'ಪೆದ್ದಿ' ರಾಮ್‌ಚರಣ್ ಹೊಸ ಬಾಡಿಗಾರ್ಡ್ MMA ಫೈಟರ್; ಈತನ ದಿನದ ಸಂಭಾವನೆ ಎಷ್ಟು ಗೊತ್ತಾ?
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದು ಚಿತ್ರತಂಡ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ಶಿವಣ್ಣ ಕೂಡ ಸಾಥ್ ನೀಡಿದ್ದರು. ಈ ವೇಳೆ ರಾಮ್‌ಚರಣ್ ಜೊತೆ ಬೆನ್ನಿಗೆ ನಿಂತಿದ್ದ ಬಾಡಿಗಾರ್ಡ್ ಬಹಳ ಗಮನ ಸೆಳೆದಿದ್ದರು.
ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟ ರಾಮ್‌ಚರಣ್. ತಂದೆ ಮೆಗಾಸ್ಟಾರ್ ಚಿರಂಜೀವಿ ದಶಕಗಳಿಂದ ತೆಲುಗು ಚಿತ್ರರಂಗದಲ್ಲಿದ್ದಾರೆ. ಹಿಟ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಕೋಟಿ ಕೋಟಿ ಸಂಪಾದಿಸಿದ್ದಾರೆ. ಅವರ ನೂರಾರು ಕೋಟಿ ಆಸ್ತಿಗೆ ರಾಮ್‌ಚರಣ್ ವಾರಸ್ದಾರ. ಇನ್ನು ರಾಮ್‌ಚರಣ್ ಪತ್ನಿ ಉಪಾಸನಾ ಹಿನ್ನೆಲೆ ಬಗ್ಗೆ ಹೇಳುವುದು ಬೇಡ. ಅಪೋಲೊ ಸಂಸ್ಥೆ ಸ್ಥಾಪಕ ಡಾ. ಪ್ರತಾಪ್ ಸಿ. ರೆಡ್ಡಿ ಮೊಮ್ಮಗಳು. ಇನ್ನು ಚಿತ್ರವೊಂದಕ್ಕೆ ರಾಮ್‌ಚರಣ್ 100 ಕೋಟಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಲೈಫ್‌ಸ್ಟೈಲ್ ಇರುತ್ತದೆ. ಪ್ರೈವೇಟ್ ಜೆಟ್, ಐಷಾರಾಮಿ ಕಾರುಗಳು, ಬಂಗಲೆ ಎಲ್ಲವೂ ಇದೆ.

ರಾಮ್‌ಚರಣ್ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಪೆದ್ದಿ' ಸಿನಿಮಾ ಈವೆಂಟ್‌ನಲ್ಲಿ ಕೂಡ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟನಿಗೆ ಜೈಕಾರ ಹಾಕಿದರು. ಅವರನ್ನು ನೋಡಲು, ಕೈ ಕುಲುಕಲು ಮುಗಿಬಿದ್ದರು. ಅವರನ್ನು ವೇದಿಕೆಯಿಂದ ಹೊರಗೆ ಕರೆದುಕೊಂಡು ಬರುವುದೇ ಕಷ್ಟವಾಗಿತ್ತು. ಇಂತಹ ಸಮಯಗಳಲ್ಲಿ ಬಾಡಿಗಾರ್ಡ್ಸ್, ಬೌನ್ಸರ್ಸ್ ಸಹಾಯ ಬೇಕಾಗುತ್ತದೆ. ಇತ್ತೀಚೆಗೆ ರಾಮ್‌ಚರಣ್ ಬೆನ್ನಿಗೆ ನಿಲ್ಲುತ್ತಿರುವ ಹೊಸ ಬಾಡಿಗಾರ್ಡ್ ಎಲ್ಲರ ಗಮನ ಸೆಳೆದಿದ್ದಾರೆ.
