'ಪೆದ್ದಿ' ಬಿಡುಗಡಗೆ ವಿಘ್ನ, ರಾಮ್‌ಚರಣ್ ಹಾಗೂ ಶಿವಣ್ಣ ಅಭಿಮಾನಿಗಳಲ್ಲಿ ಗೊಂದಲ
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರತಂಡ ಹೊಸ ತಲೆನೋವು ಶುರುವಾಗಿದೆ. ಸಿನಿಮಾ ವ್ಯವಹಾರದಲ್ಲಿ ಪರ್ಸಂಟೇಜ್ ವಿಚಾರ ಮತ್ತೆ ಚರ್ಚೆ ಹುಟ್ಟು ಹಾಕಿದೆ. ತೆಲಂಗಾಣದ ಚಿತ್ರ ಪ್ರದರ್ಶಕರು ಕ್ಯಾತೆ ತೆಗೆದಿದ್ದು ಜೂನ್ 4ರಂದು 'ಪೆದ್ದಿ' ಸಿನಿಮಾ ಬಿಡುಗಡೆ ಅನುಮಾನ ಎನ್ನುವಂತಾಗಿದೆ. ಸಹಜವಾಗಿಯೇ ರಾಮ್‌ಚರಣ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗ್ತಿದೆ.
ತೆಲುಗು ಚಿತ್ರರಂಗದಲ್ಲಿ 'ಪರ್ಸೆಂಟೇಜ್ vs ರೆಂಟಲ್' ವಿವಾದ ಹೊಸದೇನು ಅಲ್ಲ. ಆಗಾಗ್ಗೆ ಮಾತುಕತೆ ನಡೆಸಿ ಇದನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ದೊಡ್ಡ ಸಿನಿಮಾಗಳ ಬಿಡುಗಡೆ ಹೊಸ್ತಿಲಲ್ಲಿ ಮತ್ತೆ ಕಿರಿಕ್ ಶುರುವಾಗುತ್ತದೆ. ಮತ್ತೆ ಮುನ್ನೆಲೆಗೆ ಬಂದಿದೆ. ಚಿತ್ರಮಂದಿರಗಳ ಮಾಲೀಕರು(ಪ್ರದರ್ಶಕರು) ಶನಿವಾರ(ಮೇ 23), ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಪರ್ಸಂಟೇಜ್ ಕೊಟ್ಟರೆ ಮಾತ್ರ 'ಪೆದ್ದಿ' ಸೇರಿದಂತೆ ಯಾವುದೇ ಚಿತ್ರ ಪ್ರದರ್ಶನ ಮಾಡ್ತೀವಿ, ಇಲ್ಲದಿದ್ದರೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ಹಿಂದೆ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಕೂಡ ಇದೇ ರೀತಿಯ ಚರ್ಚೆ ಮುನ್ನಲೆಗೆ ಬಂದಿತ್ತು. ಆಗ ಎಲ್ಲಾ ಮಾತುಕತೆ ನಡೆಸಿ ಬಗೆಹರಿಸುತ್ತೇವೆ ಎಂದು ನಿರ್ಮಾಪಕರ ಸಂಘ ಹೇಳಿತ್ತು. ಹಾಗಾಗಿ ಆ ಸಿನಿಮಾ ಪ್ರದರ್ಶನ ಮಾಡಿದ್ದೆವು. ವರ್ಷ ಕಳೆದರೂ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿದಿಲ್ಲ. ಹಾಗಾಗಿ 'ಪೆದ್ದಿ' ಸಿನಿಮಾ ಪ್ರದರ್ಶನ ಮಾಡಲು ಬಿಡುವುದಿಲ್ಲ, ಪರ್ಸೆಂಟೇಜ್ ಕೊಡಲೇಬೇಕು ಎನ್ನುತ್ತಿದ್ದಾರೆ. ರಾಮ್‌ಚರಣ್ ಸಿನಿಮಾ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ನಿರ್ಮಾಪಕರೆಲ್ಲಾ ಚರ್ಚಿಸಿ ಎಷ್ಟು ಪರ್ಸಂಟೇಜ್ ಕೊಡ್ತೀವಿ ಎನ್ನುವುದು ಹೇಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇದೇ ಮೊದಲಲ್ಲ. 2008ರಿಂದಲೂ ನಾವು ಪರ್ಸಂಟೇಜ್ ಬೇಡಿಕೆ ಮುಂದಿಟ್ಟಿದ್ದೇವೆ. ದೇಶದಲ್ಲಿ ಎಲ್ಲಾ ಕಡೆ ಪರ್ಸಂಟೇಜ್ ಮಾದರಿ ಚಾಲ್ತಿಯಲ್ಲಿದೆ. ಇಲ್ಲಿ ಮಾತ್ರ ರೆಂಟಲ್ ಸಿಸ್ಟಮ್ ಇದೆ. 