ರಾಮ್‌ಚರಣ್ 'ಪೆದ್ದಿ' ನೋಡಿ ಪೇಪರ್ ತೂರಿದ ಪತ್ನಿ ಉಪಾಸನಾ; ಮುಗಿಲು ಮುಟ್ಟಿದ ಫ್ಯಾನ್ಸ್ ಸೆಲೆಬ್ರೇಷನ್
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಆರ್ಭಟ ಜೋರಾಗಿದೆ. ಅಭಿಮಾನಿಗಳು ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಮೆಗಾ ಫ್ಯಾಮಿಲಿ ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದೆ. ಸಂದೀಪ್ ರೆಡ್ಡಿ ವಂಗಾ ಸೇರಿ ಕೆಲ ತಾರೆಯರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಮ್‌ಚರಣ್ ಪತ್ನಿ ಉಪಾಸನಾ ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.
ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ 'ಪೆದ್ದಿ' ಸಿನಿಮಾ ಬಿಡುಗಡೆಯಾಗಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಐಪಿಎಲ್ ಹಿನ್ನೆಲೆ ಕಳೆದ 2 ತಿಂಗಳಿಂದ ದೊಡ್ಡ ಸಿನಿಮಾಗಳು ತೆರೆಗೆ ಬಂದಿರಲಿಲ್ಲ. ಆ ಬರವನ್ನು 'ಪೆದ್ದಿ' ನೀಗಿಸಿದ್ದಾನೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಒಂದು ದಿನ ಮೊದಲೇ ನಡೆದ ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಕರ್ನಾಟಕದಲ್ಲಿ ಕೂಡ 'ಪೆದ್ದಿ' ದರ್ಬಾರ್ ಜೋರಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ ರಾಜ್ಯದಲ್ಲಿ 2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಸಾಕಷ್ಟು ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ಆಂಧ್ರ, ತೆಲಂಗಾಣದ ಚಿತ್ರಮಂದಿರಗಳ ಅಂಗಳದಲ್ಲಿ ಮೆಗಾ ಫ್ಯಾನ್ಸ್ ಕಾರುಬಾರು ಗಮನ ಸೆಳೆಯಿತು. ಚಿತ್ರಮಂದಿರಗಳ ಪರದೆಗಳ ಮುಂದೆ ಹೋಗಿ ಡ್ಯಾನ್ಸ್ ಮಾಡಿ ಫ್ಯಾನ್ಸ್ ಎಂಜಾಯ್ ಮಾಡಿದ್ದಾರೆ.
ಉಪಾಸನಾ ಸಂಭ್ರಮಾಚರಣೆ
ಇತ್ತೀಚೆಗೆ ಪೇಪರ್ ಹರಿದು ಗಾಳಿಯಲ್ಲಿ ಎಸೆದು ಸಂಭ್ರಮಾಚರಣೆ ಮಾಡುವುದು ಹೆಚ್ಚಾಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಇದು ಮತ್ತಷ್ಟು ಜೋರಾಗಿ ಇರುತ್ತದೆ. ಅಭಿಮಾನಿಗಳ ಜೊತೆ ರಾಮ್‌ಚರಣ್ ಪತ್ನಿ ಉಪಸನಾ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಆಕೆ ಕೂಡ ತೆರೆಮೇಲೆ ಪತಿಯನ್ನು ಕಂಡು ಪೇಪರ್ ಹರಿದು ಎಸೆದು ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ಹೈದರಾಬಾದ್ ಶ್ರೀರಾಮುಲು ಚಿತ್ರಮಂದಿರದಲ್ಲಿ ಆಪ್ತರ ಜೊತೆ ಉಪಾಸನಾ 'ಪೆದ್ದಿ' ಸಿನಿಮಾ ನೋಡಿದ್ದಾರೆ.
