ಪತ್ರಕರ್ತನ ಪ್ರಶ್ನೆಗೆ ಕಣ್ಣೀರಾಕಿ ವೇದಿಕೆಯಿಂದ ಎದ್ದು ಹೊರಟು ಹೋದ 'ಹೆಡ್‌ಬುಷ್' ಚಿತ್ರನಟಿ
ಇತ್ತೀಚೆಗೆ ಸುದ್ದಿಗೋಷ್ಠಿಗಳಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳು ತೀವ್ರ ಸ್ವರೂಪ ಪಡೆದುಕೊಂಡ ಉದಾಹರಣೆಗಳಿವೆ. ವೇದಿಕೆ ಮೇಲೆ ಕುಂತವರು ಅದಕ್ಕೆ ನೇರವಾಗಿ ತಿರುಗೇಟು ಕೊಟ್ಟಿರುವುದು ಇದೆ. ಕೆಲವೊಮ್ಮೆ ಉತ್ತರಿಸಲು ಸಾಧ್ಯವಾಗದೇ ತಬ್ಬಿಬ್ಬು ಆಗಿರುವುದು ಇದೆ. ಸದ್ಯ ತೆಲುಗು ಸಿನಿಮಾ ಕಾರ್ಯಕ್ರಮದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುತ್ತಾ ನಟಿ ಪಾಯಲ್ ರಜಪೂತ್ ಭಾವುಕರಾಗಿದ್ದಾರೆ.
ದೆಹಲಿ ಮೂಲದ ನಟಿ ಪಾಯಲ್ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. 'RX100' ಸೇರಿ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ಆಕೆ ಮಿಂಚಿದ್ದಾರೆ. ಕನ್ನಡದ 'ಹೆಡ್ ಬುಷ್' ಚಿತ್ರದಲ್ಲಿ ರೇಷ್ಮಾ ಆಗಿ ಕಾಣಿಸಿಕೊಂಡಿದ್ದರು. 'ಫಸ್ಟ್ ಟೈಂ' ಎಂಬ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಪಾಯಲ್ ಇತ್ತೀಚೆಗೆ ಭಾಗವಹಿಸಿದ್ದರು. ಈ ವೇಳೆ ಆಕೆಯ ಆರೋಗ್ಯದ ಬಗ್ಗೆ ಪ್ರಶ್ನೆ ಎದುರಾಗಿದೆ.

ತಂದೆ ಅಗಲಿಕೆ ಬಳಿಕ ಖಿನ್ನತೆಗೆ ಗುರಿಯಾಗಿ ನೀವು ಚಿಕಿತ್ಸೆ ಪಡೆದಿದ್ದು ನಿಜವೇ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಹೌದು, ಎಂದು ಮಾತು ಆರಂಭಿಸಿದ ಪಾಯಲ್ ತಮ್ಮ ತಂದೆಯನ್ನು ನೆನೆದು ಭಾವೋಗ್ವೇಗಕ್ಕೆ ಗುರಿಯಾಗಿದ್ದಾರೆ. "ಮುಂದಿನ ತಿಂಗಳು ನನ್ನ ತಂದೆ ನಿಧನರಾಗಿ ಒಂದು ವರ್ಷವಾಗುತ್ತದೆ. ಅವರು ನನ್ನ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿಯಾಗಿದ್ದರು. ಅವರು ಇಲ್ಲದೆ ಇರುವುದು ನನಗೆ ತುಂಬಾ ನೋವು ತಂದಿದೆ" ಎಂದಿದ್ದಾರೆ.
ನಮ್ಮ ತಂದೆಗೆ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅದು ನಮ್ಮ ಕುಟುಂಬಕ್ಕೆ ಬಹಳ ನೋವಿನ ಸಂಗತಿ. ಮುಖ್ಯವಾಗಿ ನಮ್ಮ ತಾಯಿಗೆ ಬಹಳ ನೋವು ತಂದಿತ್ತು. ಆ ಸಮಯದಲ್ಲಿ ಏನು ಮಾಡಬೇಕು ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ನನ್ನನ್ನು ನಾನು ನೋಡಿಕೊಳ್ಳುವುದರ ಜೊತೆಗೆ ನಮ್ಮ ತಾಯಿಯ ಬಗ್ಗೆ ಕೇರ್ ತೆಗೆದುಕೊಳ್ಳಬೇಕಿತ್ತು. ನಮ್ಮ ತಂದೆ ನನ್ನ ಹೀರೊ ಎಂದು ಹೇಳುತ್ತಾ ಪಾಯಲ್ ಗದ್ಗರಿತರಾಗಿದ್ದಾರೆ. ಕೂಡಲೇ ವೇದಿಕೆಯಲ್ಲಿದ್ದವರು ಆಕೆಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚೆಗೆ ನನ್ನ ಪಂಜಾಬಿ ಸಿನಿಮಾವೊಂದು ಬಿಡುಗಡೆ ಆಗಿತ್ತು. ಆ ಸಿನಿಮಾ ನೋಡಬೇಕು ಎಂದು ಅಪ್ಪ ಬಯಸಿದ್ದರು. ನನ್ನ ತಂದೆ ನನ್ನ ಅತ್ಯುತ್ತಮ ವಿಮರ್ಶಕರಾಗಿದ್ದರು. 'RX100' ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಿದ್ದರೂ ನನ್ನ ನಟನೆಯನ್ನು ಇಷ್ಟಪಟ್ಟಿದ್ದರು. ಜುಲೈ 28ಕ್ಕೆ ಅವರು ಕೊನೆಯುಸಿರೆಳೆದು ಒಂದು ವರ್ಷ ಆಗುತ್ತದೆ ಎನ್ನುತ್ತಾ ಪಾಯಲ್ ಕಣ್ಣೀರಾಕಿದ್ದಾರೆ. ಬಳಿಕ ಅಲ್ಲಿಂದ ಎದ್ದು ವೇದಿಕೆ ಇಳಿದು ಹೊರಟು ಹೋಗಿದ್ದಾರೆ.
ಅಂದಹಾಗೆ ಪಾಯಲ್ ತಂದೆ ವಿಮಲ್ ಕುಮಾರ್ ಕ್ಯಾನ್ಸರ್ ಸಮಸ್ಯೆಯಿಂದ ಹೈದರಾಬಾದ್‌ನಲ್ಲಿ ನಿಧನರಾಗಿದ್ದರು. "ಅಪ್ಪಾ.. ನೀನು ಕ್ಯಾನ್ಸರ್ ವಿರುದ್ಧ ಹೋರಾಡಲು ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದೆ, ಆದರೆ ನಾನು ಯಶಸ್ವಿಯಾಗಲಿಲ್ಲ. ಕ್ಷಮಿಸಿ" ಎಂದು ಪಾಯಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಪಾಯಲ್ ರಜಪೂತ್ ಪ್ರಿಯಕರ ಸೌರಭ್ ಹೀರೊ ಆಗಿ 'ಫಸ್ಟ್ ಟೈಂ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಆತನಿಗೆ ಬೆಂಬಲವಾಗಿ ನಿಲ್ಲಲು ಈ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇನ್ನು ದೆಹಲಿ ಬೆಡಗಿಗೆ ಚಿತ್ರರಂಗದಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. ಗ್ಲಾಮರ್ ಡಾಲ್ ಆಗಿಯೇ ಬಹುತೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಇತ್ತೀಚೆಗೆ ಪಾಯಲ್ ನಟಿಸಿದ್ದ 'ಲೀಡರ್' ಎಂಬ ತಮಿಳು ಸಿನಿಮಾ ಬಿಡುಗಡೆ ಆಗಿತ್ತು. ತಮಿಳಿನ 'ಗೋಲ್‌ಮಾಲ್' ಹಾಗೂ ತೆಲುಗಿನ 'ಕಿರಾತಕ' ಸಿನಿಮಾಗಳಲ್ಲಿ ಸದ್ಯ ಆಕೆ ನಟಿಸುತ್ತಿದ್ದಾರೆ.


Click it and Unblock the Notifications