ನಾನ್ ಅವಳಲ್ಲ.. ನಾನ್ ಅವಳಲ್ಲ.. ನನ್ನ ನಂಬಿ ಪ್ಲೀಸ್; ಪವನ್ ಕಲ್ಯಾಣ್ ಪತ್ನಿ ಸ್ಪಷ್ಟನೆ
ತೆಲುಗು ನಟ, ಆಂಧ್ರ ಡಿಸಿಎಂ ರಾಜಕೀಯರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಇನ್ನು ಪವನ್ ಕಲ್ಯಾಣ್ ಇಬ್ಬರನ್ನು ಮದುವೆ ಆಗಿ ಡಿವೋರ್ಸ್ ಕೊಟ್ಟು ಅನ್ನಾ ಲೆಜ್ನೆವಾ ಎಂಬುವವರನ್ನು 3ನೇ ಮದುವೆ ಆಗಿರುವುದು ಗೊತ್ತೇಯಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆ ತೆರೆದಿರುವ ಅನ್ನಾ ಅಭಿಮಾನಿಗಳ ಜೊತೆ ಚಿಟ್ ಚಾಟ್ ನಡೆಸುತ್ತಿರುತ್ತಾರೆ.
ರಷ್ಯನ್ ಮಹಿಳೆ ಅನ್ನಾ ಲೆಜ್ನೆವಾ ಈಗ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಅನುಸರಿಸುತ್ತಾ ಭಾರತೀಯಳೇ ಆಗಿಬಿಟ್ಟಿದ್ದಾರೆ. ಆಕೆಗೆ ಇಬ್ಬರೂ ಮಕ್ಕಳು ಇದ್ದಾರೆ. ಅದಾಗಲೇ ಒಂದು ಮದುವೆಯಾಗಿ ಡಿವೋರ್ಸ್ ಆಗಿದ್ದ ಅನ್ನಾ ಅವರನ್ನು 2013ರಲ್ಲಿ ಪವನ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಅಂದಹಾಗೆ ಫೋಟೊವೊಂದರ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅನ್ನಾ ಸ್ಪಷ್ಟನೆ ಕೊಟ್ಟಿದ್ದಾರೆ.

ಪವನ್ ಕಲ್ಯಾಣ್ ನಟನೆಯ 'ತೀನ್‌ಮಾರ್' ಚಿತ್ರದ ಹಾಡಿನ ಸಣ್ಣ ಝಲಕ್‌ನಲ್ಲಿ ಅನ್ನಾ ಲೆಜ್ನೆವಾ ಡ್ಯಾನ್ಸ್ ಮಾಡಿದ್ದರು. ಅದೇ ಹಾಡಿನ ಚಿತ್ರೀಕರಣದ ಸಮಯದಲ್ಲಿ ಪವನ್ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಯಾಗಿ ಬದಲಾಗಿತ್ತು. ಮುಂದೆ ಇಬ್ಬರೂ ಮದುವೆ ಆಗಿದ್ದರು. ಆದರೆ ಅದೇ ಹಾಡಿನಲ್ಲಿ ಮತ್ತಷ್ಟು ವಿದೇಶದ ಸುಂದರಿಯರು ಹೆಜ್ಜೆ ಹಾಕಿದ್ದರು. ಈ ಫೋಟೊದಲ್ಲಿರುವ ವಿದೇಶಿ ಸುಂದರಿ ದನಾ ಮಾರ್ಕ್ಸ್ ಚಿತ್ರದ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.
