Payal Rajput: "ಕಿಡ್ನಿ ಪ್ರಾಬ್ಲಂ ಆಗಿತ್ತು.. ಆತ ನನ್ನ ಲವ್ ರಿಜೆಕ್ಟ್ ಮಾಡ್ದ": ನೋವು ತೋಡಿಕೊಂಡ 'ಹೆಡ್ ಬುಷ್' ನಟಿ
ಬಹುಭಾಷಾ ನಟಿ ಪಾಯಲ್ ರಜಪೂತ್ ನಟನೆಯ 'ಮಂಗಳವಾರಂ' ತೆಲುಗು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನವೆಂಬರ್ 17ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಪಾಯಲ್ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನಟಿ ಪಾಯಲ್ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಡಾಲಿ ಧನಂಜಯ ನಿರ್ಮಿಸಿ ನಟಿಸಿದ 'ಹೆಡ್ ಬುಷ್' ಚಿತ್ರದಲ್ಲಿ ರೇಷ್ಮಾ ಆಗಿ ಆಕೆ ಮಿಂಚಿದ್ದರು. ತೆಲುಗಿನ 'ಆರ್‌ಎಕ್ಸ್ 100' ಸಿನಿಮಾ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಹಲವು ಸಿನಿಮಾಗಳಲ್ಲಿ ಮಿಂಚಿದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬೋಲ್ಡ್ ಫೋಟೊಶೂಟ್‌ಗಳಿಂದಲೂ ಗಮನ ಸೆಳೆಯುತ್ತಾರೆ.

'ಮಂಗಳವಾರಂ' ಸಿನಿಮಾ ಪ್ರಚಾರದ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಫಸ್ಟ್ ಲವ್ ಬಗ್ಗೆ ಹೇಳಿಕೊಂಡಿದ್ದಾರೆ. ಹೈಸ್ಕೂಲ್‌ನಲ್ಲಿ ಇದ್ದಾಗಲೇ ಒಬ್ಬ ಹುಡುಗನನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ ಆತ ನನ್ನನ್ನು ರಿಜೆಕ್ಟ್ ಮಾಡಿಬಿಟ್ಟ ಎಂದು ಪಾಯಲ್ ನೆನಪಿಸಿಕೊಂಡಿದ್ದಾರೆ.
ಓದುವ ದಿನಗಳಲ್ಲಾಗಲಿ ಅಥವಾ ಚಿತ್ರರಂಗದಲ್ಲಾಗಲಿ ನಿಮ್ಮ ಕ್ರಶ್ ಯಾರು? ಎನ್ನುವ ಪ್ರಶ್ನೆಗೆ "ಶಾಲಾ ದಿನಗಳಲ್ಲಿ ನಾನು ಒಬ್ಬ ಹುಡುಗನನ್ನು ಪ್ರೀತಿಸಿದೆ. ಅವನನ್ನು ನೋಡಿದಾಗ ತಿಳಿಯದ ಆನಂದ. ಎಸ್‌ಎಸ್‌ಎಲ್‌ಸಿ ಕೊನೆ ದಿನಗಳಲ್ಲಿ ನಾನು ನನ್ನ ಪ್ರೀತಿಯನ್ನು ಆತನ ಬಳಿ ವ್ಯಕ್ತಪಡಿಸಿದಾಗ ಅವನು ನನ್ನನ್ನು ತಿರಸ್ಕರಿಸಿದ. ನನಗೆ ಪ್ರೇಮ, ಪ್ರೀತಿಯಲ್ಲಿ ಆಸಕ್ತಿ ಇಲ್ಲ ಎಂದುಬಿಟ್ಟ. ಆ ನೋವಿನಿಂದ ನನಗೆ ನನ್ನ ಓದಿನತ್ತ ಗಮನಹರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದೆ. ಈ ವಿಚಾರವನ್ನು ನನ್ನ ತಾಯಿ ಬಳಿ ಹೇಳಿಕೊಂಡು ಅತ್ತುಬಿಟ್ಟಿದೆ. ಆಕೆ ನನ್ನ ಬೆಂಬಲಕ್ಕೆ ನಿಂತಳು" ಎಂದು ಪಾಯಲ್ ಹೇಳಿದ್ದಾರೆ.
'ಮಂಗಳವಾರಂ' ಸಿನಿಮಾ ಚಿತ್ರೀಕರಣದ ವೇಳೆಗೆ ಕಿಡ್ನಿ ಸಮಸ್ಯೆಯಿಂದ ಬಳಲಿದೆ. ಜೀವನದಲ್ಲಿ ಬಹಳ ನೋವುಂಡ ಕ್ಷಣಗಳು ಅದೇ ಎನ್ನಬಹುದು. ನೀರು ಕಡಿಮೆ ಕುಡಿಯುತ್ತಿದ್ದರಿಂದ ಕಿಡ್ನಿ ಸಮಸ್ಯೆ ಉಂಟಾಗಿತ್ತು. ದಯವಿಟ್ಟು ಎಲ್ಲರೂ ಹೆಚ್ಚು ಹೆಚ್ಚು ನೀರು ಕುಡಿಯಿರಿ ಎಂದು ಪಾಯಲ್ ಮನವಿ ಮಾಡಿದ್ದಾರೆ. ಕಿಡ್ನಿ ಸಮಸ್ಯೆ ಬಗ್ಗೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ದೆಹಲಿ ಬೆಡಗಿ ಬರೆದುಕೊಂಡಿದ್ದರು.
ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ 'ಮಂಗಳವಾರಂ' ಚಿತ್ರದ ಶೈಲಜಾ ಎನ್ನುವ ಪಾತ್ರದಲ್ಲಿ ಪಾಯಲ್ ಬಣ್ಣ ಹಚ್ಚಿದ್ದಾರೆ. ಅಜಯ್ ಭೂಪತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ನಂದಿತಾ ಶ್ವೇತಾ ಕೂಡ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಬೆಂಗಳೂರು ಮೂಲದ ನಂದಿತಾ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ 'ಮಂಗಳವಾರಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ದೆಹಲಿಯಲ್ಲಿ ಹುಟ್ಟಿ ಬೆಳೆದ ಪಾಯಲ್ ರಜಪೂತ್, 'ಚನ್ನಾ ಮೆರಿಯಾ' ಎನ್ನುವ ಪಂಜಾಬಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಬಳಿಕ ಒಂದೇ ಒಂದು ಹಿಂದಿ ಚಿತ್ರದಲ್ಲಿ ಮಿಂಚಿದರು. ಅಲ್ಲಿಂದ ಮುಂದೆ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ಗೋಲ್ಮಾಲ್', 'ಏಂಜಲ್', ತೆಲುಗಿನ 'ಕಿರಾತಕ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