ಮೆಗಾ ಫ್ಯಾಮಿಲಿ ಸಿನಿಮಾ ವೀಕ್ಷಣೆ
ಚಿರಂಜೀವಿ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ಫ್ಯಾಮಿಲಿ ಸದಸ್ಯರು 'ಪೆದ್ದಿ' ಸಿನಿಮಾ ವೀಕ್ಷಿಸಿದ್ದಾರೆ. ನಿರ್ದೇಶಕ ರಾಜಮೌಳಿ ಪತ್ನಿ ಹಾಗೂ ಮಗನ ಸಮೇತ ಸಿನಿಮಾ ನೋಡಿದ್ದಾರೆ. ಚಿರಂಜೀವಿ ಸಿನಿಮಾ ವೀಕ್ಷಿಸಿ ಟ್ವೀಟ್ ಮಾಡಿದ್ದಾರೆ. "ಚಿತ್ರೀಕರಣಕ್ಕಾಗಿ ನಾನು ಪೊಲ್ಲಾಚಿಯಲ್ಲಿದ್ದರೂ, ನನ್ನ ಹೃದಯ 'ಪೆದ್ದಿ' ಜೊತೆಗಿದೆ. ಕಳೆದ ಎರಡು ವರ್ಷಗಳಿಂದ ಈ ಚಿತ್ರಕ್ಕಾಗಿ ಚರಣ್ ಅವರು ಪಟ್ಟ ಶ್ರಮ ಮತ್ತು ಸಮರ್ಪಣೆಯನ್ನು ನಾನು ನೋಡಿದ್ದೇನೆ. ಪ್ರೇಕ್ಷಕರಿಂದ ಚಿತ್ರಕ್ಕೆ ಸಿಕ್ಕ ಪ್ರೀತಿ ಮತ್ತು ಮೆಚ್ಚುಗೆಯನ್ನು ನೋಡಿದಾಗ, ಒಬ್ಬ ತಂದೆಯಾಗಿ ಮಾತ್ರವಲ್ಲದೆ ನಟನಾಗಿಯೂ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ಆ ಪಾತ್ರದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರು ಪಟ್ಟ ಶ್ರಮ, ಪರಿಶ್ರಮ ಮತ್ತು ಪ್ರಾಮಾಣಿಕತೆ ಪ್ರತಿಯೊಂದು ದೃಶ್ಯದಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಯಶಸ್ಸು ಆ ಶ್ರಮಕ್ಕೆ ಪ್ರತಿಫಲವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಫ್ಯಾನ್ಸ್ ಡ್ಯಾನ್ಸ್
ಚಿತ್ರಮಂದಿರಗಳಲ್ಲಿ ರಾಮ್‌ಚರಣ್ ಅಭಿಮಾನಿಗಳ ಸಂಭ್ರಮಾಚರಣೆ ಹೇಳುವುದೇ ಬೇಡ. ಯುವತಿಯೊಬ್ಬಳು 'ರೈ ರೈ ರಾರ' ಹಾಡಿಗೆ ಬಿಂದಾಸ್ ಆಗಿ ಚಿತ್ರಮಂದಿರದ ಒಳಗೆ ಡ್ಯಾನ್ಸ್ ಮಾಡಿರುವುದು ವೈರಲ್ ಆಗ್ತಿದೆ.
ವಂಗಾ ಪ್ರತಿಕ್ರಿಯೆ
'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ 'ಪೆದ್ದಿ' ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರಮಂದಿರದಿಂದ ಹೊರಗಡೆ ಬರುವಾಗ ಅಭಿಮಾನಿಗಳು ಹೇಗಿದೆ ಎಂದು ಕೇಳಿದ್ದಕ್ಕೆ "ಚೆನ್ನಾಗಿದೆ" ಎಂದು ಹೇಳಿದ್ದಾರೆ. ಸದ್ಯ ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರಕಕೆ ಸಂದೀಪ್ ಆಕ್ಷನ್ ಕಟ್ ಹೇಳ್ತಿದ್ದಾರೆ.


Click it and Unblock the Notifications