'ಪೆದ್ದಿ' ಚಿತ್ರದಲ್ಲಿ ಗೌರ್ನಾಯ್ಡು ಆಗಿ ಶಿವಣ್ಣ ಬದ್ಲು ಈ ನಟ ನಟಿಸಿದ್ರೆ ನೋಡಬೇಕಿತ್ತು!
ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದ ಶಿವರಾಜ್‌ಕುಮಾರ್ ಒಂದೊಳ್ಳೆ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚಿತ್ರದಲ್ಲಿ ಬಹಳ ಮಹತ್ವವಾದ ಕುಸ್ತಿ ಉಸ್ತಾದ್ ಗೌರ್ನಾಯ್ಡು ಪಾತ್ರದಲ್ಲಿ ಶಿವಣ್ಣ ಕಮಾಲ್ ಮಾಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಸೆಂಚುರಿ ಸ್ಟಾರ್ ನಟನೆಯನ್ನು ಕೊಂಡಾಡುತ್ತಿದ್ದಾರೆ. ಪಟ್ಟು ಹಿಡಿದು ಶಿವಣ್ಣನಿಂದ ಪಾತ್ರ ಮಾಡಿಸಿ ಬುಚ್ಚಿಬಾಬು ಗೆದ್ದಿದ್ದಾರೆ.
ಚಿತ್ರದಲ್ಲಿ ರಾಮ್‌ಚರಣ್ ಬಿಟ್ಟರೆ ಹೆಚ್ಚು ನೆನಪಿನಲ್ಲಿ ಉಳಿಯುವುದು ಶಿವಣ್ಣ ಪಾತ್ರ. ಈ ಹಿಂದೆ ಗೌತಮಿಪುತ್ರ ಶಾತಕರ್ಣಿ ಚಿತ್ರದ ಹಾಡಿನಲ್ಲಿ ಅವರು ಹೆಜ್ಜೆ ಹಾಕಿದ್ದರು. 'ಪೆದ್ದಿ' ತೆಲುಗಿನಲ್ಲಿ ಶಿವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಎನ್ನಬಹುದು. ಗೌರ್ನಾಯ್ಡು ಆಗಿ ಹ್ಯಾಟ್ರಿಕ್ ಹೀರೊ ನಟನೆ ಚೆನ್ನಾಗಿದೆ. ಆದರೆ ಅವರಿಗಿಂತ ನಮ್ಮ ಶ್ರೀಹರಿ ನಟಿಸಿದ್ರೆ ಇನ್ನು ಚೆನ್ನಾಗಿ ಇರ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗಿದೆ. 4 ದಿನಕ್ಕೆ ಸಿನಿಮಾ 292 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ರಾಮ್‌ಚರಣ್ ನಟನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ರಾಮ್‌ಚರಣ್ ಬಿಟ್ಟರೆ ಶಿವಣ್ಣನಿಗೆ ಹೆಚ್ಚು ಸ್ಕ್ರೀನ್‌ಸ್ಪೇಸ್ ಸಿಕ್ಕಿದೆ. ಅದನ್ನು ಅಷ್ಟೆ ಸೊಗಸಾಗಿ ಬಳಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಕುಸ್ತಿ ಉಸ್ತಾದ್ ರೀತಿಯ ಇಂತಹ ಪಾತ್ರಗಳಿಗೆ ಶ್ರೀಹರಿ ಸೂಕ್ತ. ಕೆಲ ತೆಲುಗು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಗಧೀರ ಚಿತ್ರದಲ್ಲಿ ಕೂಡ ರಾಮ್‌ಚರಣ್ ಹಾಗೂ ಶ್ರೀಹರಿ ಕಾಂಬಿನೇಷನ್ ಮ್ಯಾಜಿಕ್ ಮಾಡಿತ್ತು. 'ಪೆದ್ದಿ' ಚಿತ್ರದಲ್ಲಿ ಕೂಡ ಅವ್ರು ನಟಿಸಿದ್ರೆ ಚೆನ್ನಾಗಿ ಇರ್ತಿತ್ತು ಎಂದು ಅಭಿಮಾನಿಗಳ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 13 ವರ್ಷಗಳ ಹಿಂದೆ ಶ್ರೀಹರಿ ನಿಧನರಾಗಿದ್ದರು. 'ಪೆದ್ದಿ' ಸಿನಿಮಾ ನೋಡಿ ಅಭಿಮಾನಿಗಳನ್ನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಹರಿದಾಡ್ತಿದೆ.