MMA ಫೈಟರ್ ಕೆವಿನ್ ಕುಂಟಾ ಅವರನ್ನು ರಾಮ್‌ಚರಣ್ ಈಗ ಬಾಡಿಗಾರ್ಡ್ ಆಗಿ ನೇಮಿಸಿಕೊಂಡಿದ್ದಾರೆ. ಅದಕ್ಕಾಗಿ ಆತನಿಗೆ ಭಾರೀ ಸಂಭಾವನೆ ಕೊಡುತ್ತಿದ್ದಾರೆ. ಇದೇ ವಿಚಾರ ಈಗ ಟಾಕ್ ಆಫ್ ದ ಟೌನ್ ಆಗಿದೆ. ರಾಮ್‌ಚರಣ್ ಆತನಿಗೆ ದಿನಕ್ಕೆ 2ರಿಂದ 4 ಲಕ್ಷ ರೂ. ಸಂಭಾವನೆ ಕೊಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಆ ಲೆಕ್ಕದಲ್ಲಿ ತಿಂಗಳಿಗೆ 1 ಕೋಟಿ ರೂ.ವರೆಗೆ ಸಂಭಾವನೆ ಸಿಗುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆವಿನ್ ಈಗ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಸೆಕ್ಯುರಿಟಿ ಗಾರ್ಡ್ ಎಂದು ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾ ಮೂಲದ ಕೆವಿನ್ ಕುಂಟಾ ಸದ್ಯ ಫ್ಲಾರೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್(MMA) ಅಖಾಡದಲ್ಲಿ ಗುರ್ತಿಸಿಕೊಂಡಿದ್ದಾರೆ. ಫೈಟಿಂಗ್ ಮಾತ್ರವಲ್ಲ ಅಂತರರಾಷ್ಟ್ರೀಯ VIP ಮತ್ತು ಸೆಲೆಬ್ರಿಟಿ ರಕ್ಷಣಾ ಕಾರ್ಯಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿರಂಜೀವಿ ಜೊತೆ ಜಿಮ್‌ನಲ್ಲಿ ಕೆವಿನ್ ವರ್ಕ್‌ಔಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಸ್ಟಾರ್ ನಟ, ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುಗಿಬೀಳುವುದು, ಕೈ ಕುಲುಕಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಪ್ರತ್ನಿಸುತ್ತಾರೆ. ಕೆಲವೊಮ್ಮೆ ಕಿಡಿಗೇಡಿಗಳಿಂದಲೂ ಸಮಸ್ಯೆ ಎದುರಾಗಬಹುದು ಇಂತಹ ಸಮಯದಲ್ಲಿ ಬಾಡಿಗಾರ್ಡ್ ಬಹಳ ಅವಶ್ಯಕವಾಗುತ್ತದೆ. ಸ್ಟಾರ್ ನಟ, ನಟಿಯರು ಪರ್ಸನಲ್ ಬಾಡಿಗಾರ್ಡ್ ಇಟ್ಟುಕೊಂಡಿರುತ್ತಾರೆ. ಅವರು ಎಲ್ಲೇ ಹೋದರೂ ಬಂದರು ಬಾಡಿಗಾರ್ಡ್ಸ್ ರಕ್ಷಣೆಗೆ ನಿಲ್ಲುತ್ತಾರೆ. ಸಕಲ ಸೌಲಭ್ಯಗಳ ಜೊತೆಗೆ ಭಾರೀ ಸಂಭಾವನೆ ಕೂಡ ಕೊಡುತ್ತಾರೆ.
ಚಂದನವನದಲ್ಲಿ ಕಿರಣ್ ಎಂಬುವವರು ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ನಟ ಯಶ್ ಬೆನ್ನಿಗೆ ಬಾಡಿ ಬಿಲ್ಡರ್ ಶ್ರೀನಿವಾಸ್ ನಿಲ್ಲುತ್ತಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಪ್ರಭಾಸ್ ಹೀಗೆ ಸ್ಟಾರ್ ನಟರೆಲ್ಲಾ ಭಾರೀ ಸಂಭಾವನೆ ಕೊಟ್ಟು ಪರ್ಸನಲ್ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆ.
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಚಿತ್ರದಲ್ಲಿ ಹಳ್ಳಿ ಕ್ರಿಕೆಟರ್, ಕುಸ್ತಿ ಪೈಲ್ವಾನ್ ಆಗಿ ಚರಣ್ ಅಬ್ಬರಿಸಿದ್ದಾರೆ. ಅವರ ಗುರುವಿನ ಪಾತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ನಟಿಸಿರುವುದು ವಿಶೇಷ.


Click it and Unblock the Notifications