೆನೋಟ ಬೀರಿದ್ದರು. ಕೂಡಲೇ ಮಹೇಶ್ ನಕ್ಕು ಏನೂ ಇಲ್ಲ ಎನ್ನುವಂತೆ ಸುಮ್ಮನಾಗಿದ್ದರು. ಆ ವೀಡಿಯೋ ಕಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಶ್ರೀಲೀಲಾ ದಿಢೀರ್ ಆ ರೀತಿ ತಿರುಗಿ ನೋಡಿದ್ದೇಕೆ? ಪವನ್ ಕಲ್ಯಾಣ್ ಮಾತನಾಡುವಾದ ಹಿಂದೆ ಫೋನ್ ರಿಂಗ್ ಆಗುವ ಸದ್ದು ಕೇಳಿದ್ದೆ. ಅದಕ್ಕೆ ಹೀಗೆ ಶ್ರೀಲೀಲಾ ಕೋಪದಿಂದ ತಿರುಗಿ ನೋಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇದೀಗ ಸ್ವತಃ ನಟ ಮಹೇಶ್ ಅಚಂತ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಹೇಶ್ ಪೋಸ್ಟ್ ಮಾಡಿ "ಶ್ರೀಲೀಲಾ ಕೆಲ ನಿಮಿಷಗಳ ಮುನ್ನ ತಮ್ಮ ಫೋನ್ ನನ್ನ ಕೈಗೆ ಕೊಟ್ಟಿದ್ರು. ಇದ್ದಕ್ಕಿದಂತೆ ಆಕೆ ನನ್ನ ಕಡೆ ತಿರುಗಿ ನೋಡಿದ್ದಕ್ಕೆ ಫೋನ್ ಕೇಳಲು ಹೀಗೆ ನೋಡಿದ್ರು ಅಂದುಕೊಂಡೆ. ಅಷ್ಟರಲ್ಲೇ ಆಕೆ ಮೇಲೆ ಸ್ಕ್ರೀನ್ ನೋಡಿದ್ರು. ಅಷ್ಟೇ ಆಗಿದ್ದು. ಇಲ್ಲಿ ಯಾರನ್ನೂ ಅಗೌರವಿಸಬೇಡಿ. ಮಾರ್ಚ್ 19ರಂದು ಉಸ್ತಾಸ್ ಭಗತ್ ಸಿಂಗ್ ಸಿನಿಮಾ ನೋಡಿ" ಎಂದು ಬರೆದುಕೊಂಡಿದ್ದಾರೆ.
'ರಂಗಸ್ಥಳಂ', 'ಸೀತಾರಾಮಂ', 'ಡಿಸ್ಕೋ ರಾಜಾ' ಸೇರಿದಂತೆ ಕೆಲ ಹಿಟ್ ಸಿನಿಮಾಗಳಲ್ಲಿ ಮಹೇಶ್ ಅಚಂತ ನಟಿಸಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಇದೀಗ ಬಿಡುಗಡೆಗೆ ಅಣಿಯಾಗಿದೆ. ತಮನ್ ಹಾಗೂ ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಬ್ಬರ್ ಸಿಂಗ್ ಬಳಿಕ ಪವನ್- ಹರೀಶ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಕಾಪ್ ಡ್ರಾಮಾ ಸಿನಿಮಾ ಬರ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟ ಶ್ರೀಲೀಲಾ ಈ ಸಿನಿಮಾ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ. ರಾಶಿ ಖನ್ನಾ ಮತ್ತೊಬ್ಬ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಪಾರ್ತಿಬನ್, ಅಶುತೋಷ್ ರಾಣಾ, ನವಾಬ್ ಶಾ, ರಾಜೀವ್ ಕನಕಾಲ, ಪೋಸಾನಿ ಕೃಷ್ಣಮುರಳಿ, ಗೌತಮಿ ಚಿತ್ರದ ತಾರಾಗಣದಲ್ಲಿದ್ದಾರೆ. 2021ರಲ್ಲಿ 'ಭವದೀಯುಉ ಭಗತ್ ಸಿಂಗ್' ಹೆಸರಿನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಚಿತ್ರದ ಟೈಟಲ್ ಬದಲಿಸಲಾಗಿತ್ತು.
ಈಗಾಗಲೇ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. 'ಟಾಕ್ಸಿಕ್' ಚಿತ್ರ ತೆರೆಗೆ ಬರುವುದು ತಡವಾಗುತ್ತಿದ್ದಂತೆ 10 ದಿನ ಮುನ್ನ ಪವನ್ ಸಿನಿಮಾ ಬಿಡುಗಡೆ ಆಗುತ್ತಿದೆ. ರಾಜಕೀಯರಂಗದಲ್ಲಿ ಬ್ಯುಸಿಯಾಗಿರುವ ಜನಸೇನಾನಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಹಾಗಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