10-15 ವರ್ಷಗಳ ಹಿಂದೆ ಪ್ರದರ್ಶಕರಿಗೆ ಒಳ್ಳೆ ಆದಾಯ ಇತ್ತು. ಆದರೆ ಈಗ ಇಲ್ಲ. ನಿರ್ಮಾಪಕರು ಮಾತ್ರ ಟಿವಿ, ಓಟಿಟಿ ರೈಟ್ಸ್ ಜೊತೆಗೆ ಥಿಯೇಟರ್ ಕಲೆಕ್ಷನ್ ಮೂಲಕ ಒಳ್ಳೆ ಲಾಭ ಮಾಡುತ್ತಿದ್ದಾರೆ. 100ಕ್ಕೂ ಅಧಿಕ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ. ಪರ್ಸಂಟೇಜ್ ಬೇಕು ಅಂದ್ರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಗ್ರೇಡಿಂಗ್ ಮಾಡಬೇಕು ಎನ್ನುವುದಕ್ಕೆ ಪ್ರದರ್ಶಕರು ಒಪ್ಪುತ್ತಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲಿ ಗ್ರೇಡಿಂಗ್ ತರ್ತೀರಾ ಎಂದು ಪ್ರಶ್ನಿಸಿದ್ದಾರೆ.

'ಪೆದ್ದಿ' ಸಿನಿಮಾ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಈಗ ಬಿಟ್ಟರೆ ಮತ್ತೆ ನಮ್ಮನ್ನು ಯಾರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಈಗ ಸಮಸ್ಯೆ ಇತ್ಯರ್ಥ ಮಾಡಿ ಎಂದು ಕೇಳುತ್ತಿದ್ದಾರೆ. ಸದ್ಯ ತೆಲುಗು ಚಲನಚಿತ್ರ ಮಂಡಳಿ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು 'ಪೆದ್ದಿ' ಸಿನಿಮಾ ಬಿಡುಗಡೆ ಹಾದಿ ಸುಗಮವಾಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. 'ಪೆದ್ದಿ' ಚಿತ್ರಕ್ಕೆ ಬುಚ್ಚಿಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.
80ರ ದಶಕದ ಹಳ್ಳಿ ಹಿನ್ನಲೆಯ ಕಥೆ ಚಿತ್ರದಲ್ಲಿದೆ. ಕ್ರಿಕೆಟರ್, ಕುಸ್ತಿ ಪೈಲ್ವಾನ್ ಆಗಿ ರಾಮ್‌ಚರಣ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಚಿತ್ರದಲ್ಲಿ ನಾಯಕನ ಗುರುವಿನ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಭೋಪಾಲ್‌ನಲ್ಲಿ ಭಾರೀ ಈವೆಂಟ್ ಮಾಡಿ 'ಪೆದ್ದಿ' ಸಿನಿಮಾ ಪ್ರಚಾರ ಮಾಡಲಾಗಿದೆ.


Click it and Unblock the Notifications