Peddi Song: 'ರೈ ರೈ ರಾರಾ' ಅಂತ ಎ. ಆರ್ ರಹಮಾನ್ ಜೊತೆ ಮತ್ತೆ ಸಿಕ್ಸರ್ ಸಿಡಿಸಿದ 'ಪೆದ್ದಿ' ರಾಮ್‌ಚರಣ್
ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಒಂದು ತಿಂಗಳು ತಡವಾಗಿ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಚಿಕ್ಕಿರಿ ಸಾಂಗ್ ಮೂಲಕ ನಿರೀಕ್ಷೆ ಹುಟ್ಟಾಕ್ಕಿರುವ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ರೈ ರೈ ರಾರಾ' ಅಂತ ರಾಮ್‌ಚರಣ್ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ.
ಎ. ಆರ್ ರಹಮಾನ್ ಸಂಗೀತದಲ್ಲಿ 'ಪೆದ್ದಿ' ಚಿತ್ರದ ಸಾಂಗ್ಸ್ ಸದ್ದು ಮಾಡ್ತಿವೆ. ಕೊಂಚ ತಡವಾಗಿ ಚಿತ್ರದ 2ನೇ ಸಾಂಗ್ ರಿಲೀಸ್ ಆಗಿದೆ. ಮೆಗಾ ಪವರ್ ಸ್ಟಾರ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಹಾಗೂ ಅಷ್ಟೇ ರಗಡ್ ಆಗಿ ಸಾಂಗ್ ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿ 80-90ರ ದಶಕದ ಕಥೆ ಹೇಳಲಾಗ್ತಿದೆ. 30 ವರ್ಷಗಳ ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಗಳ ಸುತ್ತಾ ನಾಯಕ 'ಪೆದ್ದಿ' ಸಾಗುವಂತೆ ಕಾಣ್ತಿದೆ. 'ರೈ ರೈ ರಾರಾ' ಸಾಂಗ್‌ನಲ್ಲಿ ಕೂಡ ಕ್ರಿಕೆಟ್ ವಿಚಾರ ಹೈಲೆಟ್ ಆಗಿದೆ. ಈ ಹಿಂದೆ ಬಂದಿದ್ದ ಟೀಸರ್‌ನಲ್ಲಿ ರಾಮ್‌ಚರಣ್ ವಿಭಿನ್ನವಾಗಿ ಮುಂದೆ ಬಂದು ಸಿಕ್ಸರ್ ಸಿಡಿಸುವ ಝಲಕ್ ಹೈಲೆಟ್ ಆಗಿತ್ತು. ಈ ಸಾಂಗ್ ಕೊನೆಯಲ್ಲಿ ಅಂಥದ್ದೇ ಮತ್ತೊಂದು ಶಾಟ್ ಇಟ್ಟಿದ್ದಾರೆ. ಅದು ಅಭಿಮಾನಿಗಳ ಗಮನ ಸೆಳೆದಿದೆ.
ಅನಂತ ಶ್ರೀರಾಮ್ ಸಾಹಿತ್ಯ ಬರೆದಿರುವ 'ರೈ ರೈ ರಾರಾ' ಸಾಂಗ್ ಅನ್ನು ಸ್ವತಃ ಎ. ಆರ್ ರಹಮಾನ್ ಹಾಡಿದ್ದಾರೆ. 'ಚಿಕ್ಕಿರಿ' ಬಳಿಕ 2ನೇ ಸಾಂಗ್ ಕೂಡ ಹಿಟ್ ಲಿಸ್ಟ್ ಸೇರುವ ಸುಳಿವು ಸಿಕ್ತಿದೆ. ಅಭಿಮಾನಿಗಳು ಪದೇ ಪದೆ ಸಾಂಗ್ ನೋಡಿ, ಕೇಳಿ ಎಂಜಾಯ್ ಮಾಡುತ್ತಿದ್ದಾರೆ. ಏಪ್ರಿಲ್ 30ರಂದು 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ.
ಮಾರ್ಚ್ 27ಕ್ಕೆ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಮಾರ್ಚ್ 19ರಂದು 'ಟಾಕ್ಸಿಕ್' ಹಾಗೂ 'ಧುರಂಧರ್' ಬಾಕ್ಸಾಫೀಸ್ ಕ್ಲ್ಯಾಶ್ ಪಕ್ಕಾ ಎಂದು ಗೊತ್ತಾದ ಬಳಿಕ 'ಪೆದ್ದಿ' ರಿಲೀಸ್ ಒಂದು ತಿಂಗಳು ಮುಂದೂಡಲಾಯಿತು. 'ಪೆದ್ದಿ' ಬದಲು ಮಾರ್ಚ್ ಕೊನೆ ವಾರದಲ್ಲಿ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗಪ್ಪಳಿಸಲಿದೆ.
'RRR' ಬಳಿಕ ರಾಮ್‌ಚರಣ್ ನಟಿಸಿದ ಸಿನಿಮಾಗಳು ಗೆಲ್ಲುತ್ತಿಲ್ಲ. ಕಳೆದ ವರ್ಷ ಬಂದಿದ್ದ 'ಗೇಮ್ ಚೇಂಜರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಹಾಗಾಗಿ ಒಂದೊಳ್ಳೆ ಬ್ರೇಕ್‌ಗಾಗಿ ಚರಣ್ ಕಾಯುವಂತಾಗಿದೆ. 'ಪೆದ್ದಿ' ಆಗಿ ಕಂಡಿತ ಕಂಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ದಿವ್ಯೇದು, ಜಗಪತಿ ಬಾಬು, ಬೊಮನ್ ಇರಾನಿ, ಸತ್ಯ ಹೀಗೆ ದೊಡ್ಡ ತಾರಾಗಣವಿದೆ. 'ಉಪ್ಪೆನ' ಬಳಿಕ ಬುಚ್ಚಿಬಾಬು ಕಟ್ಟಿಕೊಡುತ್ತಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಸದ್ಯ 'ಪೆದ್ದಿ' ಚಿತ್ರದ ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.
ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಸುಕುಮಾರ್ ಗರಡಿಯಲ್ಲಿ ಪಳಗಿರುವ ಬುಚ್ಚಿಬಾಬು ನಿರ್ದೇಶನದ ಸಿನಿಮಾ ಆಗಿರುವುದರಿಂದ ಕುತೂಹಲ ಮೂಡಿದೆ. 'ಗೇಮ್ ಚೇಂಜರ್' ಚಿತ್ರದಲ್ಲಿ ಇಂತಾದೊಂದು ಸಾಂಗ್ ಇರಲಿಲ್ಲ. ಶಂಕರ್ ಒಂದೊಳ್ಳೆ ಅವಕಾಶ ಮಿಸ್ ಮಾಡಿಕೊಂಡರು. ಈ ಸಲ ಸಿನಿಮಾ ಗೆಲ್ಲೋದು ಪಕ್ಕಾ, ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡೊಕೆ ಹೋಗ್ತೀವಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











