"ಪ್ರತಿ ಭಾರತೀಯನು ಹೆಮ್ಮೆಪಡುವ ಸಂಗತಿ": ಆರ್‌ಆರ್‌ಆರ್ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
'ನಾಟು ನಾಟು' ಹಾಡಿಗಾಗಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬಲ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಬಾರಿ ಗೋಲ್ಡನ್ ಗ್ಲೋಬಲ್ ಪ್ರಶಸ್ತಿಗೆ ಆರ್‌ಆರ್‌ಆರ್ ಸಿನಿಮಾ 2 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್(ಮೂಲ ಗೀತೆ) ವಿಭಾಗದಲ್ಲಿ ಪ್ರಶಸ್ತಿ ಧಕ್ಕಿದೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪ್ರಧಾನಿ ಮೋದಿ ಆರ್‌ಆರ್‌ಆರ್ ಚಿತ್ರತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಆರ್‌ಆರ್‌ಆರ್ ತಂಡ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋವನ್ನು ಶೇರ್ ಮಾಡಿ, "ಇದು ಬಹಳ ವಿಶೇಷವಾದ ಸಾಧನೆ. ಕೀರವಾಣಿ, ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್‌ಗೆ ಅಭಿನಂದನೆ. ಅದೇ ರೀತಿ ರಾಜಮೌಳಿ, ಎನ್‌ಟಿಆರ್, ರಾಮ್‌ಚರಣ್ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವ ಪ್ರತಿ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ಮತ್ತವರ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ನೆಟ್ಟಿಗರು, ಅಭಿಮಾನಿಗಳ ಜೊತೆಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆ, ನಟಿ ರಮ್ಯಾ, ಶಾರುಕ್ ಖಾನ್, ರಣ್‌ವೀರ್ ಸಿಂಗ್, ಅಲ್ಲು ಅರ್ಜುನ್, ಚಿರಂಜೀವಿ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಮಾರ್ಚ್ 25ಕ್ಕೆ ಆರ್‌ಆರ್‌ಆರ್ ಸಿನಿಮಾ ತೆರೆಗಪ್ಪಳಿಸಿತ್ತು. ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ನಟಿಸಿದ್ದರು.

ರಾಜಮೌಳಿ ಬಹುಕೋಟಿ ವೆಚ್ಚದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಇಟ್ಟುಕೊಂಡು ಒಂದು ಕಾಲ್ಪನಿಕ ಕಥೆ ಕಟ್ಟಿ ಸಕ್ಸಸ್ ಕಂಡಿದ್ದರು. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿ ಬರೋಬ್ಬರು 1200 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇನ್ನು ಆರ್‌ಆರ್‌ಆರ್ ಸಿನಿಮಾ ಈ ಬಾರಿ ಆಸ್ಕರ್ ರೇಸ್‌ನಲ್ಲೂ ಇದೆ. ಯಾವುದಾದರೂ ವಿಭಾಗದಲ್ಲಿ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗುವ ನಿರೀಕ್ಷೆ ಇದೆ.


Click it and Unblock the Notifications