'ತೀನ್‌ಮಾರ್' ಚಿತ್ರದ ಪ್ರಚಾರದ ವೇಳೆ ಪವನ್ ಕಲ್ಯಾಣ್ ಜೊತೆ ದನಾ ಮಾರ್ಕ್ಸ್ ಕಾಣಿಸಿಕೊಂಡಿದ್ದರು. ಹೀಗೆ ಇಬ್ಬರೂ ಅಕ್ಕಪಕ್ಕ ಕುಳಿತ ಫೋಟೊ ಇವತ್ತಿಗೂ ಗೂಗಲ್‌ನಲ್ಲಿ ಚಕ್ಕರ್ ಹೊಡೆಯುತ್ತಲೇ ಇದೆ. ಆದರೆ ಸಾಕಷ್ಟು ಜನ ಈಕೆಯನ್ನು ಪವನ್ 3ನೇ ಪತ್ನಿ ಅನ್ನಾ ಲೆಜ್ನೆವಾ ಎಂದೇ ಭಾವಿಸಿದ್ದಾರೆ. ಈ ಬಗ್ಗೆ ಕೊನೆಗೂ ಸ್ವತಃ ಅನ್ನಾ ಸ್ಪಷ್ಟನೆ ನೀಡಿದ್ದಾರೆ. ನಾನ್ ಅವಳಲ್ಲ, ನಾನ್ ಅವಳಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುವ ಅನ್ನಾ ಲೆಜ್ನೆವಾ ಇತ್ತೀಚೆಗೆ ಈ ಫೋಟೊ ಹಾಕಿ ಕಾಮೆಂಟ್ ಮಾಡಿದ್ದಾರೆ. "ಆಕೆ ನಾನಲ್ಲ.. ಈ ಸುಂದರವಾದ ಹುಡುಗಿ ನಾನಲ್ಲ" ಎಂದು ಪೋಸ್ಟ್ ಮಾಡಿದ್ದಾರೆ. "ಇದು ನಾನಲ್ಲ, ಯಾರು ಮೊದಲಿಗೆ ಈ ಮಿಸ್ಟೇಕ್ ನನಗೆ ಗೊತ್ತಿಲ್ಲ, ಈಕೆಯ ಹೆಸರು ದನಾ ಮಾರ್ಕ್ಸ್ ಬರೆದುಕೊಂಡಿದ್ದಾರೆ. 'ತೀನ್‌ಮಾರ್' ಚಿತ್ರದಲ್ಲಿ ನಟಿಸಿದ್ದ ವಿದೇಶಿ ನಟಿಯನ್ನು ಪವನ್ ಲವ್ ಮಾಡುತ್ತಿದ್ದಾರೆ, ಆಕೆಯನ್ನು ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ 13 ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು.
'ತೀನ್‌ಮಾರ್' ಚಿತ್ರದ ನಟಿ ಎನ್ನುತ್ತಿದ್ದಂತೆ ಪ್ರಚಾರದಲ್ಲಿ ಪವನ್ ಪಕ್ಕ ಕೂತಿದ್ದ ದನಾ ಮಾರ್ಕ್ಸ್ ಜೊತೆಗಿನ ಫೋಟೊವನ್ನು ಮೊದಲಿಗೆ ಯಾರೋ ಪೋಸ್ಟ್ ಮಾಡಿದ್ದಾರೆ. ಕೆಂಚು ಕೂದಲು, ನೋಡಲು ರಷ್ಯನ್ ಮಹಿಳೆ ರೀತಿ ದನಾ ಮಾರ್ಕ್ಸ್ ಕೂಡ ಕಂಡಿದ್ದರಿಂದ ಆಕೆಯೇ ಅನ್ನಾ ಎಂದು ಕೆಲವರು ಭಾವಿಸಿದ್ದರು. ಬಹುಶಃ ಹೆಸರು ಬದಲಿಸಿಕೊಂಡಿರಬಹುದು ಎಂದುಕೊಂಡರು. ಹಾಗಾಗಿ ಪವನ್ ಪತ್ನಿ ಅನ್ನಾ ಎಂದು ಸರ್ಚ್ ಮಾಡಿದಾಗ ಇದೇ ಫೋಟೊ ಕೆಲವೊಮ್ಮೆ ಗೂಗಲ್‌ನಲ್ಲಿ ಸಿಗುತ್ತದೆ. ಅದೇ ಕಾರಣಕ್ಕೆ ಸ್ವತಃ ಅನ್ನಾ ಈಗ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಜಯಂತ್ ಜೆ. ಪರಾಂಜೆ ನಿರ್ದೇಶನದ 'ತೀನ್‌ಮಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಸರಿಯಾಗಿ 15 ವರ್ಷಗಳ ಹಿಂದೆ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬಿಡುಗಡೆ ಆಗಿತ್ತು. 'ತೀನ್‌ಮಾರ್' ಬಿಟ್ರೆ ಮತ್ಯಾವುದೇ ಸಿನಿಮಾದಲ್ಲಿ ಅನ್ನಾ ಲೆಜ್ನೆವಾ ಕಾಣಿಸಿಕೊಳ್ಳಲಿಲ್ಲ.


Click it and Unblock the Notifications