ಚಿರಂಜೀವಿ ಹಾಗೂ ಶ್ರೀಹರಿ ಕುಟುಂಬದ ನಡುವೆ ಆತ್ಮೀಯ ಒಡನಾಟ ಇತ್ತು. ಶ್ರೀಹರಿ ಜಿಮ್ ಮಾಡಿ ದೇಹವನ್ನು ಹುರಿಗಟ್ಟಿದ್ದರು. ಚಿಕ್ಕಂದಿನಲ್ಲಿ ಜಿಮ್ ಕರಸತ್ತು ಕಲಿಯಲು ರಾಮ್‌ಚರಣ್ ಶ್ರೀಹರಿ ಮನೆಗೂ ಹೋಗುತ್ತಿದ್ದರು. 'ಮಗಧೀರ' ಚಿತ್ರದಲ್ಲಿ ಶೇರ್ ಖಾನ್ ಹಾಗೂ ಸೋಲೊಮಾನ್ ಆಗಿ ದ್ವಿಪಾತ್ರದಲ್ಲಿ ರಾಮ್‌ಚರಣ್‌ಗೆ ಸಾಥ್ ಕೊಟ್ಟಿದ್ದರು. 'ಪೆದ್ದಿ' ಚಿತ್ರದಲ್ಲಿ ಶಿವಣ್ಣ ಅವರಿಗಾಗಿಯೇ ಚಿತ್ರಿಸಿದ ಪಾತ್ರ ಗೌರ್ನಾಯ್ಡು ಎಂದು ನಿರ್ದೇಶಕ ಬುಚ್ಚಿಬಾಬು ಕೂಡ ಹೇಳಿದ್ದರು.
ಈ ಪಾತ್ರ ಮಾಡೋಕೆ ತೆಲುಗಿನಲ್ಲಿ ಸಾಕಷ್ಟು ಕಲಾವಿದರು ಇದ್ದರು. ಆದರೂ ಎಲ್ಲರನ್ನು ಬಿಟ್ಟು ಶಿವಣ್ಣ ಆಯ್ಕೆ ಯಾಕೆ ಎನ್ನುವ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಬುಚ್ಚಿಬಾಬು ಪ್ರತಿಕ್ರಿಯಿಸಿದ್ದರು. "ನಮ್ಮ ನಟರಿಗಿರುವ ಸ್ಟಾರ್ ಇಮೇಜ್ ನೋಡಿದ್ರೆ, ಪ್ರೇಕ್ಷಕರು ಸಿನಿಮಾ ಮೂಡ್ ಇಂದ ಹೊರಗೆ ಬಂದುಬಿಡುತ್ತಾರೆ ಅನಿಸಿತು. ಗೊತ್ತಿಲ್ಲದ ನಟ ಆಗಿದ್ರೆ ಜನ ಕಥೆಯಿಂದ ಹೊರಗಡೆ ಬರಲ್ಲ ಎನ್ನುವ ಕಾರಣಕ್ಕೆ ಶಿವರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡೆ. ಕನ್ನಡದಲ್ಲಿ ಅವ್ರು ದೊಡ್ಡ ಸ್ಟಾರ್, ಆದರೂ ಪೋಷಕ ಪಾತ್ರ ಅಂದಾಗ ಒಪ್ಪಿಕೊಂಡ್ರು" ಎಂದಿದ್ದರು.
ಶಿವಣ್ಣ ಈಗಾಗಲೇ ತೆಲುಗು, ತಮಿಳು ಸಿನಿಮಾಗಳನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. 'ಪೆದ್ದಿ' ಬಳಿಕ 'ಗುಮ್ಮಡಿ ನರಸಯ್ಯ' ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಈ ಬಯೋಪಿಕ್ ಸಿನಿಮಾ ನಿರ್ಮಾಣವಾಗಲಿದೆ. ಆಂಧ್ರದ ಸರಳ ಸಜ್ಜನ ವ್ಯಕ್ತಿತ್ವದ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವರಾಜ್‌ಕುಮಾರ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